ತುನಿಷಾ ಆತ್ಮಹತ್ಯೆ: ಕೇಸ್ ಡೈರಿ ಪರಿಶೀಲನೆ

ಮುಂಬೈ: ಕಿರುತೆರೆ ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿದೆಯೇ ಎಂದು ಬಾಂಬೆ ಹೈಕೋರ್ಟ್ ಪೊಲೀಸರನ್ನು ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪಿ.ಕೆ.ಚವಾಣ್ ಅವರ ವಿಭಾಗೀಯ ಪೀಠ ಪೊಲೀಸರ ಕೇಸ್ ಡೈರಿಗಳನ್ನು ಪರಿಶೀಲಿಸಿತು.
ಆರೋಪಿ ಕಡೆಯಿಂದ ಪ್ರಚೋದನೆ ಇದೆಯೇ ಎಂಬುದನ್ನು ಕಂಡುಹಿಡಿಯಬೇಕಿದೆ ಎಂದು ಹೇಳಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾದ ಶರ್ಮಾ ಅವರ ಸಹನಟ ಶೀಜಾನ್ ಖಾನ್ (27) ಅವರು ಪ್ರಕರಣ ರದ್ದುಗೊಳಿಸಬೇಕು ಮತ್ತು ಮಧ್ಯಂತರ ಆದೇಶದ ಮೂಲಕ ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿತು.
ಪೊಲೀಸರ ಪರ ಹಾಜರಾದ ಪಬ್ಲಿಕ್ ಪ್ರಾಸಿಕ್ಯೂಟರ್ ಅರುಣ ಕಾಮತ್ ಪೈ, ‘ಸಿಸಿಟಿವಿ ದೃಶ್ಯಾವಳಿಗಳು (ಶರ್ಮಾ ಆತ್ಮಹತ್ಯೆ ಮಾಡಿಕೊಂಡ ದಿನ) ಅವರು ಸಂತೋಷದಿಂದ ಶೂಟಿಂಗ್ ಸೆಟ್‌ಗೆ ಬರುವುದನ್ನು ತೋರಿಸುತ್ತದೆ. ನಂತರ ಆಕೆ ಆರೋಪಿ ಕೋಣೆ ಪ್ರವೇಶಿಸಿದರು. ವಾಪಸ್ ಬರುವಾಗ ವಿಚಲಿತಳಾಗಿದ್ದರು. ಮೂರು ಮೊಬೈಲ್ ಫೋನ್‌ಗಳನ್ನು (ಶರ್ಮಾ, ಖಾನ್ ಮತ್ತು ಸ್ನೇಹಿತನಿಗೆ ಸೇರಿದ ಇನ್ನೊಂದು) ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು
‘ಪೊಲೀಸರು ತನಿಖೆ ಮುಂದುವರಿಸಬಹುದು. ಆದರೆ, ನಟನ ಬಂಧನ ಅಗತ್ಯವಿಲ್ಲ’ ಎಂದು ಖಾನ್ ಅವರ ವಕೀಲ ಧೀರಜ್ ಮಿರಾಜ್ಕರ್ ಹೇಳಿದರು.
‘ಅಲಿ ಬಾಬಾ: ದಾಸ್ತಾನ್–ಕೆ–ಕಾಬುಲ್’ ಧಾರಾವಾಹಿಯಲ್ಲಿ ನಟಿಸಿದ್ದ ತುನಿಷಾ ಶೂಟಿಂಗ್ ಸೆಟ್‌ನಲ್ಲಿಯೇ ಡಿ.24 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮರುದಿನ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದರು.
ಮುಂದಿನ ವಿಚಾರಣೆಯನ್ನು ಫೆ. 17ಕ್ಕೆ ಮುಂದೂಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.