ಮಂಗಳವಾರ, ಜೂನ್ 28, 2022
26 °C
ದೆಹಲಿಯಲ್ಲಿ ಬೀಡುಬಿಟ್ಟ ನಿವೃತ್ತ ಐಎಎಸ್ ಅಧಿಕಾರಿ, ಎಂಎಲ್‌ಸಿ ಎ.ಕೆ.ಶರ್ಮಾ

ಮೋದಿ– ಯೋಗಿ ಭೇಟಿ: ಸಂಪುಟ ವಿಸ್ತರಣೆ ಊಹಾಪೋಹ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಭೇಟಿಮಾಡಿ ಮಾತುಕತೆ ನಡೆಸಿದ್ದಾರೆ. ಮೋದಿ– ಯೋಗಿ ಭೇಟಿಯ ಸಂದರ್ಭದ ಚಿತ್ರವನ್ನು, ಪ್ರಧಾನಿ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.

ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಮಾಡಿದ ಮರುದಿನವೇ ಯೋಗಿ ಅವರು ಮೋದಿಯನ್ನು ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಹಾಗೂ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಒಂದೂವರೆ ಗಂಟೆ ಕಾಲ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಭೆಯ ನಂತರ ಯಾವ ನಾಯಕರೂ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿಲ್ಲ. ಆದರೆ ಟ್ವಿಟರ್ ಮೂಲಕ ಪರಸ್ಪರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ಈ ಭೇಟಿ ಹಾಗೂ ಟ್ವಿಟರ್‌ ಹೇಳಿಕೆಗಳ ಮೂಲಕ ಉತ್ತರ ಪ್ರದೇಶದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನೂ ಯೋಗಿ ಅವರ ನೇತೃತ್ವದಲ್ಲೇ ಎದುರಿಸಲಾಗುವುದು ಎಂಬ ಸಂದೇಶವನ್ನು ನಾಯಕರು ಭಿನ್ನಮತೀಯರಿಗೆ ನೀಡಿದ್ದಾರೆ’ ಎಂದು ಪಕ್ಷದೊಳಗಿನವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಜೆಪಿಯು ಲಖನೌದಲ್ಲಿ ಮೇಲಿಂದ ಮೇಲೆ ಪರಿಶೀಲನಾ ಸಭೆಗಳನ್ನು ನಡೆಸಿತ್ತು. ಈಗ ಚುನಾವಣಾ ಸಿದ್ಧತೆಗಳನ್ನೂ ಆರಂಭಿಸಿದಂತೆ ವ್ಯಕ್ತವಾಗುತ್ತಿದೆ. ಗುರುವಾರ ಸಂಜೆ ಅಮಿತ್‌ ಶಾ ಅವರು ಅಪ್ನಾ ದಳದ ಮುಖ್ಯಸ್ಥೆ, ಎನ್‌ಡಿಎ–1 ಸರ್ಕಾರದಲ್ಲಿ ಸಚಿವೆಯಾಗಿದ್ದ ಅನುಪ್ರಿಯಾ ಎಸ್‌. ಪಟೇಲ್‌ ಅವರನ್ನು ಭೇಟಿಮಾಡಿ ಚರ್ಚಿಸಿದ್ದರು. ಜತೆಗೆ ನಿಷಾದ್‌ ಪಾರ್ಟಿಯ ಮುಖ್ಯಸ್ಥರನ್ನೂ ಶಾ ಭೇಟಿ ಮಾಡಿದ್ದರು. ಇವರಿಬ್ಬರೂ ರಾಜ್ಯದ ಪ್ರಮುಖ ಸಮುದಾಯಗಳನ್ನು ಪ್ರತಿನಿಧಿಸುತ್ತಾರೆ.

ಗೃಹಸಚಿವ ಅಮಿತ್‌ ಶಾ ಅವರನ್ನು ಗುರುವಾರ ಭೇಟಿಮಾಡಿದ್ದ ಸಂದರ್ಭದಲ್ಲಿ ಯೋಗಿ ಅವರು ‘ವಲಸೆ ಬಿಕ್ಕಟ್ಟಿಗೆ ಪರಿಹಾರ’ ಕುರಿತ ವರದಿಯೊಂದನ್ನು ಸಚಿವರಿಗೆ ಹಸ್ತಾಂತರಿಸಿದ್ದಾರೆ. ಇದಾದ ನಂತರ, ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿರುವ ಕಾಂಗ್ರೆಸ್ ಮುಖಂಡ ಜಿತಿನ್‌ ಪ್ರಸಾದ ಅವರು ದೆಹಲಿಯಲ್ಲಿ ಯೋಗಿ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದ್ದಾರೆ. ಮಾಜಿ ಐಎಎಸ್ ಅಧಿಕಾರಿ, ವಿಧಾನಪರಿಷತ್‌ ಸದಸ್ಯ ಮತ್ತು ಪ್ರಧಾನಿಯ ಆತ್ಮೀಯ ವಲಯದವರೆಂದು ಗುರುತಿಸಲಾಗಿರುವ ಎ.ಕೆ. ಶರ್ಮಾ ಅವರೂ ಒಂದೆರಡು ದಿನಗಳಿಂದ ದೆಹಲಿಯಲ್ಲಿದ್ದು ಪಕ್ಷದ ಮುಖಂಡರನ್ನು ಭೇಟಿಮಾಡುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಯ ಬಗ್ಗೆ ಪಕ್ಷದಿಂದ ಅಧಿಕೃತವಾಗಿ ಯಾವುದೇ ಹೇಳಿಕೆಗಳು ಬಂದಿಲ್ಲವಾದರೂ, ರಾಜ್ಯದಲ್ಲಿ ಗಮನಾರ್ಹ ಸಂಖ್ಯೆಯಲ್ಲಿರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಜಿತಿನ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ.

ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಇತ್ತೀಚೆಗೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿ, ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಸಿದ್ಧತೆಗಳ ಪರಿಶೀಲನೆ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ರಾಜ್ಯದ ಪ್ರಮುಖ ನಾಯಕರು ಮತ್ತು ಸಂಘಟನೆಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದ್ದರು. ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ ಸಿಂಗ್‌ ಅವರೂ ಉತ್ತರಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು