ಭಾನುವಾರ, ನವೆಂಬರ್ 28, 2021
20 °C
ಉತ್ತರಾಖಂಡದಲ್ಲಿ 52, ಕೇರಳದಲ್ಲಿ 39 ಮಂದಿ ಸಾವು: ಹಲವು ಜನರಿಗಾಗಿ ಮುಂದುವರಿದ ಶೋಧ

ಉತ್ತರಾಖಂಡ-ಕೇರಳ | ಮಳೆ ಬಿಡುವು: ರಕ್ಷಣೆ, ಪರಿಹಾರವೇ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡೆಹ್ರಾಡೂನ್‌/ತಿರುವನಂತಪುರ (ಪಿಟಿಐ): ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಿಂದಾಗಿ ನಲುಗಿರುವ ಉತ್ತರಾಖಂಡ ಮತ್ತು ಕೇರಳದಲ್ಲಿ ಬುಧವಾರ ಮಳೆಯು ಅಲ್ಪ ಬಿಡುವು ನೀಡಿತ್ತು. ಹಾಗಾಗಿ, ರಕ್ಷಣೆ ಮತ್ತು ಪರಿಹಾರ ಕಾರ್ಯ ಭರದಿಂದ ನಡೆದಿದೆ. 

ಸತತ ಎರಡು ದಿನ ಸುರಿದ ಮಳೆಯ ಪರಿಣಾಮದಿಂದ ಚೇತರಿಸಿಕೊಳ್ಳಲು ಉತ್ತರಾಖಂಡಕ್ಕೆ ಇನ್ನೂ ಬಹಳ ಕಾಲ ಬೇಕಾಗಬಹುದು. ಮಳೆಯಿಂದಾಗಿ ಭಾನುವಾರದಿಂದ ಬುಧವಾರದವರೆಗೆ 52 ಮಂದಿ ಮೃತಪಟ್ಟಿದ್ಧಾರೆ. ಮನೆಗಳು ಕುಸಿದಿದ್ದು ಹಲವು ಮಂದಿ ಅವಶೇಷಗಳಡಿ ಸಿಲುಕಿರುವ ಆತಂಕ ವ್ಯಕ್ತವಾಗಿದೆ. 5 ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಮುಂದುವರಿದಿದೆ. 

ಭೂಕುಸಿತದಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹಲವು ರಸ್ತೆಗಳಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಇವೆ. ಹಲವು ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಸ್ಥಗಿತವಾಗಿದೆ. 

ಮಳೆಯ ಅಬ್ಬರ ನಿಂತಿದೆ. ಆದರೆ, ಅವಶೇಷಗಳಡಿಯಲ್ಲಿ ಸಿಲುಕಿದವರ ಪತ್ತೆ ಮತ್ತು ರಕ್ಷಣೆ, ವಿದ್ಯುತ್‌ ಸಂಪರ್ಕ ಮರಸ್ಥಾಪನೆಯು ದೊಡ್ಡ ಸವಾಲಾಗಿದೆ. ಮಳೆಯಿಂದ ಭಾರಿ ಸಮಸ್ಯೆಗೆ ಒಳಗಾಗಿದ್ದ ಪ್ರವಾಸಿ ತಾಣ ನೈನಿತಾಲ್‌ ಸಹಜ ಸ್ಥಿತಿಗೆ ಮರಳುತ್ತಿದೆ.  

ಕೇರಳದಲ್ಲಿ ಮಳೆ ಮತ್ತು ಪ್ರವಾಹದ ಹೊಡೆತಕ್ಕೆ ಮೃತಪಟ್ಟವರ ಸಂಖ್ಯೆ 39ಕ್ಕೆ ಏರಿದೆ. ಆರು ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ. 217 ಮನೆಗಳು ನಾಶವಾಗಿವೆ. ಸಂತ್ರಸ್ತರಿಗಾಗಿ 304 ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ವಿಧಾನಸಭೆಗೆ ಬುಧವಾರ ಮಾಹಿತಿ ನೀಡಿದ್ದಾರೆ. 

3,851 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿತ್ತು. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ 11 ತಂಡಗಳು ವಿವಿಧ ಜಿಲ್ಲೆಗಳಲ್ಲಿ ಇವೆ. ಭಾರತೀಯ ಸೇನೆಯ ಸಿಬ್ಬಂದಿ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ಧಾರೆ. ವಾಯುಪಡೆ ಮತ್ತು ನೌಕಾಪಡೆಯ ಹೆಲಿಕಾಪ್ಟರ್‌ಗಳನ್ನು ಕೂಡ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. 

ಪ್ರವಾಹಪೀಡಿತ ಪ್ರದೇಶಗಳಿಂದ 1,300ಕ್ಕೂ ಹೆಚ್ಚು ಜನರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ರಕ್ಷಿಸಿದೆ. 

ಕುಮಾವೊನ್‌ ಪ್ರದೇಶವು ಭಾರಿ ಮಳೆಯಿಂದಾಗಿ ಅತಿ ಹೆಚ್ಚು ತೊಂದರೆಗೆ ಒಳಗಾಗಿದೆ. ಇಲ್ಲಿ ಹಲವು ಮನೆಗಳು ನೆಲಸಮವಾಗಿವೆ. ಹಲವು ಸೇತುವೆಗಳು ಕೊಚ್ಚಿ ಹೋಗಿವೆ. 

ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆ, ಉತ್ತರ ಪ್ರದೇಶದ ಲಖಿಂಪುರ–ಖೇರಿ, ಸೀತಾಪುರ, ವಾರಾಣಸಿ, ಗೋರಖಪುರ ಮತ್ತು ಬಹರೈಚ್‌ ಜಿಲ್ಲೆಗಳಲ್ಲಿಯೂ ಎನ್‌ಡಿಆರ್‌ಎಫ್‌ ತಂಡಗಳನ್ನು ನಿಯೋಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು