ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜವಾದಿ ಪಕ್ಷಕ್ಕೆ ಅಹಮದಾಬಾದ್ ಸ್ಫೋಟ ಪ್ರಕರಣದ ಉಗ್ರರ ನಂಟಿದೆ: ಅನುರಾಗ್ ಠಾಕೂರ್

Last Updated 19 ಫೆಬ್ರುವರಿ 2022, 12:57 IST
ಅಕ್ಷರ ಗಾತ್ರ

ನವದೆಹಲಿ: ಸಮಾಜವಾದಿ ಪಕ್ಷವನ್ನು ‘ಅಲ್ಪಸಂಖ್ಯಾತರ ಓಲೈಕೆಯ ಸ್ನೇಹಿತರು’ಮತ್ತು ‘ಸಮಾಜ ವಿರೋಧಿ’ಎಂದು ಕರೆದಿರುವ ಬಿಜೆಪಿ, 2008ರ ಅಹಮದಾಬಾದ್ ಸ್ಫೋಟದಲ್ಲಿ ಭಾಗಿಯಾಗಿರುವ ಭಯೋತ್ಪಾದಕರೊಂದಿಗೆ ಎಸ್‌ಪಿ ಸಂಪರ್ಕ ಹೊಂದಿದೆ ಎಂದು ಆರೋಪಿಸಿದೆ.

56 ಮಂದಿ ಮೃತಪಟ್ಟು, 200ಕ್ಕೂ ಅಧಿಕ ಜನರು ಗಾಯಗೊಂಡ ಅಹಮದಾಬಾದ್‌ನ ಸರಣಿ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಶುಕ್ರವಾರ ವಿಶೇಷ ನ್ಯಾಯಾಲಯವು, ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್‌ಗೆ ಸೇರಿದ 38 ಮಂದಿಗೆ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಸಹ ವಿಧಿಸಲಾಗಿತ್ತು.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು, ಚಿತ್ರವೊಂದನ್ನು ಪ್ರದರ್ಶಿಸಿದ್ದು, ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಯ ತಂದೆ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಜೊತೆಗೆ ನಿಂತಿರುವುದು ಕಂಡು ಬಂದಿದೆ. ಈ ಚಿತ್ರವನ್ನು ಉಲ್ಲೇಖಿಸಿದ ಅನುರಾಗ್ ಠಾಕೂರ್ ಅವರು, ಎಸ್‌ಪಿಗೆ ಅಹಮದಾಬಾದ್ ಸ್ಫೋಟದ ಉಗ್ರರ ಜೊತೆ ನಂಟಿದೆ ಎಂದು ದೂರಿದ್ದಾರೆ.

ಭಯೋತ್ಪಾದನೆ ಬಗ್ಗೆ ಬಿಜೆಪಿ ಯಾವಾಗಲೂ ಶೂನ್ಯ ಸಹಿಷ್ಣುತೆ ಹೊಂದಿದೆ. ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾದವರ ಬಗ್ಗೆ ಸಮಾಜವಾದಿ ಪಕ್ಷದ ನಿಲುವೇನು?. ಉತ್ತರ ಪ್ರದೇಶದ ಅಹಮದಾಬಾದ್‌ ಸರಣಿ ಸ್ಫೋಟ ಪ್ರಕರಣಕ್ಕೂ ಎಸ್‌ಪಿ ನಾಯಕರಿಗೂ ನೇರ ಸಂಬಂಧವಿದೆ ಎಂದು ಅವರು ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ವಿಧಾನಸಭೆಗೆ ಮೂರನೇ ಹಂತದ ಮತದಾನ ನಡೆಯುವ ಒಂದು ದಿನ ಮೊದಲು ಅನುರಾಗ್ ಠಾಕೂರ್ ಈ ಆರೋಪ ಮಾಡಿದ್ದಾರೆ.

ಅಖಿಲೇಶ್ ಯಾದವ್ ಅವರನ್ನು ಗುರಿಯಾಗಿಸಿಕೊಂಡು, ‘ಬಾಯಲ್ಲಿ ರಾಮನಾಮ, ನಿಂತಿರುವುದು ಭಯೋತ್ಪಾದಕರ ಪರ. ಇದು ಸಮಾಜವಾದಿ ಪಕ್ಷವಲ್ಲ, ಸಮಾಜ ವಿರೋಧಿ ಪಕ್ಷ. ಅಲ್ಪಸಂಖ್ಯಾತರ ಓಲೈಕೆಯಷ್ಟೇ ಇವರ ಉದ್ದೇಶ’ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT