ಸೋಮವಾರ, ಅಕ್ಟೋಬರ್ 18, 2021
23 °C

ಆರೋಪಿಯ ಪಿತ್ರಾರ್ಜಿತ ಆಸ್ತಿ ಜಪ್ತಿ; ಕಾನೂನು ಅಂಶ ಪರಿಶೀಲನೆಗೆ ‘ಸುಪ್ರೀಂ’ ಸಮ್ಮತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್‌ಎ) ಅನ್ವಯ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಆರೋಪಿಯ ಪಿತ್ರಾರ್ಜಿತ ಆಸ್ತಿಯನ್ನು ಜಪ್ತಿ ಮಾಡಬಹುದೇ ಎಂಬ ಕಾನೂನಾತ್ಮಕ ಅಂಶವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿತು.

ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ 2002ರ ಅನ್ವಯ ಕ್ರಮ ಜರುಗಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಇ.ಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅಲ್ಲದೆ, ಪ್ರಕರಣದ ಇಬ್ಬರು ಆರೋಪಿಗಳ ವಿರುದ್ಧದ ತನಿಖೆಯನ್ನು ಹೈಕೋರ್ಟ್‌ ರದ್ದುಪಡಿಸಿತ್ತು.

ನ್ಯಾಯಮೂರ್ತಿಗಳಾದ ಎ.ಎಂ.ಖಾನ್‌ವಿಲ್ಕರ್ ಮತ್ತು ಸಿ.ಟಿ.ರವಿಕುಮಾರ್‌ ಅವರಿದ್ದ ನ್ಯಾಯಪೀಠವು ಇ.ಡಿ ಮನವಿಯನ್ನು ಆಧರಿಸಿ, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯಿಸಲು ಸೂಚಿಸಿ ಆರೋಪಿಗಳಿಗೆ ನೋಟಿಸ್‌ ಜಾರಿಗೆ ಅ.8ರಂದು ಆದೇಶಿಸಿತು.

ಇ.ಡಿ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ಅವರು ‘ಪಿಎಂಎಲ್‌ಎ ಕಾಯ್ದೆಯಡಿ ಪಿತ್ರಾರ್ಜಿತ ಆಸ್ತಿ ಜಪ್ತಿ ಮಾಡಲಾಗದು ಎಂದು ಹೇಳುವ ಮೂಲಕ ಹೈಕೋರ್ಟ್‌ ಸ್ಪಷ್ಟವಾಗಿ ಲೋಪ ಎಸಗಿದೆ’ ಎಂದು ವಾದಿಸಿದರು.

ಹೈಕೋರ್ಟ್‌ನ ಈ ಅಭಿಪ್ರಾಯವು ಪಿಎಂಎಲ್ಎ ಕಾಯ್ದೆ 2002ರ ಸೆಕ್ಷನ್‌ 2 (1)(ಯು) ನಲ್ಲಿ ಉಲ್ಲೇಖವಾಗಿರುವ ‘ಅಪರಾಧದ ಆದಾಯ’ (ಪ್ರೊಸೀಡ್ಸ್ ಆಫ್‌ ಕ್ರೈಮ್‌) ವ್ಯಾಖ್ಯಾನಕ್ಕೆ ವಿರುದ್ಧವಾದುದು ಎಂದೂ ರಾಜು ಅವರು ವಾದಿಸಿದರು.

‘ಅಪರಾಧದ ಆದಾಯ’ದ ವ್ಯಾಖ್ಯಾನವೆಂದರೆ ಉಲ್ಲೇಖಿತ ಅಪರಾಧಕ್ಕೆ ಸಂಬಂಧಿಸಿದ ಕ್ರಿಮಿನಲ್ ಚಟುವಟಿಕೆಗಳಿಂದ ಯಾವುದೇ ವ್ಯಕ್ತಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹೊಂದಿರುವ ಅಥವಾ ಪಡೆದಿರುವ ಯಾವುದೇ ಆಸ್ತಿ ಅಥವಾ ಇಂಥ ಆಸ್ತಿಯ ಮೌಲ್ಯ ಅಥವಾ ಆಸ್ತಿಯನ್ನು ದೇಶದ ಹೊರಗಡೆ ಹೊಂದಿದ್ದರೆ, ದೇಶದಲ್ಲಿ ಅದಕ್ಕೆ ಸರಿಸಮಾನವಾದ ಮೌಲ್ಯ ಎಂದಾಗಿದೆ’ ಎಂದರು.

ಹೈಕೋರ್ಟ್‌ ತನ್ನ ಆದೇಶದಲ್ಲಿ ಮೊದಲ ಆರೋಪಿ ವಿರುದ್ಧ ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂಬ ಕಾರಣಕ್ಕೆ ತನಿಖೆಯನ್ನು ವಜಾ ಮಾಡಿತ್ತು. ಅಲ್ಲದೆ, ಎರಡನೇ ಆರೋಪಿಯ ವಿರುದ್ಧ ಬೆಂಗಳೂರಿನ ಪ್ರಧಾನ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶರ ಎದುರು ಹೂಡಿದ್ದ ಪ್ರಕರಣದ ತನಿಖೆಯನ್ನು ರದ್ದುಪಡಿಸಿತ್ತು. ಅಲ್ಲದೆ, ಅರ್ಜಿದಾರರಿಗೆ ಸಂಬಂಧಿಸಿದ ಮೈಸೂರು ಜಿಲ್ಲೆಯಲ್ಲಿರುವ ಪಿತ್ರಾರ್ಜಿತ ಆಸ್ತಿ ಜಪ್ತಿ ಮಾಡಿದ್ದನ್ನು ಕೈಬಿಟ್ಟಿತ್ತು.

ಮೊದಲ ಆರೋಪಿ ವಿರುದ್ಧ ಐಪಿಸಿ 406 (ವಿಶ್ವಾಸದ್ರೋಹ), 420 (ವಂಚನೆ) ಸೆಕ್ಷನ್ ಅನ್ವಯ ದೋಷಾರೋಪ ಪಟ್ಟಿ ದಾಖಲಿಸಲಾಗಿತ್ತು. ಆರೋಪಿಯು ಸರ್ಕಾರದ ಅಧೀನ ಸಂಸ್ಥೆ ಎಂಎಸ್‌ಐಎಲ್‌ಗೆ 50 ಸಾವಿರ ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು ಪೂರೈಕೆ ಮಾಡುವುದಾಗಿ ಎರಡು ಒಪ್ಪಂದ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು.

ಉಲ್ಲೇಖಿತ ಒಪ್ಪಂದದಂತೆ ಆರೋಪಿ ಬ್ಯಾಂಕ್‌ ಖಾತೆಗೆ ಕ್ರಮವಾಗಿ ₹ 1.15 ಕೋಟಿ, ₹ 1 ಕೋಟಿ ವರ್ಗಾಯಿಸಲಾಗಿತ್ತು. ಬಳಿಕ ಕಬ್ಬಿಣದ ಅದಿರು ಪೂರೈಸಲು ವಿಫಲವಾಗಿದ್ದು, ವಿಶ್ವಾಸದ್ರೋಹ ಎಸಗಿದ್ದರು ಎಂದು ಆರೋಪಿಸಲಾಗಿತ್ತು.

ಹೈಕೋರ್ಟ್ ತನ್ನ ಆದೇಶದಲ್ಲಿ, ದೂರಿನ ಪ್ರಕಾರ ಆರೋಪಿಯು ಒಪ್ಪಂದವನ್ನು ಜಾರಿಗೊಳಿಸಲು ವಿಫಲರಾಗಿದ್ದಾರೆ. ಹಾಗೂ ಅವರು ನೀಡಿದ್ದ ಚೆಕ್‌ಗಳು ಊರ್ಜಿತವಾಗಿಲ್ಲ ಎಂಬುದಾಗಿದೆ. ಇವು, ಐಪಿಸಿ ಸೆಕ್ಷನ್‌ 406, 420 ಅನ್ವಯ ಶಿಕ್ಷಾರ್ಹವಾಗಿರಬಹುದು.ಆದರೆ, ಅದರ ಪ್ರಕಾರ, ಇದು ‘ಅಪರಾಧದ ಆದಾಯ’ದ ವ್ಯಾಪ್ತಿಗೆ ಬರಬೇಕು. ಇಲ್ಲಿ, ಅದಕ್ಕೆ ಪೂರಕವಾಗಿ ಆರೋಪಿಯು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿತು.

ದೂರು ಅಥವಾ ದೋಷಾರೋಪ ಪಟ್ಟಿಯಲ್ಲಿ 1ನೇ ಆರೋಪಿ ಅಥವಾ ಇತರ ಆರೋಪಿಗಳು, ಮುಂಗಡ ₹ 2.15 ಕೋಟಿ ಹಿಂದಿರುಗಿಸುವಲ್ಲಿ ಕ್ರಿಮಿನಲ್‌ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಯಾವುದೇ ಉಲ್ಲೇಖವಿಲ್ಲ ಎಂದೂ ಹೈಕೋರ್ಟ್‌ ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು