ಗುರುವಾರ , ಮೇ 19, 2022
23 °C

ಕೋವಿಡ್ ನಂತರದ ಜಗತ್ತು ರೂಪಿಸುವಲ್ಲಿ ಭಾರತ-ಆಸ್ಟ್ರೇಲಿಯಾ ಪ್ರಮುಖ ಪಾತ್ರ: ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್-19 ನಂತರದ ಜಗತ್ತು ರೂಪಿಸುವಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾದ ಪ್ರಬಲ ಸಹಭಾಗಿತ್ವವು ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ ಸರ್ಕ್ಯುಲರ್‌ ಎಕಾನಮಿಯ (ಚಕ್ರೀಯ ಅರ್ಥವ್ಯವಸ್ಥೆ) ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಉಭಯ ದೇಶಗಳು ಮುಂದಾಗಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.

ಭಾರತ-ಆಸ್ಟ್ರೇಲಿಯಾ ಸರ್ಕ್ಯುಲರ್‌ ಎಕಾನಮಿ ಹ್ಯಾಕಥಾನ್ ಕಾರ್ಖವೈಖರಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಳಕೆ ಆಧಾರಿತ ಅರ್ಥವ್ಯವಸ್ಥೆ ಮಾದರಿಗಳು ಜಗತ್ತಿನ ಮೇಲೆ ಹೆಚ್ಚಿನ ಒತ್ತಡವನ್ನು ಬೀರಿವೆ ಎಂದರು.

ಭೂತಾಯಿ ನೀಡುವ ಎಲ್ಲ ಸಂಪತ್ತಿಗೂ ನಾವು ಮಾಲೀಕರಲ್ಲ ಎಂಬುದನ್ನು ಎಂದಿಗೂ ಮರೆಯಬಾರದು. ನಾವು ಮುಂದಿನ ಪೀಳಿಗೆಯ ಪರಿಪಾಲಕರಾಗಿದ್ದೇವೆ ಎಂದು ತಿಳಿಸಿದರು.

ಉತ್ಪಾದನಾ ಪ್ರಕ್ರಿಯೆಗಳನ್ನು ಹೆಚ್ಚು ಪರಿಣಾಮಕಾರಿ ಹಾಗೂ ಕಡಿಮೆ ಮಾಲಿನ್ಯಕಾರಕವಾಗಿಸುವುದು ಮಾತ್ರ ಪರಿಹಾರವಲ್ಲ ಎಂಬುದನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ನಾವು ಎಷ್ಟೇ ವೇಗವಾಗಿ ಅಥವಾ ನಿಧಾನವಾಗಿ ಸಾಗಿದರೂ ಗುರಿ ತಪ್ಪಾಗಿದ್ದರೆ, ತಪ್ಪಾದ ಗಮ್ಯ ಸ್ಥಾನವನ್ನೇ ತಲುಪಲಿದ್ದೇವೆ. ಈ ನಿಟ್ಟಿನಲ್ಲಿ ಸರಿಯಾದ ದಿಶೆಯನ್ನು ಹೊಂದಿರಬೇಕು ಎಂದು ಹೇಳಿದರು.

ಇದನ್ನೂ ಓದಿ: 

ಅನೇಕ ಸವಾಲುಗಳಿಗೆ ಪರಿಹಾರ ಕಲ್ಪಿಸುವಲ್ಲಿ ಸರ್ಕ್ಯುಲರ್‌ ಎಕಾನಮಿ ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. ವಸ್ತುಗಳ ಮರು ಬಳಕೆ, ತ್ಯಾಜ್ಯವನ್ನು ಹೋಗಲಾಡಿಸುವುದು, ಸಂಪನ್ಮೂಲ ದಕ್ಷತೆಯನ್ನು ಸುಧಾರಿಸುವುದು ನಮ್ಮ ಜೀವನಶೈಲಿಯ ಭಾಗವಾಗಬೇಕು ಎಂದು ಹೇಳಿದರು.

ಈ ಹ್ಯಾಕಥಾನ್ ಭಾರತ ಹಾಗೂ ಆಸ್ಟ್ರೇಲಿಯಾದ ವಿದ್ಯಾರ್ಥಿಗಳು, ಸ್ಟಾರ್ಟ್ಅಪ್‌, ಉದ್ಯಮಿಗಳಿಗೆ ನಾವೀನ್ಯ ಪರಿಹಾರಗಳನ್ನು ಒದಗಿಸಲಿದೆ. ಇದು ಸರ್ಕ್ಯುಲರ್‌ ಎಕಾನಮಿ ಸಿದ್ಧಾಂತವನ್ನು ಪಾಲಿಸುವುದರತ್ತ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ತಿಳಿಸಿದರು.

ಸರ್ಕ್ಯುಲರ್‌ ಎಕಾನಮಿ ವ್ಯವಸ್ಥೆಯಲ್ಲಿ ಸಂಪನ್ಮೂಲಗಳನ್ನು ಬಳಕೆ ಮಾಡಿದ ಬಳಿಕ ಅದನ್ನು ವ್ಯರ್ಥ ಮಾಡುವ ಬದಲು ಮರು ಬಳಕೆ ಮಾಡಿ ಹೊಸ ಉತ್ಪನ್ನಗಳ ತಯಾರಿಯ ಮೂಲಕ ಪುನರ್‌ ಉಪಯೋಗಕ್ಕೆ ಬಳಸಲಾಗುತ್ತದೆ.

ಇಲ್ಲಿ ಯುವ ಶಕ್ತಿಯ ಹೊಸ ಆಲೋಚನೆಗಳು ಹಾಗೂ ಅವಿಷ್ಕಾರಗಳು ಅಪಾಯವನ್ನು ದೂರ ಮಾಡಲು ಸಹಕಾರಿಯಾಗಲಿದೆ ಎಂದು ಮೋದಿ ಹೇಳಿದರು.

ನಮ್ಮ ಯುವಕರ ಶಕ್ತಿ, ಸೃಜನಶೀಲತೆ ಮತ್ತು ಚಿಂತನೆಯ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಅಲ್ಲದೆ ಇಡೀ ಜಗತ್ತಿಗೆ ಸುಸ್ಥಿರ, ಸಮಗ್ರ ಪರಿಹಾರಗಳನ್ನು ಕಂಡುಕೊಳ್ಳಬಲ್ಲರು. ಕೋವಿಡ್ ನಂತರದ ಜಗತ್ತನ್ನು ರೂಪಿಸುವಲ್ಲಿ ಭಾರತ-ಆಸ್ಟ್ರೇಲಿಯಾ ಪ್ರಬಲ ಸಹಭಾಗಿತ್ವವು ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು