ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಮೀನುಗಾರರೊಂದಿಗೆ ಸಂವಾದ ನಡೆಸಿದ ರಾಹುಲ್

ಎರಡು ದಿನಗಳ ಕೇರಳ ರಾಜ್ಯ ಪ್ರವಾಸದಲ್ಲಿ ಕಾಂಗ್ರೆಸ್ ನಾಯಕ
Last Updated 24 ಫೆಬ್ರುವರಿ 2021, 6:44 IST
ಅಕ್ಷರ ಗಾತ್ರ

ಕೊಲ್ಲಂ: ಚುನಾವಣೆಯ ಹೊಸ್ತಲಲ್ಲಿರುವ ಕೇರಳದಲ್ಲಿ ಕಳೆದ ಎರಡು ದಿನಗಳಿಂದ ಪ್ರವಾಸ ಕೈಗೊಂಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಬುಧವಾರ ಜಿಲ್ಲೆಯ ತಂಗ್ಸೆರಿ ಕಡಲ ತೀರದಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಿದರು.

ನೀಲಿ ಟೀ ಶರ್ಟ್‌ ಮತ್ತು ಖಾಕಿ ಪ್ಯಾಂಟ್ ಧರಿಸಿದ್ದ ರಾಹುಲ್ ಗಾಂಧಿ ಮುಂಜಾನೆ 4.30ರ ಸುಮಾರಿಗೆ ಇಲ್ಲಿನ ವಾಡಿ ಬೀಚ್‌ನಿಂದ ತಮ್ಮ ಪ್ರವಾಸ ಆರಂಭಿಸಿದರು. ನಂತರ ಸಮುದ್ರದಲ್ಲಿ ಮೀನುಗಾರರ ಜತೆ ದೋಣಿಯಲ್ಲಿ ಸಾಗುತ್ತಾ ಸುಮಾರು ಒಂದೂವರೆ ಗಂಟೆ ಮಾತುಕತೆ ಅವರೊಂದಿಗೆ ನಡೆಸಿದರು.

ಮೀನುಗಾರರ ಜೀವನದ ರೀತಿ, ನೀತಿ, ಎದುರಿಸುವ ಕಷ್ಟಗಳು ಸೇರಿದಂತೆ ಮೀನುಗಾರ ಸಮುದಾಯದವರ ಅನುಭವಗಳನ್ನು ಕೇಳುತ್ತಾ, ಸಮುದ್ರಕ್ಕೆ ಬಲೆ ಬೀಸಿ ಮೀನು ಹಿಡಿಯಲು ಯತ್ನಿಸಿದರು ರಾಹುಲ್.

ಈ ಮೀನುಗಾರರೊಂದಿಗಿನ ಸಮುದ್ರ ಯಾನದಲ್ಲಿ ರಾಹುಲ್ ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮತ್ತು ಸಂಸದ ಹಾಗೂ ರಾಷ್ಟ್ರೀಯ ಮತ್ಸ್ಯ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಟಿ. ಎನ್. ಪ್ರತಾಪ್ ಅವರು ಜತೆಯಾಗಿದ್ದರು.

ಸಮುದ್ರದಿಂದ ವಾಪಸ್ ದಂಡೆಯತ್ತ ಬರುವಾಗ, ದಂಡೆಯಲ್ಲಿ ನಿಂತಿದ್ದ ನಾಗರಿಕರತ್ತ ರಾಹುಲ್ ಕೈ ಬೀಸಿದರು.

‘ನಾನು ಇಂದು ಮುಂಜಾನೆ, ನನ್ನ ಸಹೋದರರೊಂದಿಗೆ ಸಮುದ್ರಕ್ಕೆ ತೆರಳಿದ್ದೆ. ದೋಣಿಯಲ್ಲಿ ಸಮುದ್ರಕ್ಕೆ ಹೋಗಿ ಹಿಂತಿರುಗಿದ ನಂತರ, ಮೀನುಗಾರ ಸಹೋದರರು ಬಹಳ ಅಪಾಯದಲ್ಲಿ ಬದುಕುತ್ತಿದ್ದಾರೆ ಎಂದೆನಿಸಿತು. ಇವರು ಪರಿಶ್ರಮದೊಂದಿಗೆ ಮೀನು ಹಿಡಿದು ತಂದು ಮಾರುತ್ತಾರೆ. ಬೇರೆಯವರು ಲಾಭ ಪಡೆಯುತ್ತಾರೆ‘ ಎಂದು ರಾಹುಲ್ ತಮ್ಮ ಅನುಭವ ಹಂಚಿಕೊಂಡಿದರು.

‘ನಾನು ಮೀನು ಹಿಡಿಯಲು ಪ್ರಯತ್ನಿಸಿದೆ. ನನಗೆ ಸಿಕ್ಕಿದ್ದು ಒಂದೇ ಮೀನು. ಇಷ್ಟು ಸಮಯ, ಶ್ರಮ ಹಾಕಿ ಬಲೆ ಬೀಸಿದರೂ ಸಿಕ್ಕಿದ್ದು ಏನೂ ಇಲ್ಲ. ಇದು ನನ್ನ ಅನುಭವ‘ ಎಂದು ಮಾತು ಪೋಣಿಸಿದರು ರಾಹುಲ್.

‘ಮೀನುಗಾರಿಕೆಗಾಗಿ ಪ್ರತ್ಯೇಕ ಸಚಿವಾಲಯ ರಚಿಸಬೇಕೆಂಬ ಯೋಚನೆ ಇದೆ. ಇದರಿಂದ ಮೀನುಗಾರ ಸಮುದಾಯವನ್ನು ರಕ್ಷಿಸುವ ಜತೆಗೆ, ಅವರ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಸೇರಿಸುವ ಸಂಬಂಧ ಕೇರಳದ ಯುಡಿಎಫ್ ನಾಯಕರು ಶೀಘ್ರದಲ್ಲೇ ಮೀನುಗಾರ ಸಮುದಾಯದೊಂದಿಗೆ ಈ ಕುರಿತು ಚರ್ಚೆ ನಡೆಸಲಿದ್ದಾರೆ‘ ಎಂದು ಹೇಳಿದರು.

ಇದೇ ವೇಳೆ, ಆಳ ಸಮುದ್ರ ಮೀನುಗಾರಿಕೆಯ ಗುತ್ತಿಗೆಯನ್ನು ಕೇರಳ ಸರ್ಕಾರ ವಿದೇಶಿ ಕಂಪನಿಗೆ ನೀಡಿರುವ ವಿರುದ್ಧ ಎದ್ದಿರುವ ವಿವಾದದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ‘ಈ ಬಗ್ಗೆ ಸರ್ಕಾರ ಏನು ಮಾಡುತ್ತದೆ ಕಾದು ನೋಡೋಣ‘ ಎಂದರು.

ಕೇರಳದಲ್ಲಿರುವ ಎಡಪಕ್ಷಗಳ ನೇತೃತ್ವದ ಸರ್ಕಾರ ಅಮೆರಿಕದ ಕಂಪನಿಯೊಂದರ ಜೊತೆಗೆ ಆಳ ಸಮುದ್ರದ ಮೀನುಗಾರಿಕೆ ಒಪ್ಪಂದ ಮಾಡಿಕೊಂಡಿರುವುದು ಈಗ ಚುನಾವಣಾ ವಿಷಯವಾಗಿದೆ. ಸರ್ಕಾರದ ಈ ಕ್ರಮದ ವಿರುದ್ಧ ಕಾಂಗ್ರೆಸ್ – ಯುಡಿಎಫ್ ದನಿ ಎತ್ತಿವೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಮೀನುಗಾರರೊಂದಿಗಿನ ನಡೆಸುತ್ತಿರುವ ಈ ಸಂವಾದ ಮಹತ್ವ ಪಡೆದುಕೊಂಡಿದೆ.

ಈ ವಿವಾದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುತ್ತಿಗೆ ಪಡೆದ ಅಮೆರಿಕ ಮೂಲದ ಇಎಂಸಿಸಿ ಮತ್ತು ಕೇರಳ ರಾಜ್ಯ ಒಳನಾಡು ಸಂಚಾರ ನಿಗಮ (ಕೆಎಸ್‌ಐಎನ್‌ಸಿ) ನಡುವಿನ ಒಪ್ಪಂದವನ್ನು ರದ್ದುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT