ಸೋಮವಾರ, ಸೆಪ್ಟೆಂಬರ್ 20, 2021
29 °C

ದೆಹಲಿಯಲ್ಲಿ ಭಾರಿ ಮಳೆ: ಒಂದೇ ದಿನದಲ್ಲಿ ಸುರಿದ ತಿಂಗಳ ಮಳೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬುಧವಾರ ಬೆಳಿಗ್ಗೆವರೆಗಿನ 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ 112.1 ಮಿಲಿ ಮೀಟರ್ ಮಳೆಯಾಗಿದೆ. ಕಳೆದ 19 ವರ್ಷಗಳಲ್ಲಿ ಸೆಪ್ಟೆಂಬರ್‌ನಲ್ಲಿ ದಾಖಲಾದ ಅತಿ ಹೆಚ್ಚಿನ ಮಳೆ ಪ್ರಮಾಣ ಇದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಬುಧವಾರ ಸಂಜೆಯ ಹೊತ್ತಿಗೆ ಮಳೆಯ ತೀವ್ರತೆ ಕಡಿಮೆಯಾಗಿದ್ದು, 7ರಂದು ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. 

ಬುಧವಾರ ಬೆಳಿಗ್ಗೆ 8.30ರಿಂದ ಆರಂಭವಾಗಿ, ಕೇವಲ ಮೂರು ಗಂಟೆಗಳಲ್ಲಿ ನಗರದಲ್ಲಿ 75.6 ಮಿ. ಮೀ. ಮಳೆ ಸುರಿಯಿತು. ಇದರರ್ಥ, ದೆಹಲಿಯು ತಿಂಗಳ ಆರಂಭದಲ್ಲೇ ವಾಡಿಕೆಗಿಂತ ಹೆಚ್ಚು ಮಳೆ ದಾಖಲಿಸಿದೆ. ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಸರಾಸರಿ 125.1 ಮಿ.ಮೀ. ಮಳೆಯಾಗುತ್ತದೆ.

2002ರ ಸೆಪ್ಟೆಂಬರ್ 13ರಂದು 126.8 ಮಿ.ಮೀ. ಮಳೆಯಾಗಿತ್ತು. 1963ರ ಸೆಪ್ಟೆಂಬರ್ 16ರಂದು 172.6 ಮಿ.ಮೀ. ಮಳೆಯಾಗಿದ್ದು ಸಾರ್ವಕಾಲಿಕ ದಾಖಲೆ.  ಭಾರಿ ಮಳೆಯಿಂದಾಗಿ ಚಾಣಕ್ಯಪುರಿಯ ರಾಜತಾಂತ್ರಿಕ ಪ್ರದೇಶ ಸೇರಿ ಹಲವು ಪ್ರದೇಶಗಳಲ್ಲಿ ನೀರು ನಿಂತಿತ್ತು. ನಗರದ ಕೆಲವು ಭಾಗಗಳಲ್ಲಿ ಸಂಚಾರದ ಮೇಲೆ ಪರಿಣಾಮ ಬೀರಿತು. ಬುಧವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 2.30ರ ನಡುವೆ ಅಂದರೆ, ಕೇವಲ ಆರು ಗಂಟೆಗಳಲ್ಲಿ 84 ಮಿ.ಮೀ. ಮಳೆಯಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದರಿಂದ ಐಟಿಒ, ರಿಂಗ್ ರೋಡ್, ಐಪಿ ಎಸ್ಟೇಟ್ ಫ್ಲೈಓವರ್, ಧೌಲಾ ಬಳಿ ಸಂಚಾರ ದಟ್ಟಣೆ ಉಂಟಾಯಿತು.

‘ಎರಡು ಮೂರು ದಿನಗಳ ಮುಂಚಿತವಾಗಿ ದೆಹಲಿಯಂತಹ ಸಣ್ಣ ಪ್ರದೇಶಕ್ಕೆ ನಿಖರವಾದ ಮುನ್ಸೂಚನೆಗಳನ್ನು ನೀಡುವುದು ಕಷ್ಟ’ ಎಂದು ತಜ್ಞರು ಹೇಳಿದ್ದಾರೆ.

ಹವಾಮಾನ ಬದಲಾವಣೆಯಿಂದಾಗಿ ಮುಂಗಾರು ಮಳೆಯ ಸಂರಚನೆಯಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಖಾಸಗಿ ಹವಾಮಾನ  ಸಂಸ್ಥೆ ಸ್ಕೈಮೆಟ್‌ನ ಉಪಾಧ್ಯಕ್ಷ ಮಹೇಶ್ ಪಾಲಾವತ್ ಹೇಳಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಮಳೆ ಸುರಿಯುವ ದಿನಗಳು ಕಡಿಮೆಯಾಗಿದ್ದು, ವ್ಯತಿರಿಕ್ತ ವಿದ್ಯಮಾನಗಳು ಹೆಚ್ಚುತ್ತಿವೆ ಎಂದಿದ್ದಾರೆ.

ಇಂತಹ ಮಳೆಯಿಂದ ಅಂತರ್ಜಲ ಮರುಪೂರಣವಾಗುವ ಬದಲು, ತಗ್ಗು ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗುತ್ತದೆ. ನಾಲ್ಕೈದು ದಿನಗಳಲ್ಲಿ ನಿಧಾನವಾಗಿ ಮಳೆ ಬಂದರೆ ನೀರು ಭೂಮಿಯಾಳಕ್ಕೆ ಇಂಗುತ್ತದೆ. ಆದರೆ ರಭಸದ ಮಳೆಯಾದಲ್ಲಿ, ಮಳೆನೀರು ರಭಸವಾಗಿ ಹರಿದುಹೋಗುತ್ತವೆ ಎಂದು ಪಲಾವತ್ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು