ಅಗರ್ತಲಾ: ತ್ರಿಪುರಾ ವಿಧಾನಸಭೆ ಅಧಿವೇಶನದ ವೇಳೆ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ ಬಿಜೆಪಿ ಶಾಸಕ ಜದಾಬ್ ಲಾಲ್ ನಾಥ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷಗಳು ಗುರುವಾರ ಒತ್ತಾಯಿಸಿವೆ.
ಬಜೆಟ್ ಅಧಿವೇಶನದ ಕೊನೆ ದಿನವಾದ ಬುಧವಾರ ವಿಧಾನಸಭೆ ಕಲಾಪಗಳು ನಡೆಯುತ್ತಿರುವ ವೇಳೆ ಈ ಘಟನೆ ನಡೆದಿದ್ದು, ಚಿತ್ರ ವೀಕ್ಷಣೆ ಮಾಡಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಉತ್ತರ ತ್ರಿಪುರಾ ಜಿಲ್ಲೆಯ ಬಾಗ್‌ಬಾಸ್ ಕ್ಷೇತ್ರದ ಶಾಸಕ ಜದಾಬ್ ಲಾಲ್ ನಾಥ್ ಅವರು ಮೊಬೈಲ್ ಕರೆ ಸ್ವೀಕರಿಸುತ್ತಿದ್ದಂತೆ ಅಶ್ಲೀಲ ವಿಡಿಯೊಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ.
‘ಸದನದಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧಿಸಲಾಗಿದೆ ಎಂಬುದು ತಿಳಿದಿದೆ. ಪದೇ ಪದೇ ಕರೆ ಬರುತ್ತಿದ್ದಂತೆ ಅದನ್ನು ಸ್ವೀಕರಿಸಿದೆ. ನಂತರ ನನ್ನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು’ ಎಂದು ಸುದ್ದಿಸಂಸ್ಥೆಗೆ ಕಮಲ್‌ನಾಥ್ ಹೇಳಿದರು.
‘ಈ ವಿಷಯದ ಬಗ್ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ರಾಜೀಬ್ ಭಟ್ಟಾಚಾರ್ಯ ಅವರೊಂದಿಗೆ ಮಾತನಾಡಿದ್ದು, ಅವರು ಸ್ವಲ್ಪ ತಾಳ್ಮೆ ವಹಿಸುವಂತೆ ಸೂಚಿಸಿದರು’ ಎಂದು ತಿಳಿಸಿದರು.
ಇದೊಂದು ನಾಚಿಕೆಗೇಡಿನ ಘಟನೆ. ಇದಕ್ಕಾಗಿ ಕಮಲ್ ನಾಥ್ ಅವರನ್ನು ಶಿಕ್ಷಿಸಬೇಕು ಎಂದು ಕಾಂಗ್ರೆಸ್ ಹೇಳಿದೆ.
‘ಈ ಘಟನೆಯು ಶಾಸಕರ ವರ್ಚಸ್ಸಿಗೆ ಕಳಂಕ ತಂದಿದೆ. ಅವರಿಗೆ ಸೂಕ್ತ ಶಿಕ್ಷೆಯಾಗಬೇಕು. ವಿಧಾನಸಭೆಯಲ್ಲಿ ಮೊಬೈಲ್ ಫೋನ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಶ್ಲೀಲ ಚಿತ್ರ ಹೇಗೆ ವೀಕ್ಷಿಸಲು ಸಾಧ್ಯ?’ ಎಂದು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿರಾಜಿತ್ ಸಿನ್ಹಾ ಪ್ರಶ್ನಿಸಿದರು.
‘ಈ ವಿಷಯದ ಬಗ್ಗೆ ಇನ್ನೂ ದೂರು ಸ್ವೀಕರಿಸಿಲ್ಲ. ಸಾಮಾಜಿಕ ಮಾಧ್ಯಮ ಪೋಸ್ಟ್ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ದೂರು ದಾಖಲಾದರೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದು ಸ್ಪೀಕರ್ ಬಿಸ್ವಬಂಧು ಸೇನ್ ತಿಳಿಸಿದರು.
2012ರಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಮೂವರು ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಮತ್ತು ಕೃಷ್ಣ ಪಾಲೆಮಾರ್ ಅವರು ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿ ಸಿಕ್ಕಿಬಿದ್ದಿದುದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.