ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಎ ಅಡಿ ಧರ್ಮಗುರುಗಳ ಬಂಧನ

ಎಚ್ಚರಿಕೆ ಹೊರತಾಗಿಯೂ ಯುವಕರನ್ನು ಪ್ರಚೋದಿಸುತ್ತಿದ್ದ ಆರೋಪ
Last Updated 18 ಸೆಪ್ಟೆಂಬರ್ 2022, 14:48 IST
ಅಕ್ಷರ ಗಾತ್ರ

ಶ್ರೀನಗರ: ಸಾರ್ವಜನಿಕ ಭದ್ರತಾ ಕಾಯ್ದೆ(ಪಿಎಸ್‌ಎ) ಅಡಿಇಬ್ಬರು ಪ್ರಮುಖ ಧರ್ಮಗುರುಗಳು ಮತ್ತು ನಿಷೇಧಿತ ಉಗ್ರ ಸಂಘಟನೆಯಾದ ಜಮಾತ್‌–ಇ–ಇಸ್ಲಾಮಿಗೆ ಸೇರಿದ್ದಾರೆ ಎನ್ನಲಾದ ಐವರನ್ನು ಮೂರು ದಿನಗಳ ಹಿಂದೆ ಬಂಧಿಸಲಾಗಿದೆ ಎಂದು ಕಾಶ್ಮೀರದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ವಿಜಯ್‌ ಕುಮಾರ್‌ ಅವರು ಭಾನುವಾರ ತಿಳಿಸಿದರು.

‘ಬಂಧಿತರೆಲ್ಲರೂ ಇಸ್ಲಾಂ ಧರ್ಮದ ವಿವಿಧ ಧಾರ್ಮಿಕ ಸಂಘಟನೆಗಳಿಗೆ ಸೇರಿರುವವರು.ಅವರು ಯುವಕರನ್ನು ಪ್ರಚೋದಿಸುತ್ತಿದ್ದರು ಎಂಬುದಕ್ಕೆ ನಮ್ಮ ಬಳಿ ಸಾಕಷ್ಟು ಆಧಾರಗಳಿವೆ. ಯುವಕರನ್ನು ಪ್ರಚೋದಿಸದಂತೆ ಹಲವು ಬಾರಿ ಎಚ್ಚರಿಕೆ ನೀಡಿದ ಬಳಿಕವೂ ಅವರು ಅದನ್ನು ನಿಲ್ಲಿಸಿರಲಿಲ್ಲ. ಹಾಗಾಗಿ ಪಿಎಸ್‌ಎ ಅಡಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಯಿತು.ಪೊಲೀಸರಿಗೆ ಉಳಿದಿರುವ ಕಡೆಯ ಮಾರ್ಗ ಇದಾಗಿದೆ. ಅಗತ್ಯ ಬಂದರೆ ಬಂಧಿತರ ಕುರಿತ ಮಾಹಿತಿಯನ್ನು ಮಾಧ್ಯಮಗಳ ಎದುರು ಹಂಚಿಕೊಳ್ಳಬಹುದು’ ಎಂದು ವಿಜಯ್‌ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ಪಿಎಸ್‌ಎ ಅಡಿ ಆರೋಪಿಯನ್ನು ವಿಚಾರಣೆ ಇಲ್ಲದೆಯೇ ಎರಡು ವರ್ಷಗಳ ವರೆಗೆ ಜೈಲಿನಲ್ಲಿ ಇರಿಸುವ ಅಧಿಕಾರ ಅಧಿಕಾರಿಗಳಿಗೆ ಇದೆ ಎಂದು ಅವರು ಹೇಳಿದರು.

ಬಂಧಿಸಬೇಕಿರುವವರ ಪಟ್ಟಿಯಲ್ಲಿ ಮತ್ತಷ್ಟು ಧರ್ಮಗುರುಗಳ ಹೆಸರು ಇದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನಷ್ಟು ಧರ್ಮಗುರುಗಳ ವಿರುದ್ಧ ಪೊಲೀಸರ ಬಳಿ ಸಾಕ್ಷ್ಯಗಳು ಇವೆ. ಅದರ ಪ್ರಕಾರ ಕ್ರಮ ಜರುಗಿಸುತ್ತೇವೆ ಎಂದರು.

‘ಕಾನೂನು ಸುವ್ಯವಸ್ಥೆ ಕಾಪಾಡುವುದು ಕೇವಲ ಪೊಲೀಸರ ಜವಾಬ್ದಾರಿಯಲ್ಲ. ಅದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ವರ್ಷ ಕಾನೂನು ಸುವ್ಯವಸ್ಥೆಯನ್ನು ಅತ್ಯುತ್ತಮವಾಗಿ ನಿರ್ವಹಿಸಲಾಗಿದೆ. ಇಂಟರ್‌ನೆಟ್‌ ಕಡಿತ ಮಾಡಲಾಗಿಲ್ಲ. ಮಾರುಕಟ್ಟೆಗಳು, ಶಾಲೆ, ಕಾಲೇಜುಗಳನ್ನು ಮುಚ್ಚಲಾಗಿಲ್ಲ. ಇದರಿಂದ ಸಮಾಜಕ್ಕೇ ಅನುಕೂಲ. ಇದೇ ಪರಿಸರವನ್ನು ನಾವು ನಿರ್ವಹಿಸಿಕೊಂಡು ಹೋಗಬೇಕಿದೆ’ ಎಂದು ವಿಜಯ್‌ ಕುಮಾರ್‌ ಹೇಳಿದರು.

ಜಮಾತ್‌–ಇ–ಇಸ್ಲಾಮಿ ಗುಪ್ತವಾಗಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬ ಆರೋಪಗಳಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT