ಮಂಗಳವಾರ, ಮಾರ್ಚ್ 28, 2023
23 °C

ಮರುಪಾವತಿ ಮುಂದೂಡಿಕೆ ಸಾಲಗಾರರಿಗೆ ‘ಸುಪ್ರೀಂ’ ರಕ್ಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಈ ವರ್ಷದ ಆಗಸ್ಟ್‌ 31ರವರೆಗೆ ವಸೂಲಾಗದ ಸಾಲ (ಎನ್‌ಪಿಎ) ಎಂದು ಘೋಷಿಸಿಲ್ಲದ ಸಾಲ ಖಾತೆಗಳನ್ನು ಮುಂದಿನ ಆದೇಶದವರೆಗೆ  ಎನ್‌ಪಿಎ ಆಗಿ ಘೋಷಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ. 

ಕೋವಿಡ್‌ ಪಿಡುಗಿನಿಂದಾದ ಆರ್ಥಿಕ ಸಂಕಷ್ಟದ ಕಾರಣಕ್ಕೆ ಸಾಲ ಮರುಪಾವತಿಯನ್ನು ಮುಂದೂಡಲಾಗಿತ್ತು. ಈ ಅವಧಿಯ ಬಡ್ಡಿ ಮನ್ನಾ ಮಾಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪೀಠ ನಡೆಸಿತು. 

‘ಕನಿಷ್ಠ ಎರಡು ತಿಂಗಳಿಗೆ ಯಾವುದೇ ಖಾತೆಯನ್ನು ಎನ್‌ಪಿಎ ಆಗಿ ಘೋಷಿಸಲಾಗುವುದಿಲ್ಲ’ ಎಂದು ಬ್ಯಾಂಕುಗಳ ಸಂಘದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ ಹೇಳಿಕೆ ನೀಡಿದರು. ಆ ಬಳಿಕ, ಆ. 31ರವರೆಗೆ ಎನ್‌ಪಿಎ ಆಗಿಲ್ಲದ ಖಾತೆಗಳನ್ನು ಮುಂದಿನ ಆದೇಶದವರೆಗೆ ಎನ್‌ಪಿಎಯಾಗಿ ಘೋಷಿಸಬಾರದು ಎಂದು ಪೀಠವು ನಿರ್ದೇಶನ ಕೊಟ್ಟಿತು. 

ಮರುಪಾವತಿ ಮುಂದೂಡಿಕೆ ಅವಧಿಯ ಬಡ್ಡಿ ಮನ್ನಾ ಮಾಡುವುದು ಆರ್ಥಿಕತೆಯ ಚೇತರಿಕೆಗೆ ಪೂರಕವಾದ ಆಯ್ಕೆ ಅಲ್ಲ ಎಂಬುದು ಜಗತ್ತಿನಾದ್ಯಂತ ಸ್ವೀಕೃತವಾದ ನಿಲುವಾಗಿದೆ ಎಂದು ಕೇಂದ್ರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಪರವಾಗಿ ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಹೇಳಿದರು.  ಬ್ಯಾಂಕುಗಳು ಅರ್ಥವ್ಯವಸ್ಥೆಯ ಬೆನ್ನೆಲುಬು ಇದ್ದಂತೆ ಮತ್ತು ಪ್ರತಿ ವಲಯ ಮತ್ತು ಪ್ರತಿ ಅರ್ಥವ್ಯವಸ್ಥೆಯು ಕೋವಿಡ್‌ ಪಿಡುಗಿನಿಂದಾಗಿ ಒತ್ತಡಕ್ಕೆ ಒಳಗಾಗಿದೆ ಎಂದು ಅವರು ವಿವರಿಸಿದರು. 

‘ಬಡ್ಡಿಯ ಮೇಲೆ ಬಡ್ಡಿ ವಿಧಿಸುವುದು ನಮ್ಮ ಕಾಳಜಿಯ ವಿಷಯವಾಗಿದೆ’ ಎಂದು ಅರ್ಜಿದಾರರ ಕೋರಿಕೆಯನ್ನು ಉಲ್ಲೇಖಿಸಿ ಪೀಠವು ಹೇಳಿತು. ಈ ವಿಚಾರದಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ವಿಚಾರಣೆಯನ್ನು ಸೆ. 10ಕ್ಕೆ ಮುಂದೂಡಲಾಗಿದೆ. 

ಮರುಪಾವತಿ ಮುಂದೂಡಿಕೆ ಅವಧಿಯ ಬಡ್ಡಿಯನ್ನು ಮನ್ನಾ ಮಾಡುವುದು ‘ಹಣಕಾಸಿನ ಮೂಲ ನಿಯಮ’ಗಳಿಗೆ ವಿರುದ್ಧ. ಅಲ್ಲದೆ, ನಿಯಮಿತವಾಗಿ ಮರಪಾವತಿ ಮಾಡಿದವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಇತ್ತೀಚೆಗೆ ಹೇಳಿತ್ತು. ಆರ್ಥಿಕ ಸಂಕಷ್ಟದಲ್ಲಿರುವ ಸಾಲಗಾರರಿಗೆ ಮರುಪಾವತಿ ಮುಂದೂಡಿಕೆಯನ್ನು ಎರಡು ವರ್ಷ ವಿಸ್ತರಿಸುವ ಅವಕಾಶ ಇದೆ ಎಂದು ಆರ್‌ಬಿಐ ಕೂಡ ಹೇಳಿತ್ತು. 

ವಿವಿಧ ಕ್ಷೇತ್ರಗಳ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಲು ಸಮಿತಿಗಳನ್ನು ರಚಿಸಲಾಗುವುದು. ವಿದ್ಯುತ್ ಕ್ಷೇತ್ರ ಮತ್ತು ವಿದ್ಯುತ್‌ ವಿತರಣೆ ಕಂಪನಿಗಳು ಸಂಕಷ್ಟದಲ್ಲಿವೆ. ಈ ವಲಯಕ್ಕೆ ಸಾಲದ ಅಗತ್ಯ ಇದೆ. ವಿದ್ಯುತ್‌ ಕ್ಷೇತ್ರದ ಪೂರ್ಣ ಹೊರೆಯನ್ನು ಬ್ಯಾಂಕುಗಳು ಭರಿಸುವುದು ಸಾಧ್ಯವಿಲ್ಲ ಎಂದು ಸಾಳ್ವೆ ಹೇಳಿದರು. 

‘ಉದ್ಯೋಗ ಕಳೆದುಕೊಂಡಿರುವ ವ್ಯಕ್ತಿಗಳು ತಮ್ಮ ಮನೆ ಮತ್ತು ಕಾರು ಕಳೆದುಕೊಳ್ಳಬಹುದು. ಮನೆ ಖರೀದಿಸಿದ ವ್ಯಕ್ತಿಯ ಸಮಸ್ಯೆಗೂ ಡಿಎಲ್‌ಎಫ್‌ ಅಥವಾ ಬೇರೆ ದೊಡ್ಡ ರಿಯಲ್‌ ಎಸ್ಟೇಟ್‌ ಕಂಪನಿಯ ಸಮಸ್ಯೆಗೂ ವ್ಯತ್ಯಾಸ ಇದೆ’ ಎಂದು ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು