ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಪಂಥೀಯ ಉಗ್ರವಾದ ನಿಗ್ರಹ: ಸಿಆರ್‌ಪಿಎಫ್‌ ಸಿಬ್ಬಂದಿ ತ್ಯಾಗ ಮಹತ್ವದ್ದು– ಶಾ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಭಿಮತ
Last Updated 25 ಮಾರ್ಚ್ 2023, 12:26 IST
ಅಕ್ಷರ ಗಾತ್ರ

ಜಗದಲ್‌ಪುರ, ಛತ್ತೀಸಗಢ: ‘ದೇಶದಲ್ಲಿ ಎಡಪಂಥೀಯ ಉಗ್ರವಾದದ ವಿರುದ್ಧದ ಹೋರಾಟವು ಅಂತಿಮ ಘಟ್ಟದಲ್ಲಿದ್ದು, ಗೆಲುವು ಸನ್ನಿಹಿತವಾಗಿರುವಂತೆ ಕಾಣುತ್ತಿದೆ. ಈ ಸಾಧನೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಸಿಬ್ಬಂದಿಯ ತ್ಯಾಗವು ಮಹತ್ವದ್ದಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಸಿಆರ್‌ಪಿಎಫ್‌ ವತಿಯಿಂದ ಶನಿವಾರ ಇಲ್ಲಿ ಹಮ್ಮಿಕೊಳ್ಳಲಾಗಿದ್ದ 84ನೇ ಸಂಸ್ಥಾಪನಾ ದಿನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ಸಿಆರ್‌ಪಿಎಫ್‌ ಸಿಬ್ಬಂದಿಯು ಕಳೆದ ಒಂಬತ್ತು ವರ್ಷಗಳಿಂದ ಎಡಪಂಥೀಯ ಉಗ್ರವಾದದ ವಿರುದ್ಧ ದಿಟ್ಟ ಹೋರಾಟ ನಡೆಸಿದ್ದು, ಅದರಲ್ಲಿ ಯಶಸ್ಸನ್ನೂ ಸಾಧಿಸಿದ್ದಾರೆ. ಮಾವೊವಾದಿಗಳ ಹಿಡಿತಕ್ಕೆ ಸಿಲುಕಿ ನಲುಗಿದ್ದ ಪ್ರದೇಶಗಳ ಅಭಿವೃದ್ಧಿಗೆ ಎದುರಾಗಿದ್ದ ಅಡೆತಡೆಗಳನ್ನು ನಿವಾರಿಸಿದ ಶ್ರೇಯವು ಸಿಆರ್‌ಪಿಎಫ್‌ ಸಿಬ್ಬಂದಿಗೆ ಸಲ್ಲುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಎಡಪಂಥೀಯ ಉಗ್ರವಾದದ ವಿರುದ್ಧದ ಗೆಲುವನ್ನು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗುತ್ತದೆ. ಸಿಆರ್‌ಪಿಎಫ್‌ ಸಿಬ್ಬಂದಿಯು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ನಕ್ಸಲ್‌ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ. ಆ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ’ ಎಂದರು.

‘ಪ್ರಕ್ಷುಬ್ಧ ಪ‍್ರದೇಶ’ ತಗ್ಗಿಸಲು ನಿರ್ಧಾರ

‘ನಾಗಾಲ್ಯಾಂಡ್‌, ಅಸ್ಸಾಂ ಮತ್ತು ಮಣಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯ (ಎಎಫ್‌ಎಸ್‌ಪಿಎ) ಅಡಿಯಲ್ಲಿ ಘೋಷಿಸಲಾಗಿರುವ ‘ಪ್ರಕ್ಷುಬ್ಧ’ ಪ್ರದೇಶಗಳ ವ್ಯಾಪ್ತಿಯನ್ನು ತಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮತ್ತೊಮ್ಮೆ ನಿರ್ಧರಿಸಿದೆ’ ಎಂದು ಅಮಿತ್ ಶಾ ಹೇಳಿದ್ದಾರೆ.

ಶನಿವಾರ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ‘ಈಶಾನ್ಯ ಪ್ರದೇಶಗಳಲ್ಲಿನ ಭದ್ರತಾ ಪರಿಸ್ಥಿತಿಯು ಸಾಕಷ್ಟು ಸುಧಾರಿಸಿದೆ. ಹೀಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

‘ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ಈಶಾನ್ಯ ರಾಜ್ಯಗಳಲ್ಲಿನ ಭದ್ರತೆ, ಶಾಂತಿ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಇದರ ಪರಿಣಾಮವಾಗಿ ಈ ಪ್ರದೇಶವು ಕ್ರಮೇಣ ಶಾಂತಿ ಹಾಗೂ ಅಭಿವೃದ್ಧಿಯ ಪಥದತ್ತ ಮುಖಮಾಡಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT