ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗಸೂಚಿ ಹಿಂಪಡೆಯಿರಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸಮಿತಿ ಸೂಚನೆ

ವನ್ಯಜೀವಿ ಆವಾಸಸ್ಥಾನಗಳಲ್ಲಿ ಮೃಗಾಲಯ ಸ್ಥಾಪನೆಗೆ ಕಳವಳ
Last Updated 7 ಫೆಬ್ರುವರಿ 2023, 15:26 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಹುಲಿ ಸಂರಕ್ಷಿತ ‍ಪ್ರದೇಶ ಹಾಗೂ ವನ್ಯಜೀವಿ ಅಭಯಾರಣ್ಯಗಳಲ್ಲಿ ಸಫಾರಿ ಹಾಗೂ ಮೃಗಾಲಯ ಸ್ಥಾಪಿಸುವ ಕುರಿತಾದ ಮಾರ್ಗಸೂಚಿಗಳನ್ನು ಹಿಂಪಡೆಯಿರಿ. ಇಲ್ಲವೇ ಅದಕ್ಕೆ ತಿದ್ದುಪಡಿ ಮಾಡಿ’ ಎಂದು ಸುಪ್ರೀಂ ಕೋರ್ಟ್‌ನಿಂದ ರಚನೆಯಾಗಿದ್ದ ಸೆಂಟ್ರಲ್‌ ಎಂಪವರ್ಡ್‌ ಕಮಿಟಿ (ಸಿಇಸಿ) ಕೇಂದ್ರ ಪರಿಸರ ಸಚಿವಾಲಯಕ್ಕೆ ಸೂಚಿಸಿದೆ.

ಕಳೆದ ತಿಂಗಳು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿರುವ ಸಿಇಸಿ, ‘ಹುಲಿ ಸಂರಕ್ಷಿತ ಹಾಗೂ ಮೀಸಲು ಅರಣ್ಯ ಪ್ರದೇಶಗಳಲ್ಲಿ ಮೃಗಾಲಯ ನಿರ್ಮಾಣ ಹಾಗೂ ಸಫಾರಿಗೆ ನೀಡಿರುವ ಅನುಮೋದನೆಯನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು’ ಎಂದು ತಿಳಿಸಿದೆ.

ಆಯಾ ಭೂಪ್ರದೇಶದಲ್ಲಿನ ಗಾಯಗೊಂಡಿರುವ ಅಥವಾ ಅಶಕ್ತ ಪ್ರಾಣಿಗಳ ರಕ್ಷಣೆ ಮತ್ತು ಪುನರ್ವಸತಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡುವಂತೆ ಸಮಿತಿಯು ತನ್ನ ವರದಿಯಲ್ಲಿ ಸೂಚಿಸಿದೆ.

‘ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (ಎನ್‌ಟಿಸಿಎ) 2012ರ ಮಾರ್ಗಸೂಚಿಯಲ್ಲಿ ಹುಲಿ ಸಂರಕ್ಷಿತ ಪ್ರದೇಶದ ಬಫರ್‌ ವಲಯ ಅಥವಾ ಗಡಿ ಪ್ರದೇಶಗಳಲ್ಲಿ ಸಫಾರಿ ಆರಂಭಿಸುವುದಕ್ಕೆ ಅನುಮತಿ ನೀಡಿತ್ತು. 2016 ಮತ್ತು 2019ರಲ್ಲಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದ ಎನ್‌ಟಿಸಿಎ, ಹುಲಿ ಸಂರಕ್ಷಿತ ಪ್ರದೇಶದೊಳಗೇ ಹುಲಿ ಸಫಾರಿ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿತ್ತು. ಈ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಬೇಕು ಅಥವಾ ಹಿಂಪಡೆಯಬೇಕು’ ಎಂದು ಸಿಇಸಿ ವರದಿಯಲ್ಲಿ ಹೇಳಲಾಗಿದೆ.

‘ರಾಷ್ಟ್ರೀಯ ಉದ್ಯಾನಗಳು, ಹುಲಿ ಸಂರಕ್ಷಿತ ಪ್ರದೇಶ, ವನ್ಯಜೀವಿ ಧಾಮಗಳಲ್ಲಿ ಮೃಗಾಲಯ ಹಾಗೂ ಸಫಾರಿ ಸ್ಥಾಪನೆಗೆ ಕೇಂದ್ರ ಮೃಗಾಲಯ ಪ್ರಾಧಿಕಾರವು (ಸಿಜೆಡ್‌ಎ) ಅನುಮೋದನೆ ನೀಡಬಾರದು’ ಎಂದು ಹೇಳಲಾಗಿದೆ.

‘ಹುಲಿ ಸಂರಕ್ಷಿತ ಪ್ರದೇಶದ ದಟ್ಟ ಕಾನನದೊಳಗೆ ಹುಲಿ ಸಫಾರಿ ಸ್ಥಾಪಿಸುವುದರಿಂದ ಪ್ರವಾಸಿಗರು ಕಾಡಿನೊಳಗೆ ಸುದೀರ್ಘ ಕಾಲ ಪ್ರಯಾಣ ಮಾಡಬೇಕಾಗುತ್ತದೆ. ಪ್ರವಾಸಿಗರನ್ನು ಹೊತ್ತೊಯ್ಯುವ ವಾಹನಗಳಿಂದಾಗಿ ಅಭಯಾರಣ್ಯ ಹಾಗೂ ಆ ಪ್ರದೇಶದ ವ್ಯಾಪ್ತಿಯಲ್ಲಿ ನೆಲೆಸಿರುವ ಜೀವ ಸಂಕುಲಕ್ಕೆ ಸಾಕಷ್ಟು ಹಾನಿಯಾಗಲಿದೆ’ ಎಂದು ತಿಳಿಸಿದೆ.

‘ಮೃಗಾಲಯಗಳಲ್ಲಿನ ಪ್ರಾಣಿಗಳು ಆಗಾಗ್ಗೆ ಮಾರಣಾಂತಿಕ ರೋಗಗಳಿಗೆ ತುತ್ತಾಗುತ್ತಿರುತ್ತವೆ. ಅವುಗಳಿಂದ ಈ ಕಾಯಿಲೆಗಳು ವನ್ಯಜೀವಿಗಳಿಗೂ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ವನ್ಯಜೀವಿ ಧಾಮಗಳ ಆಸುಪಾಸಿನಲ್ಲಿ ಮೃಗಾಲಯಗಳನ್ನು ಸ್ಥಾಪಿಸದೆ ಇರುವುದು ಒಳಿತು’ ಎಂದು ಸಲಹೆ ನೀಡಿದೆ.

ಉತ್ತರಾಖಂಡದಲ್ಲಿರುವ ಕಾರ್ಬೆಟ್‌ ಹುಲಿ ಸಂರಕ್ಷಿತ ಪ್ರದೇಶದ ಬಫರ್‌ ವಲಯದಲ್ಲಿ ಸಫಾರಿ ಆರಂಭಿಸುವ ವಿಚಾರವಾಗಿ ಉದ್ಭವಿಸಿದ್ದ ಸಮಸ್ಯೆಯ ಕುರಿತು ಸಿಇಸಿ ಅಧ್ಯಯನ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT