ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಚಿತವಾಗಿ ಜೈಲಿನಿಂದ ಬಿಡುಗಡೆಗೆ ಕೋರಿ ಶಶಿಕಲಾ ಅರ್ಜಿ

Last Updated 3 ಡಿಸೆಂಬರ್ 2020, 9:02 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ, ಶಿಕ್ಷೆ ಕಡಿತಗೊಳಿಸಿ, ಮುಂಚಿತವಾಗಿ ಬಿಡುಗಡೆ ಮಾಡುವಂತೆ ಕೋರಿ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

ಶಶಿಕಲಾ ಅರ್ಜಿ ಸಲ್ಲಿಸಿರುವುದನ್ನ ಜೈಲಿನ ಮೂಲಗಳು ಡೆಕ್ಕನ್ ಹೆರಾಲ್ಡ್‌ಗೆ ಖಚಿತಪಡಿಸಿದ್ದು, ಅರ್ಜಿಯನ್ನು ಬಂದೀಖಾನೆ ಇಲಾಖೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿವೆ. ಜೈಲು ಶಿಕ್ಷೆ ಅನುಭವಿಸುತ್ತಿರುವ ಯಾವುದೇ ಕೈದಿ ಉತ್ತಮ ನಡವಳಿಕೆ ಮತ್ತು ಜೈಲಿನಲ್ಲಿ ವಹಿಸಿದ ಕೆಲಸವನ್ನು ನಿರ್ವಹಿಸಿದ ಆಧಾರದ ಮೇಲೆ ತಿಂಗಳಲ್ಲಿ 3 ದಿನ ಶಿಕ್ಷೆ ಕಡಿತಕ್ಕೆ ಅರ್ಹರಾಗಿರುತ್ತಾರೆ. ಆದರೆ, ಶಶಿಕಲಾ ಪ್ರಕರಣದಲ್ಲಿ ತಾಂತ್ರಿಕದೋಷ ತೊಡಕಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಉತ್ತಮ ನಡವಳಿಕೆ ಆಧಾರದ ಮೇಲೆ ಶಶಿಕಲಾ ಅವರು 120 ದಿನಗಳ ಶಿಕ್ಷೆ ಕಡಿತ ಸೌಲಭ್ಯವನ್ನು ಪಡೆದುಕೊಂಡಿದ್ದರು. ಆದರೆ, ಆ ಬಳಿಕ ಜೈಲಿನಲ್ಲಿ ಕಾನೂನು ಬಾಹಿರವಾಗಿ ವಿಶೇಷ ಸೌಲಭ್ಯ ಪಡೆದದ್ದು ಮತ್ತು ಒಪ್ಪಿಸಿದ ಕೆಲಸವನ್ನು ಸರಿಯಾಗಿ ನಿರ್ವಹಿಸದ ಕಾರಣ ಈ ಹಿಂದೆ ಪಡೆದಿದ್ದ ಶಿಕ್ಷೆ ಕಡಿತದ ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂದು ಮೂಲಗಳು ಹೇಳುತ್ತವೆ.

ಈ ಕುರಿತಂತೆ ಗೃಹ ಇಲಾಖೆ ಮೂಲಗಳು ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದು, ನಿಯಮಾವಳಿ ಮತ್ತು ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ತಿಳಿಸಿವೆ.

ತಾವು ಪಡೆದುಕೊಂಡಿದ್ದ ಶಿಕ್ಷೆ ಕಡಿತವನ್ನ ಜೈಲಿನ ಅಧಿಕಾರಿಗಳು ತೆಗೆದು ಹಾಕಿದ ಮಾಹಿತಿ ತಿಳಿದ ಬಳಿಕ, ಜೈಲಿನ ಅಧಿಕಾರಿಗಳ ನಿರ್ಧಾರದ ಪುನರ್ ಪರಿಶೀಲನೆ ಕೋರಿ ಶಶಿಕಲಾ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಯಾವುದೇ ಪ್ರಕರಣದಲ್ಲಿ ಶಿಕ್ಷೆಯಾಗಿದ್ದರೂ ಸಹ ಶಿಕ್ಷೆ ಕಡಿತ ಅವಕಾಶವನ್ನು ನೀಡಲಾಗುತ್ತಿದೆ. ಅಂದಹಾಗೆ, ನಿತ್ಯ ಕೈದಿಗಳ ನಡವಳಿಕೆಯನ್ನ ಗಮನಿಸುವ ಜೈಲಿನ ಅಧಿಕಾರಿಗಳು ಈ ನಿರ್ಧಾರ ಕೈಗೊಳ್ಳುತ್ತಾರೆ. ಶಿಕ್ಷೆ ಕಡಿತ ಮಾಡಿಸಿಕೊಳ್ಳುವುದು ಕೈದಿಯ ಹಕ್ಕಲ್ಲ, ಅದು ಜೈಲಧಿಕಾರಿಗಳ ವಿವೇಚನಾಧಿಕಾರ ಎಂದು ಖ್ಯಾತ ವಕೀಲ ಸಿ.ವಿ. ನಾಗೇಶ್ ಹೇಳುತ್ತಾರೆ..

ಕುತೂಹಲಕಾರಿ ಸಂಗತಿಯೆಂದರೆ, ಶಶಿಕಲಾ ಅವರ ಶಿಕ್ಷೆ ಕಡಿತದ ಅರ್ಜಿಯು ಗೃಹ ಇಲಾಖೆ ಕಾರ್ಯದರ್ಶಿಯಾಗಿರುವ ಐಜಿಪಿ ಡಿ. ರೂಪಾ ಮೂಲಕವೇ ಹಾದುಹೋಗುತ್ತದೆೆ. ಈ ಹಿಂದೆ ಜೈಲಿನಲ್ಲಿ ನಿಯಮ ಮೀರಿ ಸವಲತ್ತು ಪಡೆದಿದ್ದ ಶಶಿಕಲಾ ಅವರ ಬಗ್ಗೆ ವರದಿ ನೀಡಿದ್ದ ರೂಪಾ, ಈಗ ಅವರಿಗೆ ಶಿಕ್ಷೆ ಕಡಿತಕ್ಕೆ ಅವಕಾಶ ನೀಡುವರೇ ಎಂಬುದನ್ನ ಕಾದುನೋಡಬೇಕಿದೆ.

ಒಂದು ವೇಳೆ, ಶಶಿಕಲಾ ಅವರಿಗೆ ಶಿಕ್ಷೆ ಕಡಿತದ ಸವಲತ್ತು ಸಿಗದೇ ಹೋದಲ್ಲಿ ಈಗಾಗಲೇ 20 ಕೋಟಿ ದಂಡ ಪಾವತಿಸಿರುವ ಅವರು, ಜನವರಿ 21, 2020ಕ್ಕೆ ಬಿಡುಗಡೆ ಆಗಲಿದ್ದಾರೆ. ಇದೇ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆ ಸಹ ನಡೆಯುತ್ತಿದ್ದು, ಶಶಿಕಲಾ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT