ಗುರುವಾರ , ಮೇ 26, 2022
23 °C
ವಿಎಚ್‌ಪಿ ಉಲ್ಲೇಖ: ಬಳಿಕ ನಿಲುವು ಬದಲು

ಜಹಾಂಗಿರ್‌ಪುರಿಯಲ್ಲಿ ಹಿಂಸಾಚಾರ; ಅಧಿಕೃತ ಹೇಳಿಕೆಯಿಂದ ಹಿಂದೆ ಸರಿದ ದೆಹಲಿ ಪೊಲೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿಯ ಜಹಾಂಗಿರ್‌ಪುರಿಯಲ್ಲಿ ನಡೆದ ಹಿಂಸಾಚಾರದ ಜತೆ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮತ್ತು ಬಜರಂಗದಳಕ್ಕೆ ಸಂಪರ್ಕ ಕಲ್ಪಿಸಿ ನೀಡಿದ್ದ ಅಧಿಕೃತ ಹೇಳಿಕೆಯನ್ನು ಮಾಧ್ಯಮಗಳಿಗೆ ಪೊಲೀಸರು ಬಿಡುಗಡೆ ಮಾಡಿ, ಬಳಿಕ ಅದನ್ನು ಹಿಂದಕ್ಕೆ ಪಡೆದ ವಿದ್ಯಮಾನ ಸೋಮವಾರ ನಡೆದಿದೆ. ನಂತರ ಕೊಟ್ಟ ಹೇಳಿಕೆಯಲ್ಲಿ ಸಂಘ ಪರಿವಾರದ ಯಾವುದೇ ಸಂಘಟನೆಯ ಉಲ್ಲೇಖ ಇರಲಿಲ್ಲ. 

ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಶನಿವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಒಟ್ಟು ಮೂರು ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಒಂದು ಮೆರವಣಿಗೆಗೆ ಅನುಮತಿ ಪಡೆದುಕೊಂಡಿರಲಿಲ್ಲ ಎಂಬ ‍ಪ್ರಕರಣವೂ ಅದರಲ್ಲಿ ಸೇರಿದೆ.

ವಿಶ್ವಹಿಂದೂ ಪರಿಷತ್‌ ಮತ್ತು ಬಜರಂಗ ದಳದ ಮೆರವಣಿಗೆ ಆಯೋಜಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 188ರ ಅಡಿಯಲ್ಲಿ (ಅಧಿಕಾರಿಗಳ ಆದೇಶ ಉಲ್ಲಂಘನೆ) ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಆರಂಭದಲ್ಲಿ ಹೇಳಿದ್ದರು. ಪರಿಷತ್‌ನ ಜಿಲ್ಲಾ ಸೇವಾ ಪ್ರಮುಖರನ್ನು ಬಂಧಿಸಲಾಗಿದೆ ಎಂದೂ ಹೇಳಲಾಗಿತ್ತು.

ಆದರೆ, ಕೆಲವೇ ತಾಸುಗಳಲ್ಲಿ ಪೊಲೀಸರು ತಮ್ಮ ಹೇಳಿಕೆ ಬದಲಿಸಿದರು. ಹೊಸ ಹೇಳಿಕೆ ಬಿಡುಗಡೆ ಮಾಡಿದರು. ಅದರಲ್ಲಿ ಬಂಧನದ ಉಲ್ಲೇಖವೇ ಇರಲಿಲ್ಲ. 

ವಿಎಚ್‌ಪಿ ಮತ್ತು ಬಜರಂಗ ದಳದ ಮೆರವಣಿಗೆಯು ಅನುಮತಿಯಿಲ್ಲದೇ ಸಾಗಲು ಹೇಗೆ ಸಾಧ್ಯವಾಯಿತು, ಎರಡು ಪೊಲೀಸ್ ಜೀಪ್‌ಗಳೂ ಮೆರವಣಿಗೆಯಲ್ಲಿ ಜೊತೆಗಿರಲು ಸಾಧ್ಯವಾಗಿದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಸ್ಥಳೀಯರಪ್ರಕಾರ, ಮೂರು ಮೆರವಣಿಗೆಗಳು ನಡೆದಿವೆ. ಈ ಪೈಕಿ ವಿಎಚ್‌ಪಿ ಹಾಗೂ ಬಜರಂಗದಳ ಮೂರನೇ ಮೆರವಣಿಗೆಯನ್ನು ಆಯೋಜಿಸಿದ್ದವು. 

‘ಮೂರನೇ ಮೆರವಣಿಗೆಯು ಮಸೀದಿಯ ಸಮೀಪ ಸಾಗಿ ಬಂದಾಗ, ಕೆಲವು ಸದಸ್ಯರು ಮೆರವಣಿಗೆಯನ್ನು ತಡೆದರು. ಆ ಸಮಯದಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಮೆರವಣಿಗೆಯಲ್ಲಿ ಮೈಕ್‌ನಲ್ಲಿ ಹಾಕಲಾಗಿದ್ದ ಹಾಡಿನ ಧ್ವನಿಯನ್ನು ಹೆಚ್ಚಿಸಲಾಯಿತು’ ಎಂದು ಸ್ಥಳೀಯರು ಹೇಳಿದ್ದಾರೆ. ಮಸೀದಿಯ ಗೋಡೆಯ ಮೇಲೆ ಧ್ವಜ ಹಾರಿಸಲು ಯತ್ನ ನಡೆಯಿತು ಎಂದು ಸ್ಥಳೀಯರು ಹೇಳಿದ್ದರೂ, ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನ ಅವರು ಇದನ್ನು ಅಲ್ಲಗಳೆದಿದ್ದಾರೆ. 

ಪೊಲೀಸರ ಮೇಲೆ ಕಲ್ಲು ತೂರಾಟ
ಹಿಂಸಾಚಾರ ನಡೆದಿದ್ದ ಜಹಾಂಗಿರ್‌ಪುರಿಯಲ್ಲಿ ಸೋಮವಾರ ಮತ್ತೆ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಬಹುತೇಕ ಅಂಗಡಿಗಳನ್ನು ಮುಚ್ಚಲಾಗಿತ್ತು. ಅಲ್ಲಲ್ಲಿ ಕೆಲವು ಸ್ಥಳೀಯರು ಕಂಡುಬಂದಿದ್ದನ್ನು ಹೊರತುಪಡಿಸಿದರೆ, ಭಾರಿ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಇಡೀ ಪ್ರದೇಶವನ್ನು ಗಸ್ತು ತಿರುಗುತ್ತಿದ್ದಾರೆ. 

ಶನಿವಾರ ನಡೆದ ಹನುಮ ಜಯಂತಿ ಮೆರವಣಿಗೆಯು ಹಿಂಸಾಚಾರಕ್ಕೆ ತಿರುಗಿತ್ತು. ಹಿಂಸಾಚಾರದ ವೇಳೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ ಆರೋಪವಿರುವ ವ್ಯಕ್ತಿಯ ಮನೆಗೆ ಸೋಮವಾರ ಬೆಳಿಗ್ಗೆ ತೆರಳಿದ್ದ ಪೊಲೀಸ್ ತನಿಖಾ ತಂಡದ ಮೇಲೆ ಕಲ್ಲು ತೂರಾಟ ನಡೆದಿದೆ. ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. 

ಶೋಧ ನಡೆಸಲು ಹಾಗೂ ಕುಟುಂಬದವರ ವಿಚಾರಣೆ ನಡೆಸುವ ಉದ್ದೇಶದಿಂದ ಪೊಲೀಸರು ಸಿ.ಡಿ ಪಾರ್ಕ್ ರಸ್ತೆಯಲ್ಲಿರುವ ಶಂಕಿತನ ಮನೆಗೆ ಭೇಟಿ ನೀಡಿದ್ದರು ಎಂದು ರಂಗಾನಿ ಅವರು ಹೇಳಿದ್ದಾರೆ. ‘ಪೊಲೀಸ್ ತಂಡದ ಮೇಲೆ ಕುಟುಂಬದವರು ಕಲ್ಲು ತೂರಾಟ ನಡೆಸಿದರು. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಘಟನೆ ಸಂಬಂಧ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ’ ಎಂದು ಅವರು ಹೇಳಿದ್ದಾರೆ.

ಈ ಘಟನೆ ಕುರಿತಂತೆ ಸಾಕ್ಷ್ಯ ಕಲೆಹಾಕುತ್ತಿರುವ ಅಪರಾಧ ವಿಭಾಗದ ಪೊಲೀಸರು, ಸಮೀಪದ ಅಂಗಡಿಗಳಿಂದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿದ್ದಾರೆ. ಮಸೀದಿ ಸಮೀಪ ಅಂಗಡಿ ಇಟ್ಟುಕೊಂಡಿರುವ ರೋಷನ್ ಎಂಬುವರನ್ನು ಕರೆಸಿದ ಪೊಲೀಸರು, ಅಂಗಡಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ. 

ಮಸೀದಿಯಿಂದ 200 ಮೀಟರ್ ದೂರದಲ್ಲಿರುವ ಜಿ ಬ್ಲಾಕ್‌ನಲ್ಲಿ ಕೆಲವು ಅಂಗಡಿಗಳು ಸೋಮವಾರ ತೆರೆದಿದ್ದವು. ಈ ಪ್ರದೇಶದಲ್ಲಿಯೂ  ಶನಿವಾರ ಹಿಂಸಾಚಾರ ನಡೆದಿತ್ತು. 

ಖರ್ಗೋನ್‌ ಹಿಂಸೆಗೆ ಒಂದು ಬಲಿ
ಖರ್ಗೋನ್‌
: ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ರಾಮ ನವಮಿ ಆಚರಣೆಯಂದು ನಡೆದಿದ್ದ ಕೋಮು ಗಲಭೆ ವೇಳೆ ಕಾಣೆಯಾಗಿದ್ದ ವ್ಯಕ್ತಿ ಮೃತಪಟ್ಟಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಗಲಭೆ ನಡೆದ ಏಳು ದಿನಗಳ ಬಳಿಕ ದೇಹ ಪತ್ತೆ ಆಗಿದೆ.

ಈ ಸಾವನ್ನು ಪೊಲೀಸರು ಇಷ್ಟು ದಿವಸ ಮುಚ್ಚಿಟ್ಟಿದ್ದರು ಎಂದು ಮೃತ ವ್ಯಕ್ತಿಯ ಸಂಬಂಧಿಕರು ಆರೋಪಿಸಿದ್ದಾರೆ. 

ಖರ್ಗೋನ್‌ನಲ್ಲಿ ಶೈತ್ಯಗಾರ ವ್ಯವಸ್ಥೆ ಇಲ್ಲದ ಕಾರಣ ಮೃತ ವ್ಯಕ್ತಿ ಇಬ್ರೇಶ್‌ ಖಾನ್‌ (30) ಅವರ ಮೃತ ದೇಹವನ್ನು ಇಂದೋರ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಎಂಟು ದಿನಗಳ ಬಳಿಕ ದೇಹವನ್ನು ಖರ್ಗೋನ್‌ನ ಆನಂದ್‌ ನಗರದಕ್ಕೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ಹಿಂಸಾಚಾರ ನಡೆದ ಮರುದಿನವೇ ಇಬ್ರೇಶ್‌ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ಆ ದಿನವೇ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಮಧ್ಯಪ್ರದೇಶ ಸರ್ಕಾರ ಪ್ರತಿಪಾದಿಸಿದೆ. ಇಬ್ರೇಶ್‌ ಖಾನ್‌ ಕಾಣೆ ಆಗಿರುವ ಕುರಿತು ಏಪ್ರಿಲ್‌ 14ರಂದೇ ಅವರ ಕುಟುಂಬ ದೂರು ದಾಖಲಿಸಿತ್ತು ಎನ್ನಲಾಗಿದೆ.

ಧಾರ್ಮಿಕ ಧ್ವಜ ತೆರವು; ಕೋಮು ಘರ್ಷಣೆ
ಅಮರಾವತಿ (ಮಹಾರಾಷ್ಟ್ರ):
ಧಾರ್ಮಿಕ ಧ್ವಜವನ್ನು ತೆರವುಗೊಳಿಸಿದ್ದಕ್ಕಾಗಿ ಎರಡು ಸಮುದಾಯಗಳ ಸದಸ್ಯರ ನಡುವೆ ಇಲ್ಲಿಯ ಅಚಲ್‌ಪುರ ನಗರದಲ್ಲಿ ಭಾನುವಾರ ಮಧ್ಯರಾತ್ರಿ ಗಲಭೆ ನಡೆದಿದೆ. ಗಲಭೆ ನಡೆದ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ನಗರದ ಖಿಡ್ಕಿ ದ್ವಾರ ಮತ್ತು ದುಲ್ಹಾ ದ್ವಾರಗಳ ಬಳಿ ಧಾರ್ಮಿಕ ಧ್ವಜಗಳನ್ನು ಹಾಕಲಾಗಿತ್ತು. ಗುಂಪೊಂದು ಭಾನುವಾರ ಮಧ್ಯರಾತ್ರಿ ಧ್ವಜಗಳನ್ನು ತೆರವುಗೊಳಿಸಿತ್ತು. ಈ ಕಾರಣಕ್ಕಾಗಿ ಗಲಭೆ, ಕಲ್ಲು ತೂರಾಟ ನಡೆದಿದೆ. ಕೂಡಲೇ ಮಧ್ಯ ಪ್ರವೇಶಿಸಿದ ರಾಜ್ಯ ಮೀಸಲು ಪೊಲೀಸ್‌ ಪಡೆ ಪರಿಸ್ಥಿತಿಯನ್ನು ಹತೋಟಿಗೆ ತರುವ ಸಲುವಾಗಿ ಅಶ್ರುವಾಯು ಶೆಲ್‌ ಪ್ರಯೋಗಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡು ಹಾರಿಸಿದವನ ಬಂಧನ
* ಗಲಭೆಯ ವೇಳೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ ಸೋನು ಅಲಿಯಾಸ್ ಇಮಾಮ್ ಅಲಿಯಾಸ್ ಯೂನುಸ್ ಎಂಬ 28 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವ್ಯಕ್ತಿಯು ಗುಂಡು ಹಾರಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

* ಮೆರವಣಿಗೆಯ ಮೇಲೆ ಎಸೆಯಲು ಬಾಟಲಿ ಪೂರೈಸಿದ ಆರೋಪದ ಮೇಲೆ 36 ವರ್ಷದ ಶೇಕ್ ಹಮೀದ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ 

* ‘ಬಜರಂಗ ದಳದ ಯುವಘಟಕ ನಡೆಸುತ್ತಿದ್ದ ಮೆರವಣಿಗೆಯಲ್ಲಿದ್ದ ಕೆಲವರು ಕತ್ತಿ, ಲಾಠಿ ಹಾಗೂ ಶಸ್ತ್ರಾಸ್ತ್ರ ಹಿಡಿದು ಸಾಗುತ್ತಿರುವ ವಿಡಿಯೊ ಲಭ್ಯವಿವೆ. ಅಲ್ಪಸಂಖ್ಯಾತ ಸಮುದಾಯದವರನ್ನೇ ಹೆಚ್ಚಾಗಿ ಗುರಿಪಡಿಸಲಾಗಿದೆ’ ಎಂದು ಸಿಪಿಎಂ ಆರೋಪಿಸಿದೆ

* ರಾಜ್ಯದ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಅಳವಡಿಸಲು ಪೊಲೀಸರ ಅನುಮತಿ ಪಡೆಯುವುದು ಕಡ್ಡಾಯ ಎಂದು ಮಹಾರಾಷ್ಟ್ರ ಸರ್ಕಾರ ಪ್ರಕಟಿಸಿದೆ.

* ರಾಮ ನವಮಿ ಮತ್ತು ಹನುಮ ಜಯಂತಿ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಕೋಮು ಸಂಘರ್ಷಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.