ಭಾನುವಾರ, ಜುಲೈ 3, 2022
27 °C

ನ್ಯಾಯಾಲಯದಲ್ಲಿ ಸ್ಥಳೀಯ ಭಾಷೆ ಬಳಕೆ: ಪ್ರಧಾನಿ ಮೋದಿ, ಸಿಜೆಐ ರಮಣ ಪ್ರತಿಪಾದನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋರ್ಟ್‌ಗಳಲ್ಲಿ ಸ್ಥಳೀಯ ಭಾಷೆ ಬಳಕೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌.ವಿ. ರಮಣ ಅವರು ಪ್ರಬಲವಾಗಿ ಪ್ರತಿಪಾದಿಸಿದ್ದಾರೆ. ‘ಹಿಂದಿ ಹೇರಿಕೆ’ ವಿಚಾರವಾಗಿ ದೇಶದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿಯೇ ಈ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಕೋರ್ಟ್‌ಗಳಲ್ಲಿ ಸ್ಥಳೀಯ ಭಾಷೆ ಬಳಕೆಯಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರಿಗೆ ನಂಬಿಕೆ ಹೆಚ್ಚುತ್ತದೆ. ಜೊತೆಗೆ ವ್ಯವಸ್ಥೆಯ ಜೊತೆಗೆ ಸಂಪರ್ಕ ಸಾಧಿಸಲು ಅವರಿಗೆ ಸಾಧ್ಯವಾಗುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಸ್ಥಳೀಯ ಭಾಷೆಗಳ ಬಳಕೆ ಆರಂಭಿಸಲು ಇದು ಸಕಾಲ ಎಂದು ಸಿಜೆಐ ರಮಣ ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿಗಳು ಹಾಗೂ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಗಳ ಜಂಟಿ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಶನಿವಾರ ಮಾತನಾಡಿದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ಎರಡು ರೀತಿಯ ಭಾಷಾ ಬಳಕೆ ಇದೆ. ಕಾನೂನು ಪರಿಭಾಷೆಗಳುಳ್ಳ ಭಾಷೆಯದ್ದು ಒಂದು ಮಾದರಿ. ಮತ್ತೊಂದು ಮಾದರಿಯು ಸಾಮಾನ್ಯ ಜನರು ಅರ್ಥಮಾಡಿಕೊಳ್ಳುವ ಸರಳ ಭಾಷೆಯಾಗಿದೆ. ಹಲವು ದೇಶಗಳಲ್ಲಿ ನಡೆಯುತ್ತಿರುವ ನ್ಯಾಯದಾನ ವಿಧಾನಗಳನ್ನು ಗಮನಿಸಿದರೆ, ಎರಡೂ ರೀತಿಯ ಮಾದರಿಗಳು ಕಾನೂನುಪ್ರಕಾರ ಸ್ವೀಕಾರಾರ್ಹವಾಗಿವೆ ಎಂದು ಪ್ರಧಾನಿ ವಿವರಿಸಿದರು.

ಭಾಷಾ ಪ್ರಾವೀಣ್ಯವೇ ಮುಖ್ಯವಲ್ಲ: ಪ್ರಧಾನಿ ಭಾಷಣಕ್ಕೂ ಮುನ್ನ ಮಾತನಾಡಿದ ಸಿಜೆಐ ರಮಣ ಅವರು ಸ್ಥಳೀಯ ಭಾಷೆಗಳ ಪರವಾಗಿ ದನಿ ಎತ್ತಿದರು. ಸಾಂವಿಧಾನಿಕ ನ್ಯಾಯಾಲಯಗಳ ಮುಂದೆ ಮಂಡಿಸುವ ವಾದವು ಬುದ್ಧಿವಂತಿಕೆ ಮತ್ತು ಕಾನೂನಿನ ತಿಳಿವಳಿಕೆಯ ಆಧಾರದಲ್ಲಿ ಇರಬೇಕು. ಭಾಷಾ ಪ್ರಾವೀಣ್ಯವಷ್ಟೇ ಇಲ್ಲಿ ಮುಖ್ಯವಲ್ಲ ಎಂದು ರಮಣ ಹೇಳಿದ್ದಾರೆ. 

‘ಪ್ರಜಾಪ್ರಭುತ್ವದ ಇತರ ಸಂಸ್ಥೆಗಳ ರೀತಿಯಲ್ಲೇ ನ್ಯಾಯಾಂಗ ಸಹ ಸಮಾಜ ಮತ್ತು ಭೌಗೋಳಿಕ ವೈವಿಧ್ಯವನ್ನು ಪ್ರತಿಬಿಂಬಿಸಬೇಕು. ಹೈಕೋರ್ಟ್‌ಗಳಲ್ಲಿ ಸ್ಥಳೀಯ ಭಾಷೆ ಬಳಸಬೇಕು ಎಂಬ ಬಗ್ಗೆ ನನಗೆ ಸಾಕಷ್ಟು ಅಹವಾಲುಗಳು ಬಂದಿವೆ. ಈ ಬೇಡಿಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ’ ಎಂದು ರಮಣ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು