ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆಯಿಂದ ಕೊಲೆಯವರೆಗೆ..! ಅಭಯಾ ಪ್ರಕರಣ ಸಾಗಿ ಬಂದ ಹಾದಿ

Last Updated 22 ಡಿಸೆಂಬರ್ 2020, 10:13 IST
ಅಕ್ಷರ ಗಾತ್ರ

ತಿರುವನಂತಪುರ: ದೇಶದಾದ್ಯಂತ ಸುದ್ದಿಯಾಗಿದ್ದ, 28 ವರ್ಷಗಳ ಹಿಂದಿನ ಕೇರಳದ ಕೋಟ್ಟಯಂನ ಕ್ರೈಸ್ತ ಸನ್ಯಾಸಿನಿ ಅಭಯಾ ಸಾವು ಪ್ರಕರಣದ ತಪ್ಪಿತಸ್ಥರನ್ನು ಹೆಸರಿಸಿ ಸಿಬಿಐ ವಿಶೇಷ ನ್ಯಾಯಾಲಯ ಕೊನೆಗೂ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ಇನ್ನಷ್ಟೇ ಪ್ರಕಟವಾಗಬೇಕಿದೆ.

ಕೇರಳ ಪೊಲೀಸರಿಂದ ಆತ್ಮಹತ್ಯೆ ಎಂದು ವರದಿ ಸಲ್ಲಿಕೆಯಾಗಿ ನಂತರ ಸಿಬಿಐ ತನಿಖೆ ನಡೆದು ಕೊಲೆ ಎಂದು ಸಾಬೀತಾದ ಪ್ರಕರಣವಿದು. ಆದರೂ ಆರೋಪಿಗಳ ಪತ್ತೆ ಅಸಾಧ್ಯ ಎಂದು ಸಿಬಿಐ ಹೇಳಿತ್ತು. ಪ್ರಕರಣವನ್ನು ಆತ್ಮಹತ್ಯೆ ಎಂದು ಮುಚ್ಚಿಹಾಕಲು ಸಿಬಿಐ ಎಸ್‌ಪಿ ಒತ್ತಡ ಹೇರಿದ್ದರು ಎಂಬ ಆರೋಪದಿಂದ ಈ ಪ್ರಕರಣ ಸಂಸತ್‌ನಲ್ಲೂ ಸದ್ದು ಮಾಡಿತ್ತು. ಮೂರು–ಮೂರು ಬಾರಿ ತನಿಖೆ ಮುಕ್ತಾಯಗೊಳಿಸಲು ಅನುಮತಿ ನೀಡಬೇಕೆಂದು ಸಿಬಿಐ ಕೋರಿದ್ದರೂ ಕೋರ್ಟ್‌ ಮತ್ತೆ–ಮತ್ತೆ ತನಿಖೆಗೆ ಆದೇಶಿಸಿತ್ತು.

ಅಂತಿಮವಾಗಿ ಕನಾನಾಯ ಕ್ಯಾಥೋಲಿಕ್ ಧರ್ಮಗುರು ಥಾಮಸ್‌ ಎಂ.ಕೊಟ್ಟೂರ್, ಸಿಸ್ಟರ್‌ ಸೆಫಿ ತಪ್ಪಿತಸ್ಥರು ಎಂದು ಸಿಬಿಐ ವಿಶೇಷ ಕೋರ್ಟ್‌ ಮಂಗಳವಾರ ತೀರ್ಪು ನೀಡಿದೆ.

ಇಡೀ ಪ್ರಕರಣ ಸಾಗಿ ಬಂದ ಹಾದಿಯ ಹಿನ್ನೋಟ ಇಲ್ಲಿದೆ:

1992 ಮಾರ್ಚ್ 27: ಕೋಟ್ಟಯಂನ ಥಾಮಸ್ ಮತ್ತು ತಾಯಿ ಲೆಲ್ಲಮ್ಮಾ ದಂಪತಿ ಪುತ್ರಿ, ಕೋಟ್ಟಯಂ ಬಿಸಿಎಂ ಕಾಲೇಜಿನದ್ವಿತೀಯ ಪಿಯು ವಿದ್ಯಾರ್ಥಿನಿ ಸಿಸ್ಟರ್ ಅಭಯಾ (21) ಮೃತದೇಹ ಕೋಟ್ಟಯಂನಲ್ಲಿರುವ ಸೇಂಟ್‌ ಪಯಸ್ ಕಾನ್ವೆಂಟ್‌ನ ಬಾವಿಯೊಂದರಲ್ಲಿ ಪತ್ತೆ.

1992 ಮಾರ್ಚ್‌ 31: ಮಾನವ ಹಕ್ಕು ಹೋರಾಟಗಾರ ಜೋಮನ್ ಪುಥೆನ್‌ಪುರಕ್ಕಲ್ ನೇತೃತ್ವದ ಕ್ರಿಯಾ ಮಂಡಳಿಯು ತನಿಖೆಯ ಹಾದಿತಪ್ಪಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿತು.

1992 ಮೇ 15: ಪ್ರಕರಣದ ಸಿಬಿಐ ತನಿಖೆಯಾಗಬೇಕು ಎಂದು ಕ್ರಿಯಾ ಮಂಡಳಿಯು ಆಗ್ರಹಿಸಿತು. ಅಂದಿನ ಕೇರಳ ಮುಖ್ಯಮಂತ್ರಿ ಕೆ.ಕರುಣಾಕರನ್‌ ಅವರು ಸಿಬಿಐ ತನಿಖೆಗೆ ಶಿಫಾರಸು ಮಾಡಿದರು.

1993 ಜನವರಿ 30: ಕೇರಳ ಪೊಲೀಸ್ ಕ್ರೈಂ ಬ್ರಾಂಚ್ ವಿಭಾಗವು ತನಿಖೆ ಪೂರ್ಣಗೊಳಿಸಿ ಅಭಯಾ ಸಾವು ಆತ್ಮಹತ್ಯೆ ಎಂದು ವರದಿ ಸಲ್ಲಿಸಿತು.

1993 ಮಾರ್ಚ್: ಸಿಬಿಐ ಮತ್ತೊಂದು ಎಫ್‌ಐಆರ್ ದಾಖಲಿಸಿತು. ಡಿವೈಎಸ್‌ಪಿ ವರ್ಗೀಸ್ ಪಿ ಥಾಮಸ್ ತನಿಖೆಯ ನೇತೃತ್ವ ವಹಿಸಿದರು.

1993 ಡಿಸೆಂಬರ್ 31: ಆತ್ಮಹತ್ಯೆ ಪ್ರಕರಣ ಎಂದು ತನಿಖೆ ಪೂರ್ಣಗೊಳಿಸುವಂತೆ ಸಿಬಿಐ ಎಸ್‌ಪಿ ಅವರಿಂದ ಒತ್ತಡವಿದೆ ಎಂದು ಉಲ್ಲೇಖಿಸಿ ಡಿವೈಎಸ್‌ಪಿ ವರ್ಗೀಸ್ ಪಿ ಥಾಮಸ್ ಅವರು ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದರು. ಈ ಕುರಿತು ಕೇರಳದ ಸಂಸದರು ಸಂಸತ್‌ನಲ್ಲಿ ಪ್ರಶ್ನಿಸಿದರು.

1994 ಜೂನ್: ತನಿಖೆಗೆ ಸಿಬಿಐನ ಹೊಸ ತಂಡ ರಚನೆಯಾಯಿತು.

1996 ಡಿಸೆಂಬರ್: ಇದೊಂದು ಕೊಲೆ ಪ್ರಕರಣ, ಆದರೂ ಆರೋಪಿಗಳ ಪತ್ತೆ ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯಕ್ಕೆ ಸಿಬಿಐ ವರದಿ ಸಲ್ಲಿಸಿತು. ತನಿಖೆ ಮುಂದುವರಿಸುವಂತೆ ನ್ಯಾಯಾಲಯ ಸೂಚಿಸಿತು.

1999 ಜುಲೈ: ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಸಿಬಿಐ ಮತ್ತೊಮ್ಮೆ ಮನವಿ ಮಾಡಿತು.

2000 ಜೂನ್: ತನಿಖೆ ಮುಂದುವರಿಸುವಂತೆ ಮತ್ತೊಮ್ಮೆ ನ್ಯಾಯಾಲಯ ಆದೇಶಿಸಿತು.

2005 ಆಗಸ್ಟ್: ಪ್ರಕರಣ ಮುಕ್ತಾಯಗೊಳಿಸುವಂತೆ ಸಿಬಿಐ ಮರಳಿ ಮನವಿ ಮಾಡಿತು.

2006: ನ್ಯಾಯಾಲಯವು ಮತ್ತೊಮ್ಮೆ ತನಿಖೆಗೆ ಆದೇಶಿಸಿತು.

2007 ಮೇ: ಸಿಬಿಐ ತನಿಖೆಗೆ ಹೊಸ ತಂಡ ರಚನೆ ಮಾಡಿತು.

2008 ನವೆಂಬರ್: ಸಿಬಿಐ ಡಿವೈಎಸ್‌ಪಿ ನಂದಕುಮಾರ್ ನಾಯರ್ ನೇತೃತ್ವದ ತಂಡ ತನಿಖೆ ಆರಂಭಿಸಿತು.

2008 ನವೆಂಬರ್: ಮೂವರು ಆರೋಪಿಗಳಾದ ಥಾಮಸ್ ಕೊಟ್ಟೂರ್, ಜೋಸ್‌ ಪೂತ್ರಿಕ್ಕಯಿಲ್‌ ಮತ್ತು ಸೆಫಿ ಅವರನ್ನು ಬಂಧಿಸಲಾಯಿತು.

2018 ಮಾರ್ಚ್: ಜೋಸ್ ಪೂತ್ರಿಕ್ಕಯಿಲ್ ಅವರನ್ನು ಬಿಡುಗಡೆ ಮಾಡಲಾಯಿತು.

2020 ಡಿಸೆಂಬರ್ 22: ಥಾಮಸ್ ಕೊಟ್ಟೂರ್ ಮತ್ತು ಸೆಫಿ ತಪ್ಪಿತಸ್ಥರು ಎಂದು ಸಿಬಿಐ ನ್ಯಾಯಾಲಯ ತೀರ್ಪು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT