‘ಮಿಷನ್ ಕರ್ಮಯೋಗಿ'ಗೆ ಸಂಪುಟ ಅನುಮೋದನೆ

ನವದೆಹಲಿ: ನಾಗರಿಕ ಸೇವಾ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುವ ಸಲುವಾಗಿ ನೇಮಕಾತಿ ನಂತರದ ವಿಶೇಷ ತರಬೇತಿ ಯೋಜನೆ ‘ಮಿಷನ್ ಕರ್ಮಯೋಗಿ’ಗೆ ಕೇಂದ್ರದ ಸಚಿವ ಸಂಪುಟ ಸಭೆಯು ಬುಧವಾರ ಅನುಮೋದನೆ ನೀಡಿದೆ.
‘ಈ ಯೋಜನೆಯಡಿ ಪ್ರಧಾನಿ ನೇತೃತ್ವದ ಸಮಿತಿಯು ನಾಗರಿಕ ಸೇವಾ ಸಿಬ್ಬಂದಿಯ ಸಾಮರ್ಥ್ಯವೃದ್ಧಿ ಯೋಜನೆಗಳನ್ನು ರೂಪಿಸುವುದು. ಮುಖ್ಯಮಂತ್ರಿಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ. ತರಬೇತಿಯ ಮೂಲಕ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಮ್ಮ ಕಾರ್ಯಕ್ಷಮತೆಯನ್ನು ಉತ್ತಮಪಡಿಸಿಕೊಳ್ಳಲು ಅವಕಾಶ ನೀಡಲಾಗುವುದು. ಇದು ಸರ್ಕಾರದ ಅತಿ ದೊಡ್ಡ ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆ ಎನಿಸಲಿದೆ’ ಎಂದು ಯೋಜನೆಯ ಮಾಹಿತಿ ನೀಡುತ್ತಾ ಕೇಂದ್ರದ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.
ಸಚಿವ ಸಂಪುಟದ ಹಿಂದಿನ ಸಭೆಯಲ್ಲಿ, ನೇಮಕಾತಿಗಾಗಿ ರಾಷ್ಟ್ರಮಟ್ಟದ ಏಜೆನ್ಸಿಯನ್ನು ರೂಪಿಸಲು ತೀರ್ಮಾನಿಸಲಾಗಿತ್ತು. ಅದು ನೇಮಕಾತಿಪೂರ್ವ ಅಭಿವೃದ್ಧಿ ಉದ್ದೇಶದ್ದು. ಮಿಷನ್ ಕರ್ಮಯೋಗಿಯು ನೇಮಕಾತಿ ನಂತರ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಸುಧಾರಿಸುವ ಉದ್ದೇಶ ಹೊಂದಿದೆ ಎಂದರು.
‘ಪ್ರಧಾನಿಯ ಒತ್ತಾಸೆಯ ಮೇರೆಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಸಿಬ್ಬಂದಿಯ ವ್ಯಕ್ತಿನಿಷ್ಠ ಮತ್ತು ವೈಜ್ಞಾನಿಕ ರೀತಿಯ ಮೌಲ್ಯಮಾಪನಕ್ಕೆ ಇದು ಸಹಕಾರಿಯಾಗಲಿದೆ. ಸರ್ಕಾರಿ ನೌಕರರನ್ನು ಸೃಜನಶೀಲ, ರಚನಾತ್ಮಕ ಹಾಗೂ ಸಕ್ರಿಯವಾಗಿರಲು ಮತ್ತು ತಾಂತ್ರಿಕವಾಗಿ ಶಕ್ತಿಯುತಗೊಳಿಸಿ ಆದರ್ಶ ಕರ್ಮಯೋಗಿಯಾಗಿ ದೇಶಕ್ಕೆ ಸೇವೆ ಸಲ್ಲಿಸಲು ಅಣಿಗೊಳಿಸುವ ಪ್ರಯತ್ನ ಇದಾಗಿದೆ’ ಎಂದು ಕೇಂದ್ರದ ಕಾರ್ಮಿಕ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದರು.
ಡೋಗ್ರಿ, ಕಾಶ್ಮೀರಿ, ಹಿಂದಿ ಭಾಷೆಗೆ ಮಾನ್ಯತೆ: ಜಮ್ಮು ಕಾಶ್ಮೀರದಲ್ಲಿ ಉರ್ದು ಹಾಗೂ ಇಂಗ್ಲಿಷ್ ಜತೆಗೆ ಕಾಶ್ಮೀರಿ, ಡೋಗ್ರಿ ಹಾಗೂ ಹಿಂದಿ ಭಾಷೆಗಳನ್ನು ಅಧಿಕೃತ ಭಾಷೆ ಎಂಬ ಮಾನ್ಯತೆ ನೀಡುವ ಮಸೂದೆಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
‘ಜಮ್ಮು ಕಾಶ್ಮೀರ ಅಧಿಕೃತ ಭಾಷಾ ಮಸೂದೆ–2020’ಯನ್ನು ಮುಂಬರುವ ಲೋಕಸಭೆಯ ಅಧಿವೇಶನದಲ್ಲಿ ಮಂಡಿಸಲಾಗುವುದು’ ಎಂದು ಜಾವಡೇಕರ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.