ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ಸಂಘರ್ಷ ಸುದ್ದಿ ಬಿತ್ತರ ಆರೋಪ: ಟ್ವಿಟರ್‌, ಪತ್ರಕರ್ತರ ವಿರುದ್ಧ ಎಫ್‌ಐಆರ್‌

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಘಟನೆ
Last Updated 16 ಜೂನ್ 2021, 10:35 IST
ಅಕ್ಷರ ಗಾತ್ರ

ಗಾಜಿಯಾಬಾದ್‌: ಹೊಸ ಐಟಿ ನಿಯಮಗಳನ್ನುಅನುಸರಿಸಲು ವಿಫಲವಾಗಿರುವ ಬೆನ್ನಲ್ಲೇ ಟ್ವಿಟರ್ ವಿರುದ್ಧ ದೂರು ದಾಖಲಾಗಿದೆ.ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರು ತನ್ನ ಮೇಲೆ ಯುವಕರ ಗುಂಪು ನಡೆಸಿದ ದಾಳಿಯನ್ನು ವಿವರಿಸುವ ವಿಡಿಯೊವೊಂದನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಸಾಮಾಜಿಕ ಜಾಲತಾಣ ಟ್ವಿಟರ್‌, ಸುದ್ದಿ ಪೋರ್ಟಲ್‌ ಮತ್ತು ಆರು ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಸ್ಥಳೀಯ ಪೊಲೀಸರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮಂಗಳವಾರ ರಾತ್ರಿ 11.30 ರ ಸುಮಾರಿಗೆ ಗಾಜಿಯಾಬಾದ್‌ನ ಲೋನಿ ಬಾರ್ಡರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಾಗಿದೆ. ಸಮಾಜದಲ್ಲಿ, ಕೋಮು ಸಂಘರ್ಷವನ್ನು ಪ್ರಚೋದಿಸುವ ಉದ್ದೇಶದಿಂದ ಈ ವಿಡಿಯೋ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ:ಐಟಿ ನಿಯಮಗಳನ್ನು ಅನುಸರಿಸುವಲ್ಲಿ ಟ್ವಿಟರ್ ವಿಫಲ: ರವಿಶಂಕರ್ ಪ್ರಸಾದ್

ಘಟನೆಯ ವಿವರ:ಜೂನ್ 14 ರಂದು ಸಾಮಾಜಿಕ ಜಾಲ ತಾಣದಲ್ಲಿ ಬಿತ್ತರವಾದ ವಿಡಿಯೊದ ತುಣುಕಿನಲ್ಲಿ, ಹಿರಿಯ ಮುಸ್ಲಿಂ ವ್ಯಕ್ತಿ ಅಬ್ದುಲ್ ಶಮದ್ ಸೈಫಿ ಎನ್ನುವವರು ‘ನನಗೆ ಕೆಲವು ಯುಕರು ಜೈ ಶ್ರೀರಾಮ್‌‘ ಎಂದು ಹೇಳುವಂತೆ ಒತ್ತಾಯಿಸಿ, ಥಳಿಸಿದ್ದಾರೆ‘ ಎಂದು ಹೇಳಿರುವ ದೃಶ್ಯವಿದೆ. ಈ ವಿಡಿಯೊ ತುಣುಕನ್ನು ಟ್ವಿಟರ್‌, ವೆಬ್‌ ಪೋರ್ಟಲ್‌ ದಿ ವೈರ್‌ ಸೇರಿದಂತೆ ಹಲವು ಪತ್ರಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

‘ಸಮಾಜದಲ್ಲಿ ಕೋಮು ಸೌಹಾರ್ದ ಕದಡುವ ಉದ್ದೇಶದಿಂದ ಈ ಸುದ್ದಿಯನ್ನು ಹಂಚಿಕೊಳ್ಳಲಾಗಿದೆ‘ ಎಂಬ ದೂರಿನ ಹಿನ್ನೆಲೆಯಲ್ಲಿ, ಗಾಜಿಯಾಬಾದ್‌ ಪೊಲೀಸರು ಮುಸ್ಲಿಂ ಸಮುದಾಯದ ವ್ಯಕ್ತಿಯೂ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಜತೆಗೆ, ಈ ಪ್ರಕರಣದಲ್ಲಿ ಕೋಮು ಗಲಭೆಗೆ ದೃಷ್ಟಿಕೋನದ ವಿಚಾರವನ್ನು ತಳ್ಳಿ ಹಾಕಿದ್ದಾರೆ. ಆರೋಪಿಗಳು, ತಮಗೆ ಮಾರಾಟ ಮಾಡಿದ ತಾಯಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ನಿಯಮ ಪಾಲಿಸಲು ವಿಳಂಬ: ಕಾನೂನು ರಕ್ಷಣೆ ಕಳೆದುಕೊಳ್ಳಲಿದೆ ಟ್ವಿಟರ್

ಬಂಧಿತ ಯುವಕನನ್ನು ಕಲ್ಲೂ ಮತ್ತು ಆದಿಲ್ ಎಂದು ಗುರುತಿಸಲಾಗಿದೆ. ಅವರಲ್ಲದೆ, ಪೊಲ್ಲಿ, ಆರಿಫ್, ಮುಷಾಹಿದ್ ಮತ್ತು ಪರ್ವೇಶ್ ಗುರ್ಜಾರ್ ಕೂಡ ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಪಾಠಕ್ ಮಂಗಳವಾರ ತಿಳಿಸಿದ್ದಾರೆ.

ನಂತರ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹಂಚಿದ ಆರೋಪದ ಅಡಿ ಟ್ವಿಟರ್‌ ಐಎನ್‌ಸಿ, ಟ್ವಿಟರ್ ಕಮ್ಯುನಿಕೇಷನ್ಸ್‌ ಇಂಡಿಯಾ, ದಿ ವೈರ್‌– ನ್ಯೂಸ್ ವೆಬ್‌ಸೈಟ್‌, ಪತ್ರಕರ್ತರಾದ ಮೊಹಮ್ಮದ್‌ ಜುಬೈರ್ ಮತ್ತು ರಾಣಾ ಆಯೂಬ್‌, ಕಾಂಗ್ರೆಸ್‌ ಪಕ್ಷದ ಸಲ್ಮಾನ್ ನಿಝಾಮಿ, ಮಸ್ಕೂರ್‌ ಉಸ್ಮಾನಿ, ಡಾ. ಸಮಾ ಮೊಹಮ್ಮದ್‌ ಮತ್ತು ಲೇಖಕ ಸಬಾ ನಕ್ವಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

‘ಈ ವ್ಯಕ್ತಿಗಳು ಸುದ್ದಿಯಲ್ಲಿರುವ ವಿಚಾರದ ನೈಜತೆ ಪರಿಶೀಲಿಸದೇ, ಸಮಾಜದಲ್ಲಿ ಶಾಂತಿ ಕದಡುವ ಹಾಗೂ ಧಾರ್ಮಿಕ ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವ ಉದ್ದೇಶದೊಂದಿಗೆ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ‘ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಟ್ವಿಟರ್‌ ಐಎನ್‌ಸಿ ಮತ್ತು ಟ್ವಿಟರ್ ಕಮ್ಯುನಿಕೇಷನ್ಸ್‌ ಇಂಡಿಯಾ ಸಾಮಾಜಿಕ ಜಾಲತಾಣದವರು ಆ ಸುದ್ದಿಯ ಟ್ವೀಟ್‌ಗಳನ್ನು ತೆಗೆದು ಹಾಕಿಲ್ಲ‘ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT