ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಂಡ ಭಾರತ ಒಗ್ಗೂಡಿಸುವಿಕೆ ಅವಶ್ಯವಿದೆ: ಮೋಹನ್‌ ಭಾಗವತ್‌

Last Updated 25 ಫೆಬ್ರುವರಿ 2021, 12:21 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ‘ವಿಶ್ವದ ಕಲ್ಯಾಣಕ್ಕಾಗಿ ಅದ್ಭುತವಾದ ಅಖಂಡ ಭಾರತವನ್ನು ಮತ್ತೊಮ್ಮೆ ಒಗ್ಗೂಡಿಸುವ ಅಗತ್ಯವಿದೆ. ಇದಕ್ಕಾಗಿ ರಾಷ್ಟ್ರಪ್ರೇಮ ಜಾಗೃತಗೊಳಿಸುವ ಅವಶ್ಯಕತೆ ಇದೆ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಗುರುವಾರ ಇಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಅಖಂಡ ಭಾರತ’ದ ಒಗ್ಗೂಡುವಿಕೆಯು ಬಲ ಪ್ರಯೋಗದಿಂದ ಆಗುವುದಿಲ್ಲ, ಆದರೆ, ಅದು ಮಾನವೀಯತೆ ಸಾರುವ ಹಿಂದೂಧರ್ಮದಿಂದ ಮಾತ್ರ ಸಾಧ್ಯವಾಗಲಿದೆ. ದೇಶದಿಂದ ವಿಭಜನೆಗೊಂಡು ದೀರ್ಘ ಸಮಯದಿಂದ ಹೊರಗುಳಿದಿರುವ ಪಾಕಿಸ್ತಾನದಂತಹ ದೇಶಗಳು ಇಂದು ಸಂಕಷ್ಟದಲ್ಲಿವೆ. ಈ ಎಲ್ಲ ದೇಶಗಳಿಗೂ ಇನ್ನು ಮುಂದೆ ಅಖಂಡ ಭಾರತದ ಅಗತ್ಯ ಹೆಚ್ಚಿರಲಿದೆ’ ಎಂದು ಪ್ರತಿಪಾದಿಸಿದರು.

ಅಖಂಡ ಭಾರತ ಸಾಧ್ಯವೆಂದು ಒತ್ತಿ ಹೇಳಿದ ಭಾಗವತ್‌, ದೇಶ ವಿಭಜನೆಗೂ ಮೊದಲು ವಿಭಜನೆ ಸಾಧ್ಯವೇ? ಎಂದು ಕೆಲವರು ಅನುಮಾನ ಹೊಂದಿದ್ದರು. ಅಂದಿನ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಅವರ ಮುಂದೆ ಯಾರಾದರೂ ಪಾಕಿಸ್ತಾನ ಉದಯಿಸುತ್ತದೆಯೇ ಎನ್ನುವ ಪ್ರಶ್ನೆ ಮುಂದಿಟ್ಟರೆ, ಅದು ಮೂರ್ಖರ ಕನಸು ಎನ್ನುವ ಉತ್ತರ ಕೊಡುತ್ತಿದ್ದರು. ಆದರೆ, ವಿಭಜನೆ ನಡೆದುಹೋಯಿತು ಎಂದರು.

ಗಾಂಧಾರ ಅಪ್ಗಾನಿಸ್ತಾನವಾಯಿತು, ನಂತರ ಪಾಕಿಸ್ತಾನವೂ ಉದಯವಾಯಿತು. ಆದರೆ, ಇಂದು ಆ ರಾಷ್ಟ್ರಗಳಲ್ಲಿ ಶಾಂತಿ ನೆಲೆಸಿದೆಯೇ ಎಂದು ಪ್ರಶ್ನಿಸಿದ ಅವರು, ದೇಶದಿಂದ ವಿಭಜನೆಯಾಗಿ ಹೋದವರು ಸಂತೋಷವನ್ನಷ್ಟೇ ಅಲ್ಲ, ತಮ್ಮತನವನ್ನು ಕಳೆದುಕೊಂಡಿದ್ದಾರೆ. ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅದು ಇಂದಿಗೂ ಅವರಿಂದ ಸಾಧ್ಯವಾಗಿಲ್ಲ ಎಂದರು.

‘ಭಾರತದಿಂದ ಪ್ರತ್ಯೇಖವಾದವರನ್ನು ಪುನಃ ಒಗ್ಗೂಡಿಸುವುದು ಅವರನ್ನು ತುಳಿಯಲು ಅಲ್ಲ. ಏಕೆಂದರೆ ಎಂತಹದ್ದೇ ಸವಾಲುಗಳನ್ನು ಮೆಟ್ಟಿನಿಲ್ಲುವ ಧಾರಣಶಕ್ತಿ ಭಾರತಕ್ಕಿದೆ. ಕಠಿಣ ಸಮಸ್ಯೆಗಳನ್ನು ನಿವಾರಿಸಲು ಇಂದು ಇಡೀ ವಿಶ್ವವೇ ಭಾರತದ ಕಡೆಗೆ ನೋಡುತ್ತಿದೆ. ‘ವಸುಧೈವ ಕುಟುಂಬಕಂ’ ಎನ್ನುವುದರಲ್ಲಿ ನಂಬಿಕೆ ಇಟ್ಟಿರುವ ಭಾರತ ಮತ್ತೊಮ್ಮೆ ಜಗತ್ತಿಗೆ ಸುಖ ಮತ್ತು ಶಾಂತಿ ನೀಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT