ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣದಲ್ಲಿ ಟ್ವಿಟರ್ ಹಸ್ತಕ್ಷೇಪ: ರಾಹುಲ್ ಗಾಂಧಿ ಆಕ್ರೋಶ

ಟ್ವಿಟರ್ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
Last Updated 13 ಆಗಸ್ಟ್ 2021, 20:12 IST
ಅಕ್ಷರ ಗಾತ್ರ

ನವದೆಹಲಿ : ‘ದೇಶದ ರಾಜಕಾರಣದಲ್ಲಿ ಟ್ವಿಟರ್ ಹಸ್ತಕ್ಷೇಪ ಮಾಡುತ್ತಿದೆ. ನನ್ನ ಟ್ವಿಟರ್ ಖಾತೆಯನ್ನು ಲಾಕ್ ಮಾಡಿರುವುದು, ದೇಶದ ಪ್ರಜಾಸತ್ತಾತ್ಮಕ ರಚನೆಯ ಮೇಲೆ ನಡೆಸಿದ ದಾಳಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಿಡಿಕಾರಿದ್ದಾರೆ.

ದೆಹಲಿ ಅತ್ಯಾಚಾರ ಸಂತ್ರಸ್ತ ಬಾಲಕಿಯ ಕುಟುಂಬದವರ ಗುರುತನ್ನು ಬಹಿರಂಗಪಡಿಸಿದ ಆರೋಪದಲ್ಲಿ ಅವರ ಟ್ವಿಟರ್ ಖಾತೆಯನ್ನು ‘ಲಾಕ್’ ಮಾಡಲಾಗಿದೆ. ಟ್ವಿಟರ್‌ನ ಈ ಕ್ರಮದ ವಿರುದ್ಧ ರಾಹುಲ್ ಗಾಂಧಿ ಶುಕ್ರವಾರ ಹರಿಹಾಯ್ದಿದ್ದಾರೆ. ಈ ಸಂಬಂಧ ಅವರು ತಮ್ಮ ಫೇಸ್‌ಬುಕ್ ಖಾತೆ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

‘ಟ್ವಿಟರ್ ತಟಸ್ಥ ಮತ್ತು ವಸ್ತುನಿಷ್ಠ ಸಂಸ್ಥೆಯಾಗಿ ಉಳಿದಿಲ್ಲ. ಅದು ಈಗ ಪಕ್ಷಪಾತಿಯಾಗಿದೆ. ಸರ್ಕಾರ ಏನು ಹೇಳುತ್ತದೆಯೋ ಅದನ್ನು ಕೇಳುವ ಸಂಸ್ಥೆಯಾಗಿದೆ. ಟ್ವಿಟರ್, ಸರ್ಕಾರಕ್ಕೆ ಕೃತಜ್ಞ ಸಂಸ್ಥೆಯಾಗಿದೆಯೇ ಎಂಬುದನ್ನು ದೇಶದ ಜನರು ಪ್ರಶ್ನಿಸಬೇಕಿದೆ’ ಎಂದು ರಾಹುಲ್ ಹೇಳಿದ್ದಾರೆ.

ಲಾಕ್ ಆದ ಖಾತೆ: ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ಸ್ಥಗಿತಗೊಳಿಸಿಲ್ಲ. ಬದಲಿಗೆ ತಾತ್ಕಾಲಿಕವಾಗಿ ‘ಲಾಕ್’ ಮಾಡಲಾಗಿದೆ ಎಂದು ಟ್ವಿಟರ್ ಹೇಳಿದೆ.

ಲಾಕ್ ಆದ ಖಾತೆಯ ಮೂಲಕ ಯಾವುದೇ ಟ್ವೀಟ್ ಮತ್ತು ರಿಟ್ವೀಟ್ ಮಾಡಲು ಸಾಧ್ಯವಿಲ್ಲ. ಬದಲಿಗೆ ಫಾಲೋವರ್‌ಗಳಿಗೆ ವೈಯಕ್ತಿಕ ಸಂದೇಶ ಕಳುಹಿಸಬಹುದು.

ಫೇಸ್‌ಬುಕ್‌ಗೆ ಪತ್ರ:

‘ರಾಹುಲ್ ಗಾಂಧಿ ಅವರ ಇನ್‌ಸ್ಟಾಗ್ರಾಂ ಖಾತೆಯ ವಿರುದ್ಧವೂ ಕ್ರಮ ತೆಗೆದುಕೊಳ್ಳಿ’ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್‌), ಇನ್‌ಸ್ಟಾಗ್ರಾಂ ಮಾತೃಸಂಸ್ಥೆ ಫೇಸ್‌ಬುಕ್‌ಗೆ ಪತ್ರ ಬರೆದಿದೆ.

‘ಅತ್ಯಾಚಾರ ಸಂತ್ರಸ್ತ ಬಾಲಕಿಯ ಕುಟುಂಬದವರ ವಿವರವನ್ನು ಬಹಿರಂಗಪಡಿಸುವಂತಹ ಚಿತ್ರ ಮತ್ತು ವಿಡಿಯೊವನ್ನು ರಾಹುಲ್ ಗಾಂಧಿ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಬಾಲ ನ್ಯಾಯ ಕಾಯ್ದೆ-2015ರ ಸೆಕ್ಷನ್‌ 74 ಮತ್ತು ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ 2012ರ ಸೆಕ್ಷನ್ 23ರ ಸ್ಪಷ್ಟ ಉಲ್ಲಂಘನೆ. ಈ ಎರಡೂ ಸೆಕ್ಷನ್‌ಗಳು ಲೈಂಗಿಕ ದೌರ್ಜನ್ಯ ಸಂತ್ರಸ್ತ ಮಕ್ಕಳ ವಿವರ, ಕುಟುಂಬದ ವಿವರ ಬಹಿರಂಗಪಡಿಸುವುದನ್ನು ನಿಷೇಧಿಸುತ್ತದೆ. ರಾಹುಲ್ ಗಾಂಧಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಂತ್ರಸ್ತ ಬಾಲಕಿಯ ಕುಟುಂಬದವರ ಗುರುತು ಬಹಿರಂಗಪಡಿಸಿದ್ದಾರೆ. ಆ ಖಾತೆಯನ್ನು ಸ್ಥಗಿತಗೊಳಿಸಿ. ವಿಡಿಯೊ ಮತ್ತು ಚಿತ್ರವನ್ನು ತೆಗೆದುಹಾಕಿ’ ಎಂದು ಎನ್‌ಸಿಪಿಸಿಆರ್ ತನ್ನ ಪತ್ರದಲ್ಲಿ ವಿವರಿಸಿದೆ.

ಆಗಸ್ಟ್ 4ರಂದು ಇಂಥದ್ದೇ ಪತ್ರವನ್ನು ಎನ್‌ಸಿಪಿಸಿಆರ್‌, ಟ್ವಿಟರ್‌ಗೆ ಬರೆದಿತ್ತು. ಆ ಪತ್ರದ ಆಧಾರದಲ್ಲೇ ಟ್ವಿಟರ್, ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ‘ಲಾಕ್’ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT