ಸೋಮವಾರ, ಮಾರ್ಚ್ 27, 2023
31 °C
ಬಾಂಬೆ ಹೈಕೋರ್ಟ್‌ ಅಭಿಪ್ರಾಯ

ಗರ್ಭಾವಸ್ಥೆ ಕುರಿತ ತೀರ್ಮಾನ ಕೈಗೊಳ್ಳುವ ಹಕ್ಕು ಮಹಿಳೆಗೆ ಇದೆ: ಹೈಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ (ಪಿಟಿಐ): ‘ಗರ್ಭಾವಸ್ಥೆಯನ್ನು ಮುಂದುವರಿಸಬೇಕೊ, ಬೇಡವೊ ಎಂಬುದನ್ನು ನಿರ್ಧರಿಸುವ ಹಕ್ಕು ಮಹಿಳೆಗೆ ಇದೆ. ಅದು ಆಕೆ ಮಾತ್ರ ಕೈಗೊಳ್ಳಬಹುದಾದ ತೀರ್ಮಾನ’ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ.

ಭ್ರೂಣವು ಅಸಹಜವಾಗಿ ಬೆಳವಣಿಗೆ ಹೊಂದಿರುವುದು ‘ಸೋನೊಗ್ರಫಿ’ ಪರೀಕ್ಷೆಯಿಂದ ದೃಢಪಟ್ಟಿತ್ತು. ಜನಿಸುವ ಮಗುವು ದೈಹಿಕ ಹಾಗೂ ಮಾನಸಿಕ ನ್ಯೂನತೆಯಿಂದ ಬಳಲಿದೆ ಎಂಬುದು ಖಾತರಿಯಾಗಿದ್ದರಿಂದ ವಿವಾಹಿತ ಮಹಿಳೆಯೊಬ್ಬರು ಗರ್ಭಪಾತ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ಆದರೆ 32 ವಾರಗಳ ಭ್ರೂಣವನ್ನು ತೆಗೆಸುವುದಕ್ಕೆ ವೈದ್ಯಕೀಯ ಮಂಡಳಿ ಅನುಮತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್‌ ಮೊರೆ ಹೋಗಿದ್ದರು.

ಇದೇ 20ರಂದು ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಗೌತಮ್‌ ಪಟೇಲ್‌ ಮತ್ತು ಎಸ್‌.ಜಿ.ದಿಗೆ ಅವರನ್ನೊಳಗೊಂಡ ದ್ವಿಸದಸ್ಯ ವಿಭಾಗೀಯ ಪೀಠವು ಗರ್ಭಪಾತ ಮಾಡಿಸಿಕೊಳ್ಳಲು ಮಹಿಳೆಗೆ ಅನುಮತಿ ನೀಡಿದೆ.

‘ಭ್ರೂಣವು ಅಸ್ವಾಭಾವಿಕವಾಗಿ ಬೆಳವಣಿಗೆಯಾಗಿದ್ದರೂ ಕೂಡ ಗರ್ಭಧಾರಣೆಯು ಬಹುತೇಕ ಕೊನೆಯ ಹಂತದಲ್ಲಿರುವುದರಿಂದ ಗರ್ಭಪಾತಕ್ಕೆ ಅನುಮತಿ ನೀಡಬಾರದು’ ಎಂದು ವೈದ್ಯಕೀಯ ಮಂಡಳಿ ತಿಳಿಸಿತು. ಆದರೆ ಮಂಡಳಿಯ ಈ ವಾದವನ್ನು ನ್ಯಾಯಪೀಠ ಒಪ್ಪಲಿಲ್ಲ. 

‘ಅರ್ಜಿದಾರರು ಭ್ರೂಣವು ಅಸಹಜವಾಗಿ ಬೆಳವಣಿಗೆ ಹೊಂದಿರುವ ಕಾರಣ ನೀಡಿದ್ದಾರೆ. ಆಗ ಗರ್ಭಾವಸ್ಥೆಯ ಅವಧಿಯ ವಿಚಾರ ಅಪ್ರಸ್ತುತವಾಗುತ್ತದೆ. ಅರ್ಜಿದಾರರು ತಿಳಿವಳಿಕೆಯ ತೀರ್ಮಾನ ಕೈಗೊಂಡಿದ್ದಾರೆ. ಅದು ಅಷ್ಟು ಸುಲಭದ್ದಲ್ಲ. ಅದು ಆಕೆಯ ನಿರ್ಧಾರ. ಆಕೆ ಮಾತ್ರ ಕೈಗೊಳ್ಳಬಹುದಾದ ನಿರ್ಧಾರ. ಈ ವಿಚಾರದಲ್ಲಿ ಅರ್ಜಿದಾರರಿಗೆ ಆಯ್ಕೆಯ ಹಕ್ಕು ಇದೆಯೇ ಹೊರತು ವೈದ್ಯಕೀಯ ಮಂಡಳಿಗಲ್ಲ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.

‘ವಿಳಂಬದ ಕಾರಣ ನೀಡಿ ಗರ್ಭಪಾತಕ್ಕೆ ಅವಕಾಶ ನಿರಾಕರಿಸುವುದು ಮಹಿಳೆ ಹಾಗೂ ಆಕೆಯ ಪತಿಯನ್ನು ಅತೃ‍ಪ್ತ ಪಾಲಕರನ್ನಾಗಿಸಲು ಬಲವಂತಪಡಿಸಿದಂತೆ. ಮಹಿಳೆಯ ಘನತೆಯ ಹಕ್ಕು ಹಾಗೂ ಸಂತಾನೋತ್ಪತ್ತಿ ಮತ್ತು ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವನ್ನು ನಿರಾಕರಿಸಿದಂತೆ. ಇದರಿಂದ ದಂ‍‍ಪತಿ ಹಾಗೂ ಅವರ ಕುಟುಂಬದ ಮೇಲೆ ಉಂಟಾಗುವಂತಹ ಪ್ರತಿಕೂಲ ಪರಿಣಾಮವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು