ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆ ನಿವೃತ್ತ ಮಹಿಳಾ ಅಧಿಕಾರಿಗಳಿಗೆ ಪೂರ್ಣಾವಧಿ ನೇಮಕ ಲಾಭ ನೀಡಲು ಸುಪ್ರೀಂ ನಕಾರ

ಫೆ.17ರ ನಂತರ ನಿವೃತ್ತಿಯಾದ ಸೇನೆಯ ಮಹಿಳಾ ಅಧಿಕಾರಿಗಳಿಂದ ಅರ್ಜಿ
Last Updated 3 ಸೆಪ್ಟೆಂಬರ್ 2020, 11:45 IST
ಅಕ್ಷರ ಗಾತ್ರ

ನವದೆಹಲಿ: ಕಟ್‌ಆಫ್‌ ದಿನಾಂಕ (ಫೆ. 17) ನಂತರ ನಿವೃತ್ತಿಯಾದ ಸೇನಾಪಡೆಯ ಮಹಿಳಾ ಅಧಿಕಾರಿಗಳಿಗೆ ಪೂರ್ಣಾವಧಿ ನೇಮಕದ (ಪರ್ಮನೆಂಟ್‌ ಕಮಿಷನ್‌) ಸೌಲಭ್ಯಗಳನ್ನುನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

‘ಅರ್ಜಿ ಸಲ್ಲಿಸಿರುವ ಅಧಿಕಾರಿಗಳಿಗೆ ಈ ಸೌಲಭ್ಯಗಳನ್ನು ನೀಡಬೇಕು ಎಂದರೆ, ಪೂರ್ಣಾವಧಿ ನೇಮಕಕ್ಕೆ ಸಂಬಂಧಿಸಿ ತಾನು ನೀಡಿರುವ ತೀರ್ಪನ್ನು ಮರುಪರಿಶೀಲನೆ ಮಾಡಬೇಕಾಗುತ್ತದೆ. ಆ ರೀತಿ ಮಾಡಿದಾಗ ಉಳಿದ ಬ್ಯಾಚ್‌ಗಳ ಅಧಿಕಾರಿಗಳು ಸಹ ಈ ಸೌಲಭ್ಯಗಳನ್ನು ತಮಗೂ ನೀಡುವಂತೆ ಕೋರಬಹುದು’ ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌, ಇಂದು ಮಲ್ಹೋತ್ರ ಹಾಗೂ ಕೆ.ಎಂ.ಜೋಸೆಫ್‌ ಅವರಿರುವ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.

ಅರ್ಜಿ ಸಲ್ಲಿಸಿದ್ದ 19 ಮಹಿಳಾ ಅಧಿಕಾರಿಗಳ ಪರ ವಾದ ಮಂಡಿಸಿದ ವಕೀಲೆ ಮೀನಾಕ್ಷಿ ಲೇಖಿ, ‘ಈ ಅಧಿಕಾರಿಗಳಿಗೆ ಮಾರ್ಚ್‌ನಲ್ಲಿ ನಿವೃತ್ತಿ ನೀಡಲಾಗಿದೆ. ಸುಪ್ರೀಂಕೋರ್ಟ್‌ ನಿರ್ಧರಿಸಿದಂತೆ ಕಟ್‌ಆಫ್‌ ದಿನಾಂಕ ಫೆ. 17. ಆದರೆ, ಪೂರ್ಣಾವಧಿ ನೇಮಕಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು ಜುಲೈನಲ್ಲಿ. ಹೀಗಾಗಿ 19 ಜನ ಅಧಿಕಾರಿಗಳಿಗೂ ಪರ್ಮನೆಂಟ್‌ ಕಮಿಷನ್‌ನಡಿ ಎಲ್ಲ ಸೌಲಭ್ಯಗಳನ್ನು ನೀಡಬೇಕು‘ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಚಂದ್ರಚೂಡ್‌, ‘ಈ ರೀತಿ ನಾವು ಕಟ್‌ಆಫ್‌ ದಿನಾಂಕಕ್ಕೆ ಸಂಬಂಧಿಸಿ ವಿನಾಯಿತಿ ನೀಡುತ್ತಾ ಹೋದರೆ ಅದಕ್ಕೆ ಕೊನೆ ಎಂಬುದೇ ಇರುವುದಿಲ್ಲ. ಯಾವ ದಿನವನ್ನು ಕಟ್‌ಆಫ್‌ಗೆ ಪರಿಗಣಿಸಬೇಕು ಎಂಬುದೇ ನನ್ನ ಚಿಂತೆಯಾಗಿದೆ’ ಎಂದರು.

‘ಅರ್ಜಿ ಸಲ್ಲಿಸಿರುವ ಅಧಿಕಾರಿಗಳೆಲ್ಲ ದೇಶಕ್ಕೆ ಸೇವೆ ಸಲ್ಲಿಸುತ್ತಿರುವವರು. ಹೀಗಾಗಿ ಇಂತಹ ಅರ್ಜಿಗಳನ್ನು ವಿಲೇವಾರಿ ಮಾಡುವುದು ಕಷ್ಟ. ಹೇಗಾದರೂ ಮಾಡಿ ಈ ಅಧಿಕಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬ ಇಚ್ಛೆ ನಮಗೂ ಇದೆ. ಆದರೆ, ಒಂದು ಹಂತದ ನಂತರ ನಾವೂ ಗೆರೆ ಎಳೆಯಲೇಬೇಕು‘ ಎಂದೂ ಅವರು ಅಭಿಪ್ರಾಯಪಟ್ಟರು.

‘ನಾವು ಫೆ. 17ಅನ್ನು ಕಟ್‌ಆಫ್‌ ಎಂದು ನಿಗದಿ ಮಾಡಿದೆವು. ಕೇಂದ್ರ ಸರ್ಕಾರ ಜುಲೈನಲ್ಲಿ ಅನುಮೋದನೆ ನೀಡಿ ಆದೇಶ ಹೊರಡಿಸಿತು. ಹಾಗಾದರೆ, ನಾವು ಎಷ್ಟು ದಿನ ಹಿಂದಕ್ಕೆ ಹೋಗಿ, ಕಟ್‌ಆಫ್‌ ದಿನಾಂಕ ನಿಗದಿಪಡಿಸಬೇಕು’ ಎಂದೂ ನ್ಯಾಯಪೀಠ ಪ್ರಶ್ನಿಸಿತು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಆರ್‌.ಬಾಲಸುಬ್ರಮಣಿಯನ್‌, ‘ಸುಪ್ರೀಂಕೋರ್ಟ್‌ ಫೆ.17ರಂದು ತೀರ್ಪು ನೀಡಿದೆ. ಆ ದಿನದಂದು, ಅರ್ಜಿದಾರರು 14 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಅವರ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ಹೇಳಿದರು.

ಅರ್ಜಿಯನ್ನು ಹಿಂಪಡೆಯುವಂತೆ ವಕೀಲೆ ಮೀನಾಕ್ಷಿ ಲೇಖಿ ಅವರಿಗೆ ಸೂಚಿಸಿದ ನ್ಯಾಯಪೀಠ, ಸರ್ಕಾರ ಈ ಅಧಿಕಾರಿಗಳ ಅರ್ಜಿ ಕುರಿತು ಕ್ರಮ ಕೈಗೊಳ್ಳಲಿ ಎಂದು ತಿಳಿಸಿತು.

14 ವರ್ಷ ಸೇವೆಯನ್ನು ಪೂರ್ಣಗೊಳಿಸಿರುವ ಮಹಿಳಾ ಅಧಿಕಾರಿಗಳಿಗೆ ನಿವೃತ್ತಿ ವೇತನ ಹಾಗೂ ಇತರ ಸೌಲಭ್ಯಗಳನ್ನು ನೀಡುವ ಸಂಬಂಧ ಪರ್ಮನೆಂಟ್‌ ಕಮಿಷನ್‌ಗೆ (ಪೂರ್ಣಾವಧಿ ನೇಮಕ) ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್‌ಫೆ. 17ರಂದು ಐತಿಹಾಸಿಕ ತೀರ್ಪು ನೀಡಿತು. ಈ ಸಂಬಂಧ ಮೂರು ತಿಂಗಳಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಅದರಂತೆ ಸೇನೆಯಲ್ಲಿ ಮಹಿಳೆಯರ ಪೂರ್ಣಾವಧಿ ನೇಮಕಕ್ಕೆ ಕೇಂದ್ರ ಸರ್ಕಾರ ಜುಲೈ 23ಕ್ಕೆ ಒಪ್ಪಿಗೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT