ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಸಾಗಾಟದ ಟ್ಯಾಂಕರ್‌ ತಡೆಯುವಂತಿಲ್ಲ

ರಾಜ್ಯ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ತಾಕೀತು lವಿಪತ್ತು ನಿರ್ವಹಣಾ ಕಾಯ್ದೆ ಜಾರಿ l ಟ್ಯಾಂಕರ್ ಸಂಚಾರಕ್ಕೆ ರಾತ್ರಿ ಕರ್ಫ್ಯೂ ಅನ್ವಯ ಇಲ್ಲ
Last Updated 22 ಏಪ್ರಿಲ್ 2021, 21:09 IST
ಅಕ್ಷರ ಗಾತ್ರ

ನವದೆಹಲಿ: ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಸಾಗಿಸುತ್ತಿರುವ ಟ್ಯಾಂಕರ್‌ಗಳು, ಆಮ್ಲಜನಕ ಸಿಲಿಂಡರ್‌ಗಳನ್ನು ಸಾಗಿಸುತ್ತಿರುವ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಿದೆ.

‘ಪ್ರತಿರಾಜ್ಯಕ್ಕೆ ಪ್ರತಿದಿನ ಇಂತಿಷ್ಟು ಟನ್‌ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದ್ದರೂ, ಅದು ಪೂರೈಕೆಯಾಗುತ್ತಿಲ್ಲ. ನಮಗೆ ಹಂಚಿಕೆಯಾಗಿರುವ ಆಮ್ಲಜನಕವನ್ನು ಹರಿಯಾಣ ಮತ್ತು ಉತ್ತರ ಪ್ರದೇಶ ಪೂರೈಸುತ್ತಿಲ್ಲ’ ಎಂದು ದೆಹಲಿ ಸರ್ಕಾರವು, ದೆಹಲಿ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌, ‘ರಾಜ್ಯಗಳಿಗೆ ಹಂಚಿಕೆಯಾಗಿರುವ ಆಮ್ಲಜನಕವು ಸರಿಯಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳಿ’ ಎಂದು ಕೇಂದ್ರ ಸರ್ಕಾರಕ್ಕೆ ಗುರುವಾರ ಬೆಳಿಗ್ಗೆ ತಾಕೀತು ಮಾಡಿತ್ತು.

ಹರಿಯಾಣ ಮತ್ತು ಉತ್ತರ ಪ್ರದೇಶದ ಪೊಲೀಸರು ಹಾಗೂ ಅಧಿಕಾರಿಗಳು ದೆಹಲಿಗೆ ಬರುತ್ತಿರುವ ಆಮ್ಲಜನಕದ ಟ್ಯಾಂಕರ್‌ಗಳನ್ನು ತಡೆದು ನಿಲ್ಲಿಸುತ್ತಿದ್ದಾರೆ. ಆ ಟ್ಯಾಂಕರ್‌ಗಳು ದೆಹಲಿ ಆಸ್ಪತ್ರೆಯನ್ನು ತಲುಪುತ್ತಲೇ ಇಲ್ಲ. ಈ ಸಮಸ್ಯೆಯನ್ನು ಬಗೆಹರಿಸಿ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್‌‌ ಸಿಸೋಡಿಯಾ ಅವರು, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಗೆ ಪತ್ರ
ಬರೆದಿದ್ದಾರೆ.

ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿ ಮಾಡಿ ಆದೇಶ ಹೊರಡಿಸಿದೆ. ಆಮ್ಲಜನಕದ ಟ್ಯಾಂಕರ್‌ ಮತ್ತು ಆಮ್ಲಜನಕದ ಸಿಲಿಂಡರ್ ಸಾಗಿಸುತ್ತಿರುವ ವಾಹನಗಳ ಓಡಾಟಕ್ಕೆ ಯಾವುದೇ ಅಡಚಣೆಯಾಗಬಾರದು ಎಂದು ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಿದೆ.

‘ಆಯಾ ರಾಜ್ಯಗಳಿಗೆ ಹಂಚಿಕೆಯಾಗಿರುವ ಆಮ್ಲಜನಕವನ್ನು ಆಯಾ ರಾಜ್ಯಗಳಿಗೇ ಪೂರೈಕೆ ಮಾಡಬೇಕು. ಆಮ್ಲಜನಕ ತಯಾರಿಕಾ ಘಟಕಗಳು ಇರುವ ರಾಜ್ಯಗಳಿಗೆ ಮಾತ್ರವೇ ಪೂರೈಕೆ ಮಾಡಿ ಬೇರೆ ರಾಜ್ಯಗಳಿಗೆ ಪೂರೈಕೆ ಕಡಿತ ಮಾಡುವ ಹಾಗಿಲ್ಲ’ ಎಂದು ಆಮ್ಲಜನಕ ತಯಾರಿಕಾ ಘಟಕಗಳಿಗೆ ಕೇಂದ್ರ ಗೃಹ ಸಚಿವಾಲಯವು ತಾಕೀತು ಮಾಡಿದೆ.

‘ಆಯಾ ರಾಜ್ಯಗಳಿಗೆ ಹಂಚಿಕೆಯಾಗಿರುವ ಆಮ್ಲಜನಕವನ್ನು ಕಡ್ಡಾಯವಾಗಿ ಪೂರೈಕೆ ಮಾಡಬೇಕು. ತಮ್ಮ ರಾಜ್ಯದಲ್ಲಿ ತಯಾರಾಗುವ ಆಮ್ಲಜನಕವನ್ನು ಬೇರೆ ರಾಜ್ಯಗಳಿಗೆ ಪೂರೈಕೆ ಮಾಡಲು ರಾಜ್ಯ ಸರ್ಕಾರಗಳು ಅಡಚಣೆ ಉಂಟು ಮಾಡಬಾರದು. ಅಡಚಣೆ ಉಂಟಾಗದಂತೆ ನೋಡಿಕೊಳ್ಳುವ ಹೊಣೆ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಸಂಬಂಧಿತ ಅಧಿಕಾರಿಗಳದ್ದು. ಅಡಚಣೆಯಾದರೆ ಈ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ’ ಎಂದು ಕೇಂದ್ರ ಗೃಹ ಸಚಿವಾಲಯವು
ಹೇಳಿದೆ.

ಕೇಂದ್ರದ ಕಟ್ಟುನಿಟ್ಟಿನ ಸೂಚನೆ

lಆಮ್ಲಜನಕ ತಯಾರಕರು ಮತ್ತು ಪೂರೈಕೆದಾರರ ಮೇಲೆ ರಾಜ್ಯ ಸರ್ಕಾರಗಳು ಯಾವುದೇ ರೀತಿಯ ನಿರ್ಬಂಧ ಹೇರಬಾರದು

lಏಪ್ರಿಲ್‌ 22ರಿಂದ ಆನ್ವಯವಾಗುವಂತೆ ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಕೆ ನಿಷೇಧಿಸಲಾಗಿದೆ. ಮುಂದಿನ ಆದೇಶ ಜಾರಿಗೆ ಬರುವವರೆಗೂ ಈ ನಿಷೇಧ ಜಾರಿಯಲ್ಲಿರಲಿದೆ

lಆಮ್ಲಜನಕವು ಅಗತ್ಯವಸ್ತುಗಳ ಪಟ್ಟಿಯಲ್ಲಿ ಬರುತ್ತದೆ. ಅದನ್ನು ಸಾಗಿಸುವ ಟ್ಯಾಂಕರ್ ಮತ್ತು ಆಮ್ಲಜನಕದ ಸಿಲಿಂಡರ್ ಸಾಗಿಸುವ ವಾಹನಗಳೂ ಇದೇ ಪಟ್ಟಿಗೆ ಬರುತ್ತವೆ. ಹೀಗಾಗಿ ಈ ವಾಹನಗಳ ಸಂಚಾರಕ್ಕೆ ಅಡಚಣೆ ಮಾಡಬಾರದು

lರಾಜ್ಯಗಳಲ್ಲಿ ಎಂಥಹದ್ದೇ ನಿರ್ಬಂಧ, ಕರ್ಫ್ಯೂ ಜಾರಿಯಲ್ಲಿದ್ದರೂ ಈ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಬಾರದು

lಈ ನಿಯಮ ದಿನದ 24 ಗಂಟೆಯೂ ಅನ್ವಯವಾಗುತ್ತದೆ. ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದರೂ, ಈ ವಾಹನಗಳ ಸಂಚಾರಕ್ಕೆ ಅಡಚಣೆಯಾಗಬಾರದು

ಟ್ಯಾಂಕರ್‌ಗಳ ಕೊರತೆ

ನವದೆಹಲಿ (ಪಿಟಿಐ): ನಮ್ಮ ಘಟಕಗಳಲ್ಲಿ ತಯಾರಿಸಲಾಗುತ್ತಿರುವ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು (ಎಲ್‌ಎಂಒ) ಪೂರೈಕೆ ಮಾಡುವಲ್ಲಿ ಟ್ಯಾಂಕರ್‌ಗಳ ಕೊರತೆ ಉಂಟಾಗಿದೆ ಎಂದು ಟಾಟಾ ಸ್ಟೀಲ್‌ ಮತ್ತು ಜೆಎಸ್‌ಪಿಎಲ್‌ ಕಂಪನಿಗಳು ಹೇಳಿವೆ.

‘ನಾವು ಈಗ ಪ್ರತಿದಿನ ಉತ್ತರ ಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ, ಜಾರ್ಖಂಡ್‌, ಒಡಿಶಾ, ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ 300 ಟನ್ ಆಮ್ಲಜನಕ ಪೂರೈಕೆ ಮಾಡುತ್ತಿದ್ದೇವೆ. ಪ್ರತಿದಿನ ಪೂರೈಸುವ ಆಮ್ಲಜನಕ ಪ್ರಮಾಣವನ್ನು ಹೆಚ್ಚಿಸುವ ಸಾಮರ್ಥ್ಯವಿದೆ. ಆದರೆ, ಸಂಗ್ರಹ ಮತ್ತು ಪೂರೈಕೆ ಮಾಡಲು ಅಗತ್ಯ ಪ್ರಮಾಣದಷ್ಟು ಟ್ಯಾಂಕರ್‌ಗಳ ಲಭ್ಯತೆ ಇಲ್ಲ. ಆಮ್ಲಜನಕ ಸಾಗಿಸುವ ಕಂಟೇನರ್‌ ಮತ್ತು ಟ್ರೇಲರ್‌ಗಳ ಕೊರತೆ ಇದೆ’ ಎಂದು ಟಾಟಾ ಸ್ಟೀಲ್‌ ಹೇಳಿದೆ.

‘ಟ್ಯಾಂಕರ್‌ಗಳ ಕೊರತೆ ಸಮಸ್ಯೆ ಶೀಘ್ರವೇ ಬಗೆಹರಿಯುತ್ತದೆ ಎಂದು ನಿರೀಕ್ಷಿಸಿದ್ದೇವೆ. ಪರ್ಯಾಯ ಮೂಲಗಳಿಂದಲೂ ಟ್ಯಾಂಕರ್‌ಗಳನ್ನು ಗೊತ್ತು ಮಾಡಲು ಯತ್ನಿಸುತ್ತಿದ್ದೇವೆ’ ಎಂದು ಟಾಟಾ ಸ್ಟೀಲ್‌ ಹೇಳಿದೆ.

‘ಟ್ಯಾಂಕರ್‌ಗಳ ಕೊರತೆ ಖಂಡಿತಾ ಇದೆ. ದೇಶದಲ್ಲಿರುವ ಎಲ್ಲಾ ಆಮ್ಲಜನಕ ಟ್ಯಾಂಕರ್‌ಗಳ ಸಂಖ್ಯೆಯನ್ನು ಒಂದೆಡೆ ಕಲೆಹಾಕಬೇಕು. ಟ್ಯಾಂಕರ್‌ಗಳನ್ನು ನಿಗದಿತ ರಾಜ್ಯಗಳಿಗೆ ನಿಯೋಜನೆ ಮಾಡಬೇಕು. ಈಗ ಪ್ರತಿದಿನ 100 ಟನ್ ಆಮ್ಲಜನಕ ಪೂರೈಕೆ ಮಾಡುತ್ತಿದ್ದೇವೆ. ಟ್ಯಾಂಕರ್‌ಗಳು ಲಭ್ಯವಾದರೆ, ಪ್ರತಿದಿನ 500 ಟನ್‌ ಆಮ್ಲಜನಕ ಪೂರೈಸುತ್ತೇವೆ' ಎಂದು ಜೆಎಸ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ವಿ.ಆರ್‌.ಶರ್ಮಾ ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ ತನ್ನ ಘಟಕಗಳಿಂದ ಪ್ರತಿದಿನ 600 ಟನ್‌ ಆಮ್ಲಜನಕ ಪೂರೈಕೆ ಮಾಡುತ್ತಿದೆ.

ದಿನದ ಬೆಳವಣಿಗೆಗಳು

lದೆಹಲಿಯಲ್ಲಿನ ಹಲವು ಆಸ್ಪತ್ರೆಗಳು, ನೋಯ್ಡಾದ ಒಂದು ಆಸ್ಪತ್ರೆಯಲ್ಲಿ ಆಮ್ಲಜನಕ ಸಂಗ್ರಹ ಮುಗಿದಿದೆ

lದೆಹಲಿಗೆ ಹಂಚಿಕೆಯಾಗಿರುವಷ್ಟು ಆಮ್ಲಜನಕವನ್ನು ಪ್ರತಿದಿನವೂ ಪೂರೈಕೆ ಮಾಡುತ್ತಿದ್ದೇವೆ ಎಂದು ಹರಿಯಾಣ ಸರ್ಕಾರ ಸ್ಪಷ್ಟನೆ ನೀಡಿದೆ

lದೆಹಲಿಗೆ ಬರುವ ಆಮ್ಲಜನಕದ ಟ್ಯಾಂಕರ್ ಮತ್ತು ವಾಹನಗಳ ಪ್ರವೇಶ-ನಿರ್ಬಂಧ ದಾಖಲೆ ನಿರ್ವಹಣೆ ಮಾಡುತ್ತೇವೆ. ಆಗ ಎಷ್ಟು ಆಮ್ಲಜನಕ ಪೂರೈಕೆಯಾಗುತ್ತಿದೆ ಎಂಬುದರ ಲೆಕ್ಕ ಸಿಗುತ್ತದೆ ಎಂದು ದೆಹಲಿ ಸರ್ಕಾರ ಹೇಳಿದೆ

lಒಡಿಶಾದಲ್ಲಿ ಹೆಚ್ಚು ಆಮ್ಲಜನಕ ತಯಾರಾಗುತ್ತಿದ್ದು, ಕೇಂದ್ರ ಸರ್ಕಾರವು ಸಹಕಾರ ನೀಡಿದರೆ ಹೆಚ್ಚುವರಿ ಆಮ್ಲಜನಕವನ್ನು ಬೇರೆ ರಾಜ್ಯಗಳಿಗೆ ಪೂರೈಕೆ ಮಾಡಲು ಸಿದ್ಧರಿದ್ದೇವೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದಾರೆ

lಒಡಿಶಾದಿಂದ ಆಮ್ಲಜನಕವನ್ನು ಏರ್‌ಲಿಫ್ಟ್‌ ಮಾಡಲೂ ಸಿದ್ಧರಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ

ಸ್ಟೆರ್‌ಲೈಟ್‌ ಘಟಕಕ್ಕೆ ಅವಕಾಶ: ವಿಚಾರಣೆಗೆ ಒಪ್ಪಿಗೆ

ತೂತ್ತುಕುಡಿಯಲ್ಲಿನ ಸ್ಟೆರ್‌ಲೈಟ್ ತಾಮ್ರ ಸಂಸ್ಕರಣ ಘಟಕದಲ್ಲಿ ಆಮ್ಲಜನಕ ತಯಾರಿಕೆಗೆ ಅನುಮತಿ ನೀಡಲು ತಮಿಳುನಾಡು ಸರ್ಕಾರವು ನಿರಾಕರಿಸಿದೆ. ಈ ವಿಚಾರದಲ್ಲಿ ತಮಿಳುನಾಡು ಸರ್ಕಾರವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ‘ದೇಶದಲ್ಲಿ ಈಗ ರಾಷ್ಟ್ರೀಯ ತುರ್ತು ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಬೇರೆ ಅಂಶಗಳನ್ನು ಬದಿಗೆ ಇರಿಸಿ, ಇಂತಹ ಕೆಲಸಗಳಿಗೆ ಆದ್ಯತೆ ನೀಡಬೇಕು’ ಎಂದು ಹೇಳಿದೆ. ಆಮ್ಲಜನಕ ತಯಾರಿಕೆಗೆ ಅನುಮತಿ ಕೋರಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಹೇಳಿದೆ.

***

ಉತ್ತರ ಪ್ರದೇಶ ಮತ್ತು ಹರಿಯಾಣದಿಂದ ದೆಹಲಿಗೆ ಹೊರಟ ಆಮ್ಲಜನಕದ ಟ್ಯಾಂಕರ್‌ಗಳು ದೆಹಲಿ ತಲುಪುತ್ತಿಲ್ಲ. ಅವನ್ನು ಅಲ್ಲಿನ ಅಧಿಕಾರಿಗಳು ತಡೆದು ನಿಲ್ಲಿಸುತ್ತಿದ್ದಾರೆ. -ಮನೀಷ್ ಸಿಸೋಡಿಯಾ, ದೆಹಲಿ ಉಪಮುಖ್ಯಮಂತ್ರಿ

ಎಲ್ಲಾ ರಾಜ್ಯಗಳಿಗೆ ಆಮ್ಲಜನಕ ಪೂರೈಸುವುದು ಕೇಂದ್ರದ ಕೈಯಲ್ಲಿದೆ. ಕೇಂದ್ರ ಸರ್ಕಾರದ ಕಾಲಿಗೆ ಬೇಕಿದ್ದರೂ ಬೀಳುತ್ತೇನೆ, ಅಗತ್ಯವಿರುವಷ್ಟು ಆಮ್ಲಜನಕ ಪೂರೈಸಿ.

-ರಾಜೇಶ್ ಟೋಪೆ, ಮಹಾರಾಷ್ಟ್ರ ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT