ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗಿ ಭದ್ರತೆ ನಡುವೆ ಟೈಲರ್‌ ಅಂತ್ಯಕ್ರಿಯೆ, ಶವಯಾತ್ರೆಯಲ್ಲಿ ಸಾವಿರಾರು ಜನರು ಭಾಗಿ

ಶವಯಾತ್ರೆಯಲ್ಲಿ ಸಾವಿರಾರು ಜನರು ಭಾಗಿ; ಹಲವೆಡೆ ಪ್ರತಿಭಟನೆ; ಪೊಲೀಸ್‌ ಮೇಲೆ ಖಡ್ಗದಿಂದ ದಾಳಿ
Last Updated 29 ಜೂನ್ 2022, 16:26 IST
ಅಕ್ಷರ ಗಾತ್ರ

ಜೈಪುರ, ಉದಯಪುರ: ಇಬ್ಬರು ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಟೈಲರ್‌ ಕನ್ಹಯ್ಯ ಲಾಲ್‌ ಅವರ ಅಂತ್ಯಕ್ರಿಯೆ ಬುಧವಾರ ಉದಯಪುರದ ಅಶೋಕ ನಗರದ ಸ್ಮಶಾನದಲ್ಲಿ ಭಾರಿ ಬಿಗಿಭದ್ರತೆಯಲ್ಲಿ ನಡೆಯಿತು.

ಅಂತ್ಯಕ್ರಿಯೆಗೂ ಮೊದಲು ನಗರದಲ್ಲಿ ನಡೆದ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮವೇ ಸೇರಿತ್ತು. ಮಾರ್ಗದುದ್ದಕ್ಕೂ ಕಾರು ಮತ್ತು ಬೈಕ್‌ಗಳಲ್ಲಿ ಬಂದ ಜನರು ಮೆರವಣಿಗೆಯಲ್ಲಿ ಕೂಡಿಕೊಂಡರು.ಕೆಲವು ಉದ್ರಿಕ್ತ ಜನರು,ಅಶೋಕ ನಗರದ ಸ್ಮಶಾನದ ಸಮೀಪವೇ ಇರುವ ಮುಸ್ಲಿಮರ ಸ್ಮಶಾನದತ್ತ ಕಲ್ಲು ತೂರಿ, ಪ್ರವೇಶದ್ವಾರದ ಗೇಟ್‌ ಮುರಿಯಲು ಯತ್ನಿಸಿದ ಘಟನೆ ನಡೆಯಿತು.

ಇದಕ್ಕೂ ಮುನ್ನ ಮರಣೋತ್ತರ ಪರೀಕ್ಷೆಯ ನಂತರ ಲಾಲ್‌ ಅವರ ಶವವನ್ನು ಕುಟುಂಬದವರಿಗೆ ಒಪ್ಪಿಸಲಾಯಿತು. ನಗರದ ಸೆಕ್ಟರ್‌ 14ರಲ್ಲಿರುವ ಲಾಲ್‌ ಅವರ ಮನೆ ಬಳಿ ಪಾರ್ಥಿವ ಶರೀರವನ್ನು ಕೆಲ ಕಾಲ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ಲಾಲ್‌ ಮನೆ ಬಳಿ ಭಾರಿ ಸಂಖ್ಯೆಯಲ್ಲಿ ಸೇರಿದ ಜನರು ಕೈಯಲ್ಲಿ ಕೇಸರಿ ಬಾವುಟಗಳನ್ನು ಹಿಡಿದು ‘ಭಾರತ್‌ ಮಾತಾಕಿ ಜೈ’,‘ಕನ್ಹಯ್ಯ ಲಾಲ್‌ ಅಮರ್‌ ರಹೇ’ ಮತ್ತು‘ಕನ್ಹಯ್ಯ ಹಮ್‌ ಶರ್ಮಿಂದಾ ಹೈ ತೇರೆ ಕಾತಿಲ್‌ ಜಿಂದಾ ಹೈ’ (ಕನ್ಹಯ್ಯ ನಮಗೆ ನಾಚಿಕೆಯಾಗುತ್ತಿದೆ, ನಿನ್ನ ಹಂತಕರು ಬದುಕಿದ್ದಾರೆ) ಎಂಬ ಘೋಷಣೆಗಳನ್ನು ಕೂಗಿದರು. ಚಿತಾಗಾರದ ಆವರಣದಲ್ಲಿ ಜನರು ‘ಮೋದಿ ಮೋದಿ’ ಎಂಬ ಘೋಷಣೆಗಳನ್ನು ಕೂಗಿದರು.

ಕನ್ಹಯ್ಯ ಲಾಲ್‌ ಅವರ ಹತ್ಯೆಗೆ ತೀವ್ರ ದುಃಖ ಮತ್ತು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಮತ್ತು ಸಂಬಂಧಿಕರು, ಹಂತಕರನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.

‘ಜೀವ ಬೆದರಿಕೆ ಇದ್ದಿದ್ದರಿಂದ ಪತಿ ಭಯಭೀತರಾಗಿದ್ದರು. ಕಳೆದ ಆರು ದಿನಗಳಿಂದ ಅಂಗಡಿ ಬಾಗಿಲು ಕೂಡ ತೆರೆದಿರಲಿಲ್ಲ. ಬಾಗಿಲು ತೆರೆದ ತಕ್ಷಣವೇ ಅವರನ್ನು ದುಷ್ಕರ್ಮಿಗಳು ಕೊಂದಿದ್ದಾರೆ’ ಎಂದು ಕನ್ಹಯ್ಯ ಪತ್ನಿ ಜಸೋದಾ ಅವರು ವರದಿಗಾರರಿಗೆ ತಿಳಿಸಿದರು.

ವಿವಾದಾತ್ಮಕ ಪೋಸ್ಟ್‌ ಹಂಚಿಕೊಂಡ ಆರೋಪದ ದೂರಿನ ಸಂಬಂಧ ಕನ್ಹಯ್ಯ ಲಾಲ್‌ ಅವರನ್ನು ಜೂನ್‌ 11ರಂದು ಪೊಲೀಸರು ಬಂಧಿಸಿದ್ದರು. ಐದು ದಿನಗಳ ನಂತರ ಜಾಮೀನಿನ ಮೇಲೆ ಕನ್ಹಯ್ಯ ಬಿಡುಗಡೆಯಾಗಿದ್ದರು. ನಂತರ ಅವರು ನೆರೆಹೊರೆಯವರಿಂದ ಕಿರುಕುಳ ಮತ್ತು ಬೆದರಿಕೆಗೆ ಒಳಗಾಗಿದ್ದರು ಎನ್ನಲಾಗಿದೆ.

‘ನನಗೆ ಜೀವ ಬೆದರಿಕೆ ಇದೆ. ನನ್ನನ್ನು ಕೊಲ್ಲಲು ಕೆಲವರು ನನ್ನ ಅಂಗಡಿ ಬಳಿ ತಾಲೀಮು ನಡೆಸುತ್ತಿದ್ದಾರೆ’ ಎಂದು ಕನ್ಹಯ್ಯ ಲಾಲ್‌ ಅವರು ಪೊಲೀಸರಿಗೆ ಜೂನ್‌ 15ರಂದು ಲಿಖಿತ ದೂರು ನೀಡಿದ್ದರು ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಎಎಸ್‌ಐ ಅಮಾನತು: ಘಟನೆ ಸಂಬಂಧ ನಿರ್ಲಕ್ಷ್ಯ ತೋರಿದ ಆಪಾದನೆ ಮೇರೆಗೆ ಉದಯಪುರದ ಧನ್ ಮಂಡಿ ಪೊಲೀಸ್‌ ಠಾಣೆಯ ಎಎಸ್‌ಐ ಭನ್ವಾರ್‌ ಲಾಲ್‌ ಅವರನ್ನು ಬುಧವಾರ ಅಮಾನತುಗೊಳಿಸಿ ಐಜಿಪಿ ಹಿಂಗ್ಲಾಜ್‌ ದನ್‌ ಆದೇಶ ಹೊರಡಿಸಿದ್ದಾರೆ.

ನಾಯಕರ ಖಂಡನೆ:ಟೈಲರ್‌ ಹತ್ಯೆಯನ್ನು ಪ್ರಮುಖ ಮುಸ್ಲಿಂ ಸಂಘಟನೆ ಜಮಿಯತ್‌ ಉಲೆಮಾ –ಎ –ಹಿಂದ್‌ ತೀವ್ರವಾಗಿ ಖಂಡಿಸಿದೆ. ‘ಪ್ರವಾದಿಯ ಅವಮಾನದ ನೆಪದಲ್ಲಿ ಇಂತಹ ಕ್ರೂರ ಹತ್ಯೆ ನಡೆಸಿರುವುದು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ. ಇದನ್ನು ಇಸ್ಲಾಂ ಧರ್ಮ ಕೂಡ ಒಪ್ಪುವುದಿಲ್ಲ’ ಎಂದು ಸಂಘಟನೆ ಪ್ರಧಾನ ಕಾರ್ಯದರ್ಶಿ ಹಕೀಮುದ್ದಿನ್‌ ಖಾಸ್ಮಿ ಹೇಳಿದ್ದಾರೆ.ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಕೂಡ ಘಟನೆಯನ್ನು ತೀವ್ರವಾಗಿ ಖಂಡಿಸಿದೆ.

‘ಈ ಕೃತ್ಯ ಇಸ್ಲಾಮ್‌ಗೆ ವಿರುದ್ಧವಾದುದು. ಹೇಡಿತನದ ಕೃತ್ಯ’ ಎಂದು ದೆಹಲಿ ಜಾಮಾ ಮಸೀದಿ ಶಾಹಿ ಇಮಾಮ್‌ ಸೈಯದ್‌ ಅಹ್ಮದ್‌ ಬುಖಾರಿ ಟೀಕಿಸಿದ್ದಾರೆ.

‘ಕಾಂಗ್ರೆಸ್‌ ಆಡಳಿತದಲ್ಲಿ ರಾಜಸ್ಥಾನವು ತಾಲಿಬಾನ್‌ ರಾಜ್ಯವಾಗುವ ಹಾದಿಯಲ್ಲಿದೆ. ಕಾಂಗ್ರೆಸ್‌ನ ಮುಸ್ಲಿಂ ಓಲೈಕೆ ನೀತಿಯಿಂದ ಜಿಹಾದಿಗಳಿಗೆ ಧೈರ್ಯ ಬಂದಿದೆ. ಹಾಗಾಗಿ ಹಿಂದೂಗಳನ್ನು ಬಹಿರಂಗವಾಗಿ ಹತ್ಯೆ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಗೂ ಜೀವ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಬಿಜೆಪಿ ಸಂಸದ ರಾಜ್ಯವರ್ಧನ್‌ ರಾಥೋಡ್‌ ಕಿಡಿಕಾರಿದ್ದಾರೆ.

‘ಹಂತಕರು ಹೀನ ಕೃತ್ಯ ಎಸಗಿ, ಕ್ಯಾಮೆರಾ ಮುಂದೆ ಕತ್ತಿ ಝಳಪಿಸಿ ಪ್ರಧಾನಿಗೂ ಜೀವ ಬೆದರಿಕೆ ಹಾಕುವ ಧೈರ್ಯ ತೋರಿದ್ದಾರೆ’ ವಿಶ್ವ ಹಿಂದೂ ಪರಿಷತ್‌ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಕತ್ತು ಸೀಳಿ ಹತ್ಯೆ ಮಾಡಿರುವ ಕೃತ್ಯವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಎಐಎಂಐಎಂ ಅಧ್ಯಕ್ಷ ಅಸಾದುದ್ದಿನ್‌ ಓವೈಸಿ ಸೇರಿ ಹಲವು ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ಪ್ರತಿಭಟನೆ–ಪೊಲೀಸ್‌ ಮೇಲೆ ದಾಳಿ: ಜೈಪುರದ ರಾಜ್‌ಸಮಂದ್‌ ಜಿಲ್ಲೆಯ ಭೀಮ್‌ ಪಟ್ಟಣದಲ್ಲಿಕನ್ಹಯ್ಯ ಲಾಲ್‌ ಹತ್ಯೆ ಖಂಡಿಸಿ ಬುಧವಾರ ಮಸೀದಿಯತ್ತ ಮೆರವಣಿಗೆ ಹೊರಟಿದ್ದ ಜನರ ಗುಂಪನ್ನು ತಡೆಯಲು ಅಶ್ರುವಾಯು ಸಿಡಿಸಿದ ಪೊಲೀಸರ ಮೇಲೆ ಉದ್ರಿಕ್ತ ಜನರು ಕಲ್ಲು ತೂರಿದ್ದಾರೆ. ಪೊಲೀಸ್‌ ಸಿಬ್ಬಂದಿಯೊಬ್ಬರ ಮೇಲೆ ಖಡ್ಗದಿಂದ ದಾಳಿ ನಡೆಸಿದ್ದಾರೆ.

ಗಾಯಗೊಂಡಿರುವ ಪೊಲೀಸ್‌ ‌ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಜಸ್ಥಾನ ಡಿಜಿಪಿ ಎಂ.ಎಲ್‌. ಲಾಥರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹತ್ಯೆಖಂಡಿಸಿ ರಾಜಸ್ಥಾನದ ಹಲವೆಡೆ ಬುಧವಾರ ಪ್ರತಿಭಟನೆಗಳು ನಡೆದವು.ರಾಜ್ಯದ 33 ಜಿಲ್ಲೆಗಳಲ್ಲೂ ಮೊಬೈಲ್‌, ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಉದಯಪುರದ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಏಳು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ವಿಧಿಸಿರುವ ಕರ್ಫ್ಯೂ ಬುಧವಾರ ಕೂಡ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT