ಶುಕ್ರವಾರ, ಫೆಬ್ರವರಿ 3, 2023
23 °C

ದೆಹಲಿಯಲ್ಲಿ ಮತ್ತೊಂದು ಬರ್ಬರ ಕೃತ್ಯ: ಪತಿ ಕೊಂದು ಹತ್ತು ತುಂಡು ಮಾಡಿ ಎಸೆದ ಪತ್ನಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ, ಮುಂಬೈ ಮೂಲದ ಕಾಲ್‌ ಸೆಂಟರ್‌ ಉದ್ಯೋಗಿ ಶ್ರದ್ಧಾ ವಾಲಕರ್‌ ಅವರ ಬರ್ಬರ ಹತ್ಯೆ ರೀತಿಯಲ್ಲೇ ಮತ್ತೊಂದು ಭೀಕರ ಕೊಲೆ ಪ್ರಕರಣ ರಾಜಧಾನಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಕಳೆದ ಮೇ 30ರಂದು ದೆಹಲಿಯ ಪಾಂಡವ್ ನಗರದ ನಿವಾಸಿ, ಲಿಫ್ಟ್‌  ಆಪರೇಟರ್‌ ಅಂಜನ್ ದಾಸ್ ಎಂಬಾತನನ್ನು ಆತನ ಎರಡನೇ ಪತ್ನಿ ಮತ್ತು ಆಕೆಯ ಮಗ ಸೇರಿ ಕೊಲೆ ಮಾಡಿ, ಶವವನ್ನು ಹತ್ತು ತುಂಡುಗಳಾಗಿ ಕತ್ತರಿಸಿದ್ದಾರೆ. ಆ ತುಂಡುಗಳನ್ನು ಪೂರ್ವ ದೆಹಲಿಯ ಹಲವೆಡೆ ಎಸೆಯುವ ಮೊದಲು ಫ್ರಿಜ್‌ನಲ್ಲಿ ಕೆಲವು ದಿನಗಳು ಇರಿಸಿದ್ದರು. ಕೊಲೆ ಆರೋಪಿಗಳಾದ ಪೂನಂ (48) ಮತ್ತು ದೀಪಕ್‌ನನ್ನು (25) ಬಂಧಿಸಲಾಗಿದೆ. ಫ್ರಿಜ್‌ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. 

ಶವದ ತುಂಡುಗಳಿದ್ದ ಚೀಲವೊಂದು ಪೂರ್ವ ದೆಹಲಿಯ ಕಲ್ಯಾಣಪುರಿಯ ರಾಮ್‌ಲೀಲಾ ಮೈದಾನದಲ್ಲಿ ಜೂನ್ 5ರಂದು ಪತ್ತೆಯಾಗಿತ್ತು. ಕೆಲವು ದಿನಗಳ ನಂತರ ವಿವಿಧೆಡೆ ಕಾಲುಗಳು, ತೊಡೆಗಳು, ತಲೆಬುರುಡೆ ಮತ್ತು ಮುಂಗೈ ಸಿಕ್ಕಿದವು. ಪಾಂಡವ್‌ ನಗರ ಠಾಣೆಯಲ್ಲಿ ಕೊಲೆ ಮತ್ತು ಸಾಕ್ಷ್ಯನಾಶ ಯತ್ನದ ಪ್ರಕರಣ ದಾಖಲಾಯಿತು. 

‘ಸಿಸಿ ಟಿ.ವಿ ದೃಶ್ಯಗಳು ಮತ್ತು ಸ್ಥಳೀಯರಿಂದ ಸಂಗ್ರಹಿಸಿದ ಮಾಹಿತಿಯಿಂದ ಶವದ ಸುಳಿವು ಸಿಕ್ಕಿತು. ಅಂಜನ್‌ ದಾಸ್ ನಾಪತ್ತೆ ದೂರು ದಾಖಲಿಸದಿರುವ ಸಂಶಯದ ಮೇಲೆ ಆತನ ಪತ್ನಿ ಪೂನಂ ಮತ್ತು ಮಲಮಗ ದೀಪಕ್‌ನನ್ನು ವಿಚಾರಣೆ ನಡೆಸಲಾಯಿತು. ಮಲಮಗಳು ಮತ್ತು ಸೊಸೆ (ಮಲಮಗನ ಪತ್ನಿ) ಮೇಲೆ ಅಂಜನ್‌ ದಾಸ್‌ ಕೆಟ್ಟದೃಷ್ಟಿ ಬೀರಿದ್ದ ಸಂಶಯದ ಮೇಲೆ ಕೊಲೆ ಮಾಡಿರುವುದಾಗಿ ತಾಯಿ– ಮಗ ತಪ್ಪೊಪ್ಪಿಕೊಂಡರು’ ಎಂದು ಪೊಲೀಸರು ವಿವರಿಸಿದ್ದಾರೆ. 

ಅಂಜನ್‌ ದಾಸ್‌ಗೆ ಬಿಹಾರದಲ್ಲಿ ಮೊದಲ ಪತ್ನಿ ಮತ್ತು ಎಂಟು ಪುತ್ರರು ಇದ್ದಾರೆ. ಆದರೆ, ಅದನ್ನು ಆತ ಪೂನಂನಿಂದ ಮುಚ್ಚಿಟ್ಟಿದ್ದ. ಶವದ ತುಂಡುಗಳ ತಾಳೆಗಾಗಿ ದಾಸ್‌ ರಕ್ತಸಂಬಂಧಿಗಳ ಡಿಎನ್‌ಎ ಮಾದರಿ ಸಂಗ್ರಹಿಸಲು ತನಿಖಾ ತಂಡ ಬಿಹಾರಕ್ಕೆ ತೆರಳಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣ ದೆಹಲಿಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ 26 ವರ್ಷದ ಶ್ರದ್ಧಾ ವಾಲಕರ್‌ ಎಂಬ ಯುವತಿಯನ್ನು ಆಕೆಯ ಸಹಜೀವನದ ಸಂಗಾತಿ ಆಫ್ತಾಬ್‌ ಅಮೀನ್‌ ಪೂನಾವಾಲಾ ಬರ್ಬರವಾಗಿ ಕೊಂದು, ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ ಪ್ರಕರಣಕ್ಕೆ ಹೋಲಿಕೆಯಾಗುತ್ತಿದೆ.

ನಿದ್ರೆ ಮಾತೆ ಕೊಟ್ಟು ಗಂಟಲು ಸೀಳಿದರು
‘ಮಾರ್ಚ್- ಏಪ್ರಿಲ್‌ನಲ್ಲೇ ಕೊಲೆಗೆ ಯೋಜಿಸಲಾಗಿತ್ತು. ಕೊಲೆಗೆ ಮುನ್ನ ದಾಸ್‌ಗೆ ಪಾನೀಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕುಡಿಸಲಾಯಿತು. ಪ್ರಜ್ಞೆ ಕಳೆದುಕೊಂಡ ಮೇಲೆ ಚಾಕು ಮತ್ತು ಕಠಾರಿ ಬಳಸಿ, ಗಂಟಲು ಸೀಳಲಾಯಿತು. ದೇಹದಿಂದ ರಕ್ತ ಸಂಪೂರ್ಣ ಬಸಿಯುವವರೆಗೆ ಕಾದು, ತುಂಡುತುಂಡಾಗಿ ಕತ್ತರಿಸಲಾಯಿತು. ತಲೆ ಬುರುಡೆ ಸುಟ್ಟು ಹಾಕಲಾಯಿತು’ ಎಂದು ಆರೋಪಿಗಳು ಪೊಲೀಸ್‌ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾರೆ.

ಸತ್ತವ ಕೊಲೆಗಾತಿಗೆ ಮೂರನೇ ಗಂಡ!
ಪೊಲೀಸರ ಪ್ರಕಾರ, ಪೂನಂಗೆ 14ರ ವಯಸ್ಸಿನಲ್ಲೇ ಸುಖದೇವ್ ತಿವಾರಿ ಎಂಬಾತನ ಜತೆ ವಿವಾಹವಾಗಿತ್ತು. ಆದರೆ, ಆತ ಪತ್ನಿ ತೊರೆದು ದೆಹಲಿಗೆ ಬಂದಿದ್ದ. ಗಂಡನನ್ನು ಅರಸಿ ದೆಹಲಿಗೆ ಬಂದ ಪೂನಂಗೆ ‌ಕಲ್ಲು ಎಂಬಾತನ ಪರಿಚಯವಾಗಿ, ಆತನೊಂದಿಗೆ ಸಹಜೀವನ ನಡೆಸುತ್ತಿದ್ದಳು. ನಂತರ ಈಕೆಗೆ ಅಂಜನ್‌ ದಾಸ್‌ ಸಿಕ್ಕಿ, ಅವನೊಂದಿಗೆ ಸಂಬಂಧ ಬೆಳೆಸಿದಳು. ಕಲ್ಲು 2016ರಲ್ಲಿ ಯಕೃತ್ತಿನ ವೈಫಲ್ಯದಿಂದ ಮೃತಪಟ್ಟ. ಮರು ವರ್ಷವೇ ಪೂನಂ ಮತ್ತು ಅಂಜನ್‌ ದಾಸ್  ಮದುವೆಯಾಗಿದ್ದರು.

ತನ್ನ ಮೊದಲ ಮದುವೆ, ಕುಟುಂಬದ ವಿಚಾರ ಮುಚ್ಚಿಟ್ಟಿದ್ದ ದಾಸ್‌, ಪೂನಂಳ ಆಭರಣಗಳನ್ನು ಮಾರಿ, ಬಿಹಾರದಲ್ಲಿನ ತನ್ನ ಕುಟುಂಬಕ್ಕೆ ಹಣ ಕಳುಹಿಸಿದ್ದ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು