ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಹಾಂಗ್ ನಾಯಕನ ಜೊತೆ ತೋಮರ್?: ರೈತರ ಪ್ರತಿಭಟನೆಗೆ ಕಳಂಕ ತರುವ ಸಂಚು– ಕಾಂಗ್ರೆಸ್

Last Updated 20 ಅಕ್ಟೋಬರ್ 2021, 3:42 IST
ಅಕ್ಷರ ಗಾತ್ರ

ನವದೆಹಲಿ: ಸಿಂಘು ಗಡಿಯಲ್ಲಿ ಕಾರ್ಮಿಕನ ಹತ್ಯೆ, ರೈತರ ಪ್ರತಿಭಟನೆಗೆ ಕಳಂಕ ತರುವ ಸಂಚು ಎಂದು ಪಂಜಾಬ್‌ನ ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಆರೋಪಿಸಿದ್ದಾರೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ನಿಹಾಂಗ್ ಗುಂಪಿನ ನಾಯಕನೊಂದಿಗೆ ಇದ್ದಾರೆ ಎಂದು ಹೇಳಲಾದ ಚಿತ್ರವನ್ನು ಉಲ್ಲೇಖಿಸಿ ಅವರು ಆರೋಪ ಮಾಡಿದ್ದಾರೆ.

ಸುಖಜಿಂದರ್ ಸಿಂಗ್ ಉಲ್ಲೇಖಿಸಿರುವ ಗ್ರೂಪ್ ಫೋಟೊದಲ್ಲಿ ತೋಮರ್ ಜೊತೆಗೆ ಸಿಖ್ ನಿಹಾಂಗ್ ಗುಂಪಿನ ನೀಲಿ ನಿಲುವಂಗಿಯನ್ನು ಧರಿಸಿದ ವ್ಯಕ್ತಿ ಕಾಣಿಸಿಕೊಂಡಿದ್ದಾರೆ.

ಯಾವುದೇ ಹೆಸರನ್ನು ಉಲ್ಲೇಖಿಸದೆ, ಅದೇ ನಿಹಾಂಗ್ ನಾಯಕ, ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಸಮರ್ಥನೆ ಮಾಡಿದ್ದಾರೆ ಎಂದು ರಾಂಧವ ಹೇಳಿದ್ದಾರೆ. ಹತ್ಯೆಗೀಡಾದ ವ್ಯಕ್ತಿಯು ಸಿಖ್ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ್ದಾನೆ ಎಂದು ನಿಹಾಂಗ್ ಗುಂಪು ಆರೋಪಿಸಿತ್ತು.

‘ನಿಹಾಂಗ್ ನಾಯಕರ ಜೊತೆ ಕೃಷಿ ಸಚಿವ ಎನ್ ಎಸ್ ತೋಮರ್ ಸಂಪರ್ಕದಲ್ಲಿದ್ದಾರೆ ಎಂದು ಹೊಸದಾಗಿ ಬಹಿರಂಗವಾದ ವಿಷಯವು, ಕಾರ್ಮಿಕನ ಹತ್ಯೆ ಪ್ರಕರಣಕ್ಕೆ ವಿಭಿನ್ನ ತಿರುವು ನೀಡಿದೆ’ ಎಂದು ರಾಂಧವ ಆರೋಪಿಸಿದ್ದಾರೆ.

‘ರೈತರ ಹೋರಾಟಕ್ಕೆ ಕಳಂಕ ಹಚ್ಚಲು ಪಿತೂರಿ ನಡೆದಿರುವಂತೆ ಕಾಣುತ್ತಿದೆ’ ಎಂದು ಅವರು ಹೇಳಿದ್ದಾರೆ.

ಚೀಮಾ ಕಲಾನ್ ಗ್ರಾಮದ ಹತ್ಯೆಗೀಡಾದ ಲಖಬೀರ್ ಸಿಂಗ್, ಕಡು ಬಡವ ಎಂದಿರುವ ರಾಂಧವ, ‘ಆತನನ್ನು ಸಿಂಘು ಗಡಿಗೆ ಕರೆತಂದವರು ಯಾರು ಮತ್ತು ಒಂದೊತ್ತಿನ ಊಟಕ್ಕೂ ಸಮಸ್ಯೆ ಇರುವ ಅವರ ಪ್ರಯಾಣಕ್ಕೆ ಯಾರು ಹಣ ನೀಡಿದರು ಎಂಬುದನ್ನು ನಾವು ಪತ್ತೆ ಮಾಡಬೇಕಾಗಿದೆ’ ಎಂದು ಹೇಳಿದ್ದಾರೆ.

ಯಾವ ಪರಿಸ್ಥಿತಿಯಲ್ಲಿ ಆ ವ್ಯಕ್ತಿಯನ್ನು ತಮ್ಮ ಮನೆಯಿಂದ ಸಿಂಘು ಗಡಿಗೆ ಕರೆದೊಯ್ಯಲಾಗಿದೆ ಎಂಬುದನ್ನು ಪತ್ತೆ ಮಾಡಲು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಉಪ ಮುಖ್ಯಮಂತ್ರಿಸುಖಜಿಂದರ್ ಸಿಂಗ್ ರಾಂಧವ ಹೇಳಿದರು.

ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಹಲವು ಬಾರಿ ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಿ ಸಂಧಾನ ಮಾತುಕತೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT