ಮಂಗಳವಾರ, ಮೇ 11, 2021
25 °C
ಅಧ್ಯಕ್ಷ, ಖಜಾಂಚಿ ಸರ್ಕಾರಿ ನೌಕರರೇ; ಲೋಕಾಯುಕ್ತ ಪ್ರತಿಪಾದನೆ

ಶಿಕ್ಷಕರ ಸಂಘದ ವಂಚನೆ: ರಾಜ್ಯ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್‌ ನೀಡಿರುವ ಆದೇಶದ ಸಿಂಧುತ್ವ ಪ್ರಶ್ನಿಸಿ ಕರ್ನಾಟಕ ಲೋಕಾಯುಕ್ತದಿಂದ ಸಲ್ಲಿಕೆಯಾಗಿರುವ ಮೇಲ್ಮನವಿಯ ವಿಚಾರಣೆ ಕುರಿತು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ.

ಸಂಘದ ಅಧ್ಯಕ್ಷ ಹಾಗೂ ಖಜಾಂಚಿಯವರು ಸರ್ಕಾರಿ ನೌಕರರಲ್ಲ ಹಾಗಾಗಿ ಈ ಪದಾಧಿಕಾರಿಗಳನ್ನು ಸಂಘದ ನಿಧಿಯ ದುರ್ಬಳಕೆ ಮತ್ತು ವಂಚನೆ ಆರೋಪದಲ್ಲಿ ಲೋಕಾಯುಕ್ತದ ಭ್ರಷ್ಟಾಚಾರ ನಿಗ್ರಹ ದಳದ ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ರಾಜ್ಯ ಹೈಕೋರ್ಟ್‌ 2020ರ ಮಾರ್ಚ್‌ 26ರಂದು ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ವಿನೀತ್ ಸರನ್‌, ಸಂಜೀವ್‌ ಖನ್ನಾ ಅವರಿದ್ದ ಪೀಠವು, ರಾಜ್ಯ ಸರ್ಕಾರ, ಸಂಘದ ಅಧ್ಯಕ್ಷ ವಿ.ಎಂ. ನಾರಾಯಣಸ್ವಾಮಿ ಮತ್ತು ಖಜಾಂಚಿ ಎಸ್‌.ಟಿ. ಗಂಗಣ್ಣವರ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನೋಟಿಸ್ ಜಾರಿ ಮಾಡಿದೆ.

‘ಸಂಘದ ಸದಸ್ಯತ್ವವು ಕೇವಲ ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಮೀಸಲಿದ್ದು, ಈ ಇಬ್ಬರೂ ಪದಾಧಿಕಾರಿಗಳು ಸರ್ಕಾರಿ ನೌಕರರೇ ಆಗಿದ್ದಾರೆ’ ಎಂದು ಲೋಕಾಯುಕ್ತ ಪರ ವಾದ ಮಂಡಿಸಿದ ವಕೀಲ ಶೈಲೇಶ್‌ ಮಡಿಯಾಳ್‌ ನ್ಯಾಯಪೀಠಕ್ಕೆ ತಿಳಿಸಿದರು.

ಸರ್ಕಾರಿ ನೌಕರರು ಮಾತ್ರವೇ ಸಂಘದ ಸದಸ್ಯ ಹಾಗೂ ಪದಾಧಿಕಾರಿ ಆಗಬಹುದು. ಆದರೆ, ಸರ್ಕಾರಿ ನೌಕರ ಮತ್ತು ಪದಾಧಿಕಾರಿ ಹುದ್ದೆಗಳ ವ್ಯತ್ಯಾಸ ಅರಿಯುವಲ್ಲಿ ಹೈಕೋರ್ಟ್ ಪ್ರಮಾದ ಎಸಗಿದೆ. ಲೋಕಾಯುಕ್ತ ಕಾಯ್ದೆಗೆ ಸೀಮಿತವಾಗಿಸಿ ಸಂಘದ ಪದಾಧಿಕಾರಿಗಳನ್ನು ಸರ್ಕಾರಿ ನೌಕರರಲ್ಲ ಎಂದು ತಿಳಿಸಲು ಹೈಕೋರ್ಟ್‌ ಪ್ರಯತ್ನಿಸುವ ಮೂಲಕ ಸಂಘದ ಸದಸ್ಯತ್ವವು ಸರ್ಕಾರಿ ನೌಕರರಿಗಾಗಿ ಮಾತ್ರ ಇದೆ ಎಂಬುದನ್ನು ಮರೆತಂತಿದೆ ಎಂದು ಅವರು ವಿವರಿಸಿದರು.

‘ಶಿಕ್ಷಕರಿಗೆ ಸ್ಮಾರ್ಟ್‌ ಕಾರ್ಡ್ ಹಂಚುವ ಸಲುವಾಗಿ ಅವರ ಸಂಬಳದಿಂದಲೇ ತಲಾ ₹ 210ರಂತೆ ಒಟ್ಟು ₹ 3.78 ಕೋಟಿ ಸಂಗ್ರಹಿಸಿದ್ದ ಸಂಘದ ಅಧ್ಯಕ್ಷ ಹಾಗೂ ಖಜಾಂಚಿ, ಈ ಸಂಬಂಧ ಟೆಂಡರ್‌ ಕರೆಯದೆಯೇ ನಿಯಮ ಉಲ್ಲಂಘಿಸಿದ್ದಾರೆ. 2011 ಹಾಗೂ 2014ರಲ್ಲಿ ಕೂಡಲಸಂಗಮ ಮತ್ತು ಹುಬ್ಬಳ್ಳಿಯಲ್ಲಿ ಶಿಕ್ಷಕರಿಗಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣಕ್ಕೆ ಮಾಡಲಾದ ವೆಚ್ಚಕ್ಕೂ ಲೆಕ್ಕ ನೀಡಿಲ್ಲ’ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ ಅವರು ನೀಡಿದ್ದ ದೂರಿನನ್ವಯ, ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕರಣ ದಾಖಲಿಸಿದ್ದರು.

ಆದರೆ, ಈ ಪ್ರಕರಣದ ಅಡಿ ವಿಚಾರಣೆ ನಡೆಸದಂತೆ ಆರೋಪಿಗಳಿಬ್ಬರೂ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿ ಹೈಕೋರ್ಟ್‌ ತುರ್ತಾಗಿ, ಪ್ರಮಾದದ ಆದೇಶ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ನಂತರ ಪದಾಧಿಕಾರಿಗಳಿ ವಿರುದ್ಧ 2018ರಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು ಎಂದು ಲೋಕಾಯುಕ್ತ ದೂರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು