ಬುಧವಾರ, ಮೇ 18, 2022
23 °C
ಆದಾಯ ಮಿತಿ ಪ್ರಶ್ನಿಸಿದ ಅರ್ಜಿಯ ಅಂತಿಮ ವಿಚಾರಣೆ ಮಾರ್ಚ್‌ 3ನೇ ವಾರಕ್ಕೆ ನಿಗದಿ

ಇಡಬ್ಲ್ಯೂಎಸ್‌ಗೆ ಮೀಸಲಾತಿ ಅನುಷ್ಠಾನಕ್ಕೆ ‘ಸುಪ್ರೀಂ’ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 2021–22ನೇ ಶೈಕ್ಷಣಿಕ ವರ್ಷದ ನೀಟ್ (ಪದವಿ ಮತ್ತು ಪಿಜಿ) ಪ್ರವೇಶಕ್ಕೆ ಸಂಬಂಧಿಸಿ ಅಖಿಲ ಭಾರತ ಕೋಟಾದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ (ಇಡಬ್ಲ್ಯೂಎಸ್) ಅಭ್ಯರ್ಥಿಗಳಿಗೆ ಶೇ 10ರಷ್ಟು ಮೀಸಲಾತಿಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಗುರುವಾರ ಅನುಮತಿ ನೀಡಿತು.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಎ.ಎಸ್‌.ಬೋಪಣ್ಣ ಅವರಿದ್ದ ನ್ಯಾಯಪೀಠ ಈ ಕುರಿತ ಅರ್ಜಿಯ ವಿಚಾರಣೆ ನಡೆಸಿತು.

ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಲು ನಿಗದಿಪಡಿಸಿರುವ ವಾರ್ಷಿಕ ₹ 8 ಲಕ್ಷ ಆದಾಯ ಮಿತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಅಂತಿಮ ವಿಚಾರಣೆಯನ್ನು ಮಾರ್ಚ್‌ ಮೂರನೇ ವಾರ ನಿಗದಿಪಡಿಸುವುದಾಗಿಯೂ ನ್ಯಾಯಪೀಠ ಹೇಳಿತು.

‘ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಿಗದಿ ಮಾಡಿರುವ ಅರ್ಹತೆಯಲ್ಲಿ ಮಾಡುವ ಯಾವುದೇ ಬದಲಾವಣೆ ಗೊಂದಲ ಸೃಷ್ಟಿಸುತ್ತದೆ. ಅಲ್ಲದೇ, ಕೋವಿಡ್‌–19 ಪಿಡುಗಿನ ಈ ಸಂದರ್ಭದಲ್ಲಿ ಪ್ರವೇಶ ಪ್ರಕ್ರಿಯೆ ಮತ್ತಷ್ಟೂ ವಿಳಂಬವಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಈ ವರ್ಗದ ಅಭ್ಯರ್ಥಿಗಳ ಪ್ರವೇಶಕ್ಕೆ ಮಾನದಂಡ ನಿಗದಿ ಮಾಡುವಾಗ ಸರಿಯಾದ ಕ್ರಮಗಳನ್ನು ಅನುಸರಿಸಿಲ್ಲ ಎಂಬ ಆರೋಪಗಳಿವೆ. ಹೀಗಾಗಿ, ಸಂಬಂಧಪಟ್ಟ ಎಲ್ಲ ಕಕ್ಷಿದಾರರ ವಾದಗಳನ್ನು ಆಲಿಸದೇ ಈ ಆರೋಪಗಳ ಕುರಿತು ಮೇಲ್ನೋಟಕ್ಕೆ ಅಭಿಪ್ರಾಯ ತಳೆಯಲಾಗದು’ ಎಂದೂ ನ್ಯಾಯಪೀಠ ಹೇಳಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು