ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರು ಪರಿಶೀಲಿಸುವ ಅಧಿಕಾರ ಒಬ್ಬ ಸದಸ್ಯನಿಗೆ ನೀಡಬಹುದು: ರೆರಾಗೆ ‘ಸುಪ್ರೀಂ‘ ಸೂಚನೆ

Last Updated 13 ನವೆಂಬರ್ 2021, 6:32 IST
ಅಕ್ಷರ ಗಾತ್ರ

ನವದೆಹಲಿ: ಮನೆ/ಫ್ಲಾಟ್‌ ಖರೀದಿಸುವ ಗ್ರಾಹಕರು ಬಿಲ್ಡರ್‌ ವಿರುದ್ಧದ ದೂರು ಪರಿಶೀಲಿಸುವ ಅಧಿಕಾರವನ್ನು ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರವು (ರೆರಾ), ತನ್ನ ಸದಸ್ಯರೊಬ್ಬರಿಗೆ ನೀಡಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ತ್ರಿಸದಸ್ಯ ಪೀಠವು, ‘ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ 2016ರ ಸೆಕ್ಷನ್ 81, ಪ್ರಾಧಿಕಾರಕ್ಕೆ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಕಾರ್ಯಭಾರ ಒಪ್ಪಿಸುವ ಅಧಿಕಾರ ನೀಡಲಿದೆ’ ಎಂದಿದೆ.

ಗ್ರಾಹಕರ ದೂರು ಆಧರಿಸಿ ಪ್ರಾಧಿಕಾರ ಅಥವಾ ಪ್ರಾಧಿಕಾರ ನಿಯೋಜಿಸುವ ಸದಸ್ಯ ಹೊರಡಿಸುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಲೆಕ್ಕಾಚಾರ ಅಥವಾ ಗ್ರಾಹಕರಿಗೆ ಹಿಂದಿರುಗಿಸಬೇಕಾದ ಮೊತ್ತ ಲೆಕ್ಕಹಾಕುವಲ್ಲಿ ಲೋಪ ಕುರಿತಂತೆ ಮೇಲ್ಮನವಿ ಸಲ್ಲಿಸಬಹುದು ಎಂದೂ ಪೀಠ ಹೇಳಿದೆ.

’2016ರ ಕಾಯ್ದೆಯ ಸೆಕ್ಷನ್ 81ಅನ್ವಯ ಸದಸ್ಯರೊಬ್ಬರಿಗೆ ಪ್ರಾಧಿಕಾರವು ದೂರು ಆಲಿಸುವ ಅವಕಾಶ ನೀಡಬಹುದಾಗಿದೆ. ದೂರು ಆಲಿಕೆ ಬಗ್ಗೆ ಸೆಕ್ಷನ್‌ 31ರಡಿ ಸ್ಪಷ್ಟ ವ್ಯಾಖ್ಯಾನವಿದೆ. ಇಂಥ ಅಧಿಕಾರ ಪ್ರಾಧಿಕಾರಕ್ಕೆ ಕಾಯ್ದೆಯಡಿ ದತ್ತವಾಗಿದೆ’ ಎಂದು ಸ್ಪಷ್ಟಪಡಿಸಿದೆ.

ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 2016 (ರೆರಾ) ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಅಂದರೆ, ‘ಯೋಜನೆ ಪೂರ್ಣಗೊಂಡಿದೆ ಪ್ರಮಾಣಪತ್ರ’ ನೀಡದಿರುವ, ಚಾಲ್ತಿಯಲ್ಲಿರುವ ಎಲ್ಲ ಯೋಜನೆಗಳಿಗೆ ಅನ್ವಯವಾಗಲಿದೆ ಎಂದಿದೆ.

ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ ಮತ್ತು ಅನಿರುದ್ಧ ಬೋಸ್ ಅವರು ಪೀಠದ ಇತರ ಸದಸ್ಯರಾಗಿದ್ದರು. ಪ್ರಾಧಿಕಾರ ಅಥವಾ ಪ್ರಾಧಿಕಾರ ನಿಯೋಜಿಸಿದ ವ್ಯಕ್ತಿಯ ಆದೇಶದ ಅನುಸಾರ ಗೃಹ ಖರೀದಿ ಗಾಹಕರಿಗೆ ಮರುಪಾವತಿಸಬೇಕಾದ ಹಣವನ್ನು ಕಾಯ್ದೆಯ ಸೆಕ್ಷನ್‌ 40 (1)ರ ಅನುಗುಣವಾಗಿ ವಸೂಲು ಮಾಡಬೇಕು ಎಂದು ಪೀಠವು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT