ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಗ ಬರುತ್ತೇನೆಂದವಳು ಮನೆಗೆ ಮರಳಲೇ ಇಲ್ಲ: ದೆಹಲಿಯ ಮೃತ ಯುವತಿಯ ತಾಯಿ ಕಣ್ಣೀರು

ಮೃತ ಯುವತಿಯ ತಾಯಿ ಅಳಲು: ತಂದೆ ಇಲ್ಲದ ಕುಟುಂಬಕ್ಕೆ ಆಧಾರವಾಗಿದ್ದ ಸಂತ್ರಸ್ತೆ
Last Updated 2 ಜನವರಿ 2023, 16:47 IST
ಅಕ್ಷರ ಗಾತ್ರ

ನವದೆಹಲಿ: ‘ಮಗಳು ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಪ್ರತಿಬಾರಿಯೂ ಮನೆಗೆ ತಡವಾಗಿ ಬರುತ್ತಿದ್ದಳು. ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಕರೆ ಮಾಡಿ ಆಕೆಯೊಂದಿಗೆ ಮಾತನಾಡಿದ್ದೆ. ಬೇಗನೆ ಬರುವುದಾಗಿ ಮಾತು ಕೊಟ್ಟಿದ್ದಳು. ಹೀಗಾಗಿ ಎಂದಿನಂತೆಯೇ ಆಕೆಗಾಗಿ ಕಾಯುತ್ತಿದ್ದೆ. ಆದರೆ ಅವಳು ಬರಲೇ ಇಲ್ಲ’ ಎಂದು ಮೃತ ಯುವತಿಯ ತಾಯಿ ಭಾವುಕರಾಗಿ ನುಡಿದಿದ್ದಾರೆ.

‘ಬೆಳಗಾದರೂ ಮಗಳು ಮನೆಗೆ ಬಾರದಿದ್ದರಿಂದ ಗಾಬರಿಗೊಂಡು 10.30ರ ಸುಮಾರಿಗೆ ಮತ್ತೊಮ್ಮೆ ಕರೆ ಮಾಡಿದೆ. ಆದರೆ ಸಂಪರ್ಕ ಸಾಧ್ಯವಾಗಲಿಲ್ಲ. ಬಳಿಕ ಆಕೆಯ ದೂರವಾಣಿ ಸಂಖ್ಯೆ ‘ನಾಟ್‌ ರೀಚಬಲ್’ ಆಗಿತ್ತು. ಅದೇ ಸಮಯಕ್ಕೆ ಪೊಲೀಸ್‌ ಠಾಣೆಯಿಂದ ದೂರವಾಣಿ ಕರೆ ಬಂದಿತ್ತು. ಮಗಳು ಚಲಾಯಿಸುತ್ತಿದ್ದ ಸ್ಕೂಟಿ ಅಪಘಾತಕ್ಕೆ ತುತ್ತಾಗಿದೆ. ಹೀಗಾಗಿ ಠಾಣೆಗೆ ಬರುವಂತೆ ಅವರು ಸೂಚಿಸಿದರು. ಆರೋಗ್ಯ ಸರಿ ಇಲ್ಲ. ಹೀಗಾಗಿ ಠಾಣೆಗೆ ಬರಲು ಆಗುವುದಿಲ್ಲ ಎಂದು ತಿಳಿಸಿದ್ದೆ. ನನ್ನನ್ನು ಕರೆದೊಯ್ಯಲು ಅವರೇ ಮನೆಗೆ ವಾಹನ ಕಳುಹಿಸಿದ್ದರು. ಠಾಣೆ ತಲುಪಿದ ಬಳಿಕ ಮಗಳ ಬಗ್ಗೆ ಎಲ್ಲರ ಬಳಿ ವಿಚಾರಿಸಿದೆ. ಆದರೆ ಯಾರೂ ಸರಿಯಾಗಿ ಉತ್ತರಿಸಲಿಲ್ಲ’ ಎಂದಿದ್ದಾರೆ.

‘ನನ್ನ ಮಗಳಿಗೆ ಏನಾಗಿದೆ. ಆಕೆಯನ್ನು ನೋಡಲು ಬಿಡಿ ಎಂದು ಅಂಗಲಾಚಿದೆ. ಆದರೆ ಯಾರೂ ನನ್ನ ಮಾತಿಗೆ ಕಿವಿಗೊಡಲಿಲ್ಲ’ ಎಂದು ಗದ್ಗದಿತರಾಗಿ ತಿಳಿಸಿದ್ದಾರೆ.

‘ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಇದನ್ನು ಅಪಘಾತ ಪ್ರಕರಣವೆಂದು ಬಿಂಬಿಸುತ್ತಿದ್ದಾರೆ’ ಎಂದೂ ಆರೋಪಿಸಿದ್ದಾರೆ.

‘ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಮೃತ ಯುವತಿಯ ಕುಟುಂಬದವರು ಆಗ್ರಹಿಸಿದ್ದಾರೆ.

ಯುವತಿಯ ತಂದೆ ಹೋದ ವರ್ಷ ನಿಧನರಾಗಿದ್ದರು. ಹೀಗಾಗಿ ಕುಟುಂಬದ ಜವಾಬ್ದಾರಿ ಆಕೆಯ ಹೆಗಲೇರಿತ್ತು. ತಲಾ ಇಬ್ಬರು ತಮ್ಮಂದಿರು ಹಾಗೂ ತಂಗಿಯರನ್ನು ಸಾಕುವ ಜೊತೆಗೆ ಅಮ್ಮನ ಡಯಾಲಿಸಿಸ್‌ಗಾಗಿ ಹಣ ಹೊಂದಿಸುವ ಹೊಣೆಯೂ ಆಕೆಯ ಮೇಲಿತ್ತು. ಹೀಗಾಗಿ ಆಕೆ ತಡರಾತ್ರಿಯವರೆಗೂ ಕೆಲಸ ಮಾಡುತ್ತಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ.

ಆರೋಪಿಗಳು ಪೊಲೀಸರ ವಶಕ್ಕೆ: ದೆಹಲಿಯ ನ್ಯಾಯಾಲಯವು ಐವರು ಆರೋಪಿಗಳನ್ನು ಮೂರು ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದೆ.

ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಬೇಕಿರುವುದರಿಂದ ಐದು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ದೆಹಲಿ ಪೊಲೀಸರು ಸೋಮವಾರ ಮನವಿ ಮಾಡಿದ್ದರು. ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅಜಯ್‌ ಸಿಂಗ್‌ ಅವರು ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದರು.

ಮರಣೋತ್ತರ ಪರೀಕ್ಷೆ: ದೆಹಲಿಯ ಮೌಲಾನ ಆಜಾದ್‌ ವೈದ್ಯಕೀಯ ಕಾಲೇಜಿನಲ್ಲಿ ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಆ ಮೂಲಕ ಮುಂದೆ ಇಂತಹ ಕೃತ್ಯದಲ್ಲಿ ಯಾರೂ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗುವುದು’ ಎಂದು ದೆಹಲಿ ಪೊಲೀಸ್‌ ಕಮಿಷನರ್ ಸಂಜಯ್‌ ಅರೋರಾ ತಿಳಿಸಿದ್ದಾರೆ.

‘ಯುವತಿಯ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಆರೋಪಿಗಳ ವಿರುದ್ಧ ಇನ್ನಷ್ಟು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಐವರನ್ನೂ ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಲಾಗುತ್ತದೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತದೆ’ ಎಂದು ಹೇಳಿದ್ದಾರೆ.

‘ಪೊಲೀಸರಿಂದ ಲೋಪವಾಗಿದೆಯೇ ಎಂಬುದನ್ನು ಪರಿಶೀಲಿಸಿ’

‘ಖಂಜಾವಲಾ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಂದ ಏನಾದರೂ ಲೋಪವಾಗಿದೆಯೇ ಎಂಬುದನ್ನು ಪರಿಶೀಲಿಸಿ’ ಎಂದು ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ಸೋಮವಾರ ದೆಹಲಿ ಪೊಲೀಸ್ ಕಮಿಷನರ್‌ಗೆ ಸೂಚಿಸಿದ್ದಾರೆ.

‘ಆರೋ‍‍ಪಿಗಳು ಆರ್ಥಿಕ ಮತ್ತು ರಾಜಕೀಯವಾಗಿ ಎಷ್ಟೇ ಪ್ರಭಾವಿಗಳಾಗಿರಲಿ. ಯಾವುದೇ ಸಮುದಾಯಕ್ಕೆ ಸೇರಿದವರಾಗಿರಲಿ. ಅದನ್ನೆಲ್ಲಾ ಲೆಕ್ಕಿಸದೇ ಕಾನೂನಿನ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದೂ ಕಮಿಷನರ್‌ಗೆ ಸೂಚಿಸಿದ್ದಾರೆ. ಸಂತ್ರಸ್ತೆಯ ಕುಟುಂಬದಲ್ಲಿ ಯಾರಿಗಾದರೂ ಸ‌ರ್ಕಾರಿ ಉದ್ಯೋಗ ಕೊಡಬಹುದೇ ಎಂಬುದನ್ನು ಪರಿಶೀಲಿಸುವಂತೆಯೂ ನಿರ್ದೇಶಿಸಿದ್ದಾರೆ’ ಎಂದು ಲೆಫ್ಟಿನೆಂಟ್‌ ಗವರ್ನರ್‌ ಅವರ ಕಚೇರಿಯ ಮೂಲಗಳು ತಿಳಿಸಿವೆ.

‘ಸಂತ್ರಸ್ತೆಯ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಸಹಕಾರ ಮತ್ತು ಬೆಂಬಲ ನೀಡಲಾಗುತ್ತದೆ. ಈ ಪ್ರಕರಣ ಮುಂದಿಟ್ಟುಕೊಂಡು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವುದನ್ನು ಬಿಟ್ಟು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಸಕ್ಸೇನಾ ಅವರು ಟ್ವೀಟ್‌ ಮಾಡಿದ್ದಾರೆ.

ಆರೋಪಿ ಮಿತ್ತಲ್‌ ಬಿಜೆಪಿ ಮುಖಂಡ

‘ಪ್ರಕರಣದ ಐವರು ಆರೋಪಿಗಳ ಪೈಕಿ ಒಬ್ಬನಾಗಿರುವ ಮನೋಜ್‌ ಮಿತ್ತಲ್‌, ಬಿಜೆಪಿ ಮುಖಂಡ’ ಎಂದು ಆಮ್‌ ಆದ್ಮಿ ಪಕ್ಷ ಆರೋಪಿಸಿದೆ.

ಸುಲ್ತಾನ್‌ಪುರಿ ಪೊಲೀಸ್‌ ಠಾಣೆಯ ಹೊರಭಾಗದಲ್ಲಿ ಅಳವಡಿಸಲಾಗಿರುವ ಹೋರ್ಡಿಂಗ್‌ನಲ್ಲಿ ಮನೋಜ್‌ ಮಿತ್ತಲ್‌ ಫೋಟೊ ಇರುವ ವಿಡಿಯೊವೊಂದನ್ನು ಪಕ್ಷವು ಸೋಮವಾರ ಬಿಡುಗಡೆ ಮಾಡಿದೆ.

‘ಆರೋಪಿಗಳಲ್ಲಿ ಒಬ್ಬಾತ ಬಿಜೆಪಿ ಮುಖಂಡ. ಹೀಗಾಗಿ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಕಾರಿನಲ್ಲಿ ಜೋರಾಗಿ ಹಾಡು ಹಾಕಲಾಗಿತ್ತು. ಹೀಗಾಗಿ ಯುವತಿಯು ಕಾಡಿನಡಿ ಸಿಲುಕಿರುವುದು ಆರೋಪಿಗಳಿಗೆ ಗೊತ್ತಾಗಿರಲಿಲ್ಲ ಎಂದು ಡಿಸಿಪಿ ಹೇಳಿದ್ದಾರೆ. ಆ ಮೂಲಕ ಪ್ರಕರಣಕ್ಕೆ ತೀಲಾಂಜಲಿ ಇಡಲು ಯತ್ನಿಸುತ್ತಿದ್ದಾರೆ’ ಎಂದು ಎಎಪಿ ಶಾಸಕ ಸೌರಭ್‌ ಭಾರದ್ವಾಜ್‌ ಹೇಳಿದ್ದಾರೆ.

‘ಯುವತಿಯ ಮೃತದೇಹ ನಗ್ನಾವಸ್ಥೆಯಲ್ಲಿ ದೊರೆತಿದೆ. ಆಕೆಯ ಮೈಮೇಲಿನ ಬಟ್ಟೆ ಎಲ್ಲಿ ಹೋಯಿತು. ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಸಾಧ್ಯತೆ ಇದೆ. ಈ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ವರದಿ ಕೇಳಿದ ಗೃಹ ಸಚಿವಾಲಯ

‘ಕೇಂದ್ರ ಗೃಹ ಸಚಿವಾಲಯವು ಖಂಜಾವಲಾ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಂದ ವಿವರವಾದ ವರದಿ ಕೇಳಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಸೂಚನೆ ಮೇರೆಗೆ ಸಚಿವಾಲಯವು ದೆಹಲಿ ಪೊಲೀಸರಿಗೆ ವರದಿ ನೀಡುವಂತೆ ಸೂಚಿಸಿದೆ’ ಎಂದು ತಿಳಿಸಿದ್ದಾರೆ.

‘ದೆಹಲಿ ಪೊಲೀಸ್‌ ಇಲಾಖೆಯು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ಸಮಿತಿಯನ್ನೂ ರಚಿಸಿದೆ. ವಿಶೇಷ ಆಯುಕ್ತೆ ಶಾಲಿನಿ ಸಿಂಗ್‌ ಅವರು ಇದರ ಮುಖ್ಯಸ್ಥೆಯಾಗಿದ್ದಾರೆ. ಆದಷ್ಟು ಬೇಗ ಪ್ರಕರಣದ ಕುರಿತ ವರದಿ ಒಪ್ಪಿಸುವಂತೆ ಅವರಿಗೆ ಸೂಚಿಸಲಾಗಿದೆ’ ಎಂದೂ ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT