ಶುಕ್ರವಾರ, ಜುಲೈ 30, 2021
24 °C

ತಮಿಳುನಾಡಲ್ಲಿ ಸೆ.15ರೊಳಗೆ 9ಜಿಲ್ಲೆಗಳ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ: ಸುಪ್ರೀಂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸೆಪ್ಟೆಂಬರ್‌ 15ರೊಳಗೆ 9 ಹೊಸ ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವಂತೆ ತಮಿಳುನಾಡು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.

ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಅನಿರುದ್ಧ ಬೋಸ್‌ ಅವರನ್ನೊಳಗೊಂಡ ರಜಾ ಪೀಠವು, ‘4 ಜಿಲ್ಲೆಗಳನ್ನು ವಿಂಗಡಿಸಿ ಹೊಸ ಜಿಲ್ಲೆಗಳನ್ನಾಗಿ ಪರಿವರ್ತಿಸಲಾಗಿರುವ ಒಂಬತ್ತು ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಿ, ಸೆಪ್ಟೆಂಬರ್‌ 15ರೊಳಗೆ ಫಲಿತಾಂಶ ಪ್ರಕಟಿಸಬೇಕು’ ಎಂದು ಹೇಳಿದೆ.

‘ಈ ಸ್ಥಳೀಯ ಸಂಸ್ಥೆಗಳಿಗೆ 4 ತಿಂಗಳೊಳಗೆ ಚುನಾವಣೆ ನಡೆಸುವಂತೆ ನ್ಯಾಯಾಲಯವು 2019ರ ಡಿಸೆಂಬರ್‌ 11ರಂದು ಆದೇಶಿಸಿತ್ತು. ಆದರೆ ಆಯೋಗವು ಇದಕ್ಕಾಗಿ 18 ತಿಂಗಳುಗಳು ತೆಗೆದುಕೊಂಡಿದೆ. 2018–2019ರಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಅಂದಿನಿಂದ ಇಲ್ಲಿ ಯಾವುದೇ ಹೊಸ ಪ್ರತಿನಿಧಿಗಳಿಲ್ಲ. ಒಂದು ವೇಳೆ ಚುನಾವಣಾ ಆಯೋಗವು ನ್ಯಾಯಾಲಯದ ಆದೇಶ ಪಾಲಿಸದಿದ್ದಲ್ಲಿ, ನ್ಯಾಯಾಂಗ ನಿಂದನೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಪೀಠವು ಎಚ್ಚರಿಸಿದೆ.

‘2019ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಆದ್ಯತೆ ನೀಡಿದ್ದರಿಂದ ಸ್ಥಳೀಯ ಚುನಾವಣೆ ನಡೆಸಲು ಸಾಧ್ಯವಾಗಲಿಲ್ಲ. ಬಳಿಕ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮೇಲೆ ಹೆಚ್ಚಿನ ಗಮನಹರಿಸಲಾಯಿತು. ಅಲ್ಲದೆ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಇನ್ನೂ ಕಡಿಮೆಯಾಗಿಲ್ಲ. ಹಾಗಾಗಿ ಈ 9 ಜಿಲ್ಲೆಗಳಲ್ಲಿ ಚುನಾವಣೆ ನಡೆಸಲು ಸ್ವಲ್ಪ ಸಮಯ ಅವಕಾಶ ನೀಡಬೇಕು’ ಎಂದು ಭಾರತದ ಚುನಾವಣಾ ಆಯೋಗದ (ಇಸಿಐ) ಪರವಾಗಿ ಹಾಜರಿದ್ದ ಹಿರಿಯ ವಕೀಲ ಪಿ.ಎಸ್‌. ನರಸಿಂಹ ಅವರು ಪೀಠಕ್ಕೆ ಮನವಿ ಮಾಡಿದರು.

ಆದರೆ ಹೆಚ್ಚಿನ ಸಮಯ ಅವಕಾಶ ನೀಡಲು ನಿರಾಕರಿಸಿದ ನ್ಯಾಯಾಲಯವು, ‘ಈಗ ಪ್ರತಿಯೊಂದು ವಿಷಯಕ್ಕೂ ಕೋವಿಡ್‌ ಸಾಂಕ್ರಾಮಿಕದ ಕಾರಣವನ್ನು ನೀಡಲಾಗುತ್ತದೆ. ಅದೇ ರಾಜಕೀಯ ಪಕ್ಷಗಳು ಹೇಳಿದರೆ, ಆಯೋಗವು ಚುನಾವಣೆಗಳನ್ನು ಆಯೋಜಿಸುತ್ತದೆ. ಅಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ (ಸಿಇಸಿ) ನಡೆಸುತ್ತದೆಯೇ ವಿನಃ ಇಸಿಐ ಅಲ್ಲ’ ಎಂದು ಪೀಠ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು