ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಢಚರ್ಯೆ: ಪಾಕ್ ಪಾಲಾದ ವ್ಯಕ್ತಿಗೆ ₹10 ಲಕ್ಷ ಪರಿಹಾರ ಸೂಚಿಸಿದ ‘ಸುಪ್ರೀಂ’

Last Updated 12 ಸೆಪ್ಟೆಂಬರ್ 2022, 16:02 IST
ಅಕ್ಷರ ಗಾತ್ರ

ನವದೆಹಲಿ: ಗೂಢಚರ್ಯೆ ಆರೋಪದಲ್ಲಿ ಪಾಕಿಸ್ತಾನದಿಂದ ಬಂಧಿತನಾಗಿ, ಜೈಲುಶಿಕ್ಷೆ ಅನುಭವಿಸಿದ ಭಾರತದ 75 ವರ್ಷದ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಸೋಮವಾರ ₹ 10 ಲಕ್ಷ ಪರಿಹಾರ ನೀಡಬೇಕೆಂದು ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠವು, ‘ನ್ಯಾಯಾಲಯವು ಜೈಲುಶಿಕ್ಷೆ ಅನುಭವಿಸಿದ ವ್ಯಕ್ತಿಯ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿಲ್ಲ. ಆದರೆ, ಒಟ್ಟಾರೆ ಪ್ರಕರಣದ ದೃಷ್ಟಿಕೋನವನ್ನು ಪರಿಗಣಿಸಿ ಅವರಿಗೆ ಪರಿಹಾರ ನೀಡಬೇಕು’ ಎಂದು ತಿಳಿಸಿದೆ.

ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮ್‌ಜಿತ್ ಬ್ಯಾನರ್ಜಿ ಅವರು, ಅರ್ಜಿದಾರರಾದ ಮಹಮ್ಮದ್ ಅನ್ಸಾರಿ ಅವರು ಸಲ್ಲಿಸಿದ ಮನವಿಯನ್ನು ತೀವ್ರವಾಗಿ ವಿರೋಧಿಸಿದರು.

ಅರ್ಜಿದಾರರ ಪರ ವಕೀಲ ಸಮರ್ ವಿಜಯ್ ಸಿಂಗ್ ಮಾತನಾಡಿ, ‘ಅರ್ಜಿದಾರರಾದ ಮಹಮ್ಮದ್ ಅನ್ಸಾರಿ ಅವರು 1974 ಜೂನ್‌ನಲ್ಲಿ ಅಂಚೆ ಸೇವೆಯಲ್ಲಿ (ಆರ್‌ಎಂಎಸ್‌) ಕೆಲಸ ಮಾಡುತ್ತಿದ್ದರು. ಇದೇ ವೇಳೆ ಗುಪ್ತಚರ ಇಲಾಖೆಯ ವಿಶೇಷ ಬ್ಯೂರೊದಿಂದ ನಿರ್ದಿಷ್ಟ ಕಾರ್ಯಕ್ಕಾಗಿ ಅವರನ್ನು ಎರಡು ಬಾರಿ ಪಾಕಿಸ್ತಾನಕ್ಕೆ ಕಳುಹಿಸಲಾಯಿತು. ದುರದೃಷ್ಟವಶಾತ್ 1976ರ ಡಿ. 12ರಂದು ಪಾಕಿಸ್ತಾನಿ ರೇಂಜರ್ ಅವರನ್ನು ಬಂಧಿಸಿದರು’ ಎಂದು ನ್ಯಾಯಾಲಯಕ್ಕೆ ವಿವರಿಸಿದರು.

‘1978ರಲ್ಲಿ ಅನ್ಸಾರಿ ಅವರಿಗೆ ಪಾಕಿಸ್ತಾನದ ನ್ಯಾಯಾಲಯವು 14 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತು. 1980ರ ಜುಲೈನಲ್ಲಿ ಅವರನ್ನು ಅಂಚೆ ಇಲಾಖೆಯ ಸೇವೆಯಿಂದ ವಜಾಗೊಳಿಸಲು ನಿರ್ಧರಿಸಲಾಯಿತು. ಅನ್ಸಾರಿ ಅವರು ತಮ್ಮ ಸೆರೆವಾಸದಲ್ಲಿದ್ದ ಅವಧಿಯಲ್ಲಿ ತಾವು ಎಲ್ಲಿದ್ದೇನೆ ಎಂಬ ಬಗ್ಗೆ ತಿಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದರೂ ಪ್ರಯೋಜವಾಗಲಿಲ್ಲ’ ಎಂದೂ ತಿಳಿಸಿದರು.

‘ಅರ್ಜಿದಾರರು ಸದಾ ತಮ್ಮ ಬಗ್ಗೆ ಎಲ್ಲಾ ತಿಳಿದಿದ್ದ ಎಲ್ಲಾ ಸತ್ಯಸಂಗತಿಗಳನ್ನು ತಮ್ಮ ಇಲಾಖೆಗೆ ಸಂವಹನ ಮಾಡಿದ್ದಾರೆ. ತಮಗೆ ವಹಿಸಿದ ಕಾರ್ಯಕ್ಕಾಗಿ ತಾವು ಹೋಗುತ್ತಿರುವ ಸ್ಥಳದ ಬಗ್ಗೆಯೂ, ಅವರು ರಜೆ ಪಡೆದಿದ್ದ ಬಗ್ಗೆಯೂ ಪ್ರತಿವಾದಿಗಳಿಗೆ ತಿಳಿದಿತ್ತು. ಅಷ್ಟೇ ಅಲ್ಲ, ಇಲಾಖೆಯಲ್ಲಿ ತಮ್ಮ ವಿಳಾಸವನ್ನೂ ನವೀಕರಿಸಿದ್ದಾರೆ. ಬಂಧನದ ನಂತರವೂ ಇಲಾಖೆಗೆ ಸರಿಯಾಗಿ ಸೇವೆ ಸಲ್ಲಿಸಿದ ಮಾಹಿತಿಯನ್ನೂ ಕಳಿಸಿದ್ದಾರೆ’ ಎಂದು ವಕೀಲರು ನ್ಯಾಯಾಲಯಕ್ಕೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT