ಶನಿವಾರ, ಜನವರಿ 29, 2022
22 °C

UP Elections 2022: ಉತ್ತರ ‍ಪ್ರದೇಶದಲ್ಲಿ ಬಿಜೆಪಿಯಿಂದ ಮನೆ–ಮನೆ ಪ್ರಚಾರಾಭಿಯಾನ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಕೋವಿಡ್–19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ರ್‍ಯಾಲಿಗಳಿಗೆ ನಿಷೇಧ ಹೇರಿದೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಮನೆ–ಮನೆ ಪ್ರಚಾರಾಭಿಯಾನ ಆರಂಭಿಸಿದೆ.

ರಾಜ್ಯ ರಾಜಧಾನಿ ಲಖನೌನಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅಭಿಯಾನಕ್ಕೆ ಚಾಲನೆ ನೀಡಿದರು. ಲಖನೌನ ‘ಬಲ್ಲು ಅಡ್ಡಾ’ ಪ್ರದೇಶದ ಮನೆಗಳಿಗೆ ಭೇಟಿ ನೀಡಿದ ಅವರು ಮನೆಗಳ ಹೊರಭಾಗದಲ್ಲಿ ಪಕ್ಷದ ಪ್ರಚಾರ ಕಾಗದಗಳನ್ನು ಅಂಟಿಸಿದರು. ಕೆಲವು ಮನೆಗಳ ಮಾಲೀಕರ ಹಣೆಗೆ ತಿಲಕ ಹಚ್ಚಿ ಮತ ಯಾಚಿಸಿದರು.

ಮನೆಗಳ ಹೊರಗೆ ಅಂಟಿಸಲಾಗಿರುವ ಭಿತ್ತಿಪತ್ರಗಳಲ್ಲಿ, ‘ಆಕಾಂಕ್ಷೆಗಳು ಈಡೇರಿವೆ. ಅಭಿವೃದ್ಧಿ ಮನೆಗಳನ್ನು ತಲುಪಿವೆ’ ಎಂದು ಮುದ್ರಿಸಲಾಗಿದೆ.

ರ್‍ಯಾಲಿಗಳನ್ನು ನಿಷೇಧಿಸಿದ್ದರೂ ಮನೆ–ಮನೆ ಪ್ರಚಾರ ನಡೆಸಲು ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಅನುಮತಿ ನೀಡಿದೆ. ಆದರೆ ಇಂಥ ಪ್ರಚಾರದ ಸಂದರ್ಭ ಐದು ಮಂದಿಗಿಂತ ಹೆಚ್ಚಿರಬಾರದು ಎಂದೂ ಸೂಚಿಸಿದೆ.

‘ಬಿಜೆಪಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಫಲಾನುಭವಿಗಳ ಬಳಿ ತೆರಳುತ್ತಿದೆ. ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರವೇ ಇದನ್ನು ನಡೆಸಲಾಗುತ್ತಿದೆ. ನಾವು ಸಾರ್ವಜನಿಕರಿಗೆ ವರದಿ ಒಪ್ಪಿಸುತ್ತಿದ್ದೇವೆ ಹಾಗೂ ಅವರಿಂದ ಸಲಹೆಗಳನ್ನು ಪಡೆಯುತ್ತಿದ್ದೇವೆ. ಮನೆ–ಮನೆಗೆ ತೆರಳುತ್ತಿರುವ ಮೊದಲ ಸರ್ಕಾರ ಇದು’ ಎಂದು ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.

ರಾಜ್ಯದ 403 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅನೇಕ ಸಂಸದರು, ಸಚಿವರು ಕೂಡ ಭಾಗಿಯಾಗಿದ್ದಾರೆ ಎಂದು ಬಿಜೆಪಿಯ ಉತ್ತರ ಪ್ರದೇಶ ಘಟಕದ ವಕ್ತಾರ ರಾಕೇಶ್ ತ್ರಿಪಾಠಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು