‘ಮನೆಗೆಲಸದ ಹೆಣ್ಣಿನ ನೋವಿಗೂ ಧ್ವನಿ ಸಿಗಲಿ’

7

‘ಮನೆಗೆಲಸದ ಹೆಣ್ಣಿನ ನೋವಿಗೂ ಧ್ವನಿ ಸಿಗಲಿ’

Published:
Updated:
Deccan Herald

‘ಮೀ–ಟೂ ಚಳವಳಿ, ಕೇವಲ ಕ್ಲಾಸ್‌ ಕ್ಯಾರೆಕ್ಟರ್ ಆಗಿ ಮೇಲ್ವರ್ಗದ ಸೋಷಿಯಲ್‌ ಮೀಡಿಯಾ ಬಲ್ಲವರ ಪಾಲಿಗಷ್ಟೇ ಚಳವಳಿ ಆಗದಿರಲಿ’ ಎಂಬುದು ಆಲ್‌ ಇಂಡಿಯಾ ಸೆಂಟ್ರಲ್‌ ಕೌನ್ಸಿಲ್‌ ಫಾರ್‌ ಟ್ರೇಡ್‌ ಯೂನಿಯನ್‌ (ಎಐಸಿಸಿಟಿಯು) ರಾಜ್ಯ ಕಾರ್ಯದರ್ಶಿಯೂ ಆಗಿರುವ ಹೈಕೋರ್ಟ್‌ ವಕೀಲೆ ಮೈತ್ರಿ ಕೃಷ್ಣನ್‌ ಅವರ ಆಶಯ.

ದೇಶದಾದ್ಯಂತ ಶುರುವಾಗಿರುವ ಮೀ–ಟೂ ಅಲೆಯನ್ನು ಯಾವ ನೆಲೆಗಟ್ಟಿನಲ್ಲಿ ಗುರುತಿಸುತ್ತೀರಿ?

ದುಡಿಯುವ ಸ್ಥಳಗಳಲ್ಲಿ ತನಗಾಗುತ್ತಿರುವ ದೌರ್ಜನ್ಯವನ್ನು ಪ್ರಶ್ನಿಸುವ ಮಹಿಳೆಯ ದನಿಗೆ ಈಗ ಗಟ್ಟಿತನ ಬಂದಿದೆ. ಹೀಗಾಗಿ ಇದು ಕೇವಲ ಮೀ–ಟೂ ಪ್ರಶ್ನೆಯಲ್ಲ. ಅಸಮಾನತೆಯನ್ನೂ ಪ್ರಶ್ನಿಸುತ್ತಿರುವ ಪ್ರಶಸ್ತ ಕಾಲ.

ಮೀ–ಟೂ ಚಳವಳಿಯ ಸ್ವರೂಪ ಪಡೆಯುವುದೇ?

ಇವತ್ತು ಇದು ಸೋಷಿಯಲ್ ಮೀಡಿಯಾ ಬಳಸುವ ವರ್ಗದಲ್ಲಿ ಮಾತ್ರವೇ ಕಂಡು ಬಂದಿದೆ. ಮಧ್ಯಮ, ಮೇಲ್ಮಧ್ಯಮ ವರ್ಗಕ್ಕೆ
ಸೀಮಿತ ಎನ್ನುವಂತಾಗಿದೆ. ಅಂಗನವಾಡಿ ಟೀಚರ್‌, ಪೌರ ಕಾರ್ಮಿಕರು, ಗಾರ್ಮೆಂಟ್‌ ಫ್ಯಾಕ್ಟರಿಯ ನೌಕರರಿಗೆ ಯಾರು ಎಷ್ಟು ಲೈಂಗಿಕ ಹಿಂಸೆ ಕೊಟ್ಟಿದ್ದಾರೆ ಎಂದು ನಾವೆಂದಾದರೂ ಹೋಗಿ ಕೇಳಿದ್ದೇವೆಯೇ? ಇಲ್ಲಾ, ಅಂತಹವರ ಧ್ವನಿಯನ್ನೂ ನಾವು ಹೇಗೆ ಆಲಿಸುತ್ತೇವೆ ಎನ್ನುವುದರ ಮೇಲೆ ಮೀ–ಟೂ, ಭವಿಷ್ಯದಲ್ಲಿ ಚಳವಳಿಯ ಸ್ವರೂಪ ಪಡೆಯಬಹುದೋ ಇಲ್ಲವೋ ಎಂಬುದನ್ನು ನಿರ್ಧರಿಸಬಹುದು.

ಕೇವಲ ಟ್ವಿಟರ್‌ನಲ್ಲಿ ಫಿರ್ಯಾದು ತೋಡಿಕೊಂಡರೆ, ಕಾನೂನು ಕ್ರಮ ಕೈಗೊಳ್ಳಲು ಸಾಕಾಗುತ್ತದೆಯೇ?

ಈ ವಿಷಯವನ್ನು ಕೇವಲ ಕಾನೂನಿನ ನೇರಕ್ಕೆ ನೋಡಲಾಗುವುದಿಲ್ಲ. ಇದಕ್ಕೆ ಸಾಮಾಜಿಕ ಆಯಾಮಗಳಿವೆ. ಈಗ ಸೋಷಿಯಲ್‌ ಮೀಡಿಯಾಗಳಲ್ಲಿ ಪತ್ರಕರ್ತೆಯರು ಟ್ವೀಟ್‌ ಮಾಡಿರುವುದನ್ನೇ ಆಯಾ ಕಂಪನಿಗಳು ದೂರು ಎಂದು ಪರಿಗಣಿಸಿ ವಿಚಾರಣೆ ನಡೆಸಲು ಮುಂದಾಗಿವೆ. ಒಂದು ವೇಳೆ ಪೊಲೀಸ್‌ ದೂರು ಕೊಡಬಹುದು ಎನ್ನಿಸಿದರೆ ಅದನ್ನೂ ಮಾಡಬಹುದು. ಲೈಂಗಿಕ ದೌರ್ಜನ್ಯ ಯಾವತ್ತು ನಡೆದಿದ್ದರೂ ಅದು ಅಪರಾಧವೇ.

ಇದೊಂದು ಫ್ಯಾಷನ್‌ ಆಗಿದೆ ಎಂದು ಸುಭಾಷ್‌ ಘಾಯ್ ಹೇಳಿದ್ದಾರಲ್ಲಾ?

ಇದೊಂದು ವಿಶ್ವಾಸಘಾತುಕತನದ ಮಾತು. ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದಾಗ, ಪತ್ರಕರ್ತೆಯ ಕೊಲೆ ಆದಾಗಲೂ ಇದೇ
ರೀತಿಯ ವ್ಯಂಗ್ಯ ನುಡಿದ ಸಮಾಜವಿದು. ಮಧ್ಯರಾತ್ರಿಯಲ್ಲಿ ಆ ಮಹಿಳೆಯರು ಏನು ಮಾಡುತ್ತಿದ್ದರು ಎಂದು ಕೇಳಿದಂತಹವರಲ್ಲವೇ ನಾವು?

ಪಬ್ಲಿಸಿಟಿಗೆ ಇಂತಹುದನ್ನೆಲ್ಲಾ ಹೇಳುತ್ತಾರೆ ಎನ್ನುವುದು ಘಾಯ್‌ ತರಹದವರ ಅಂಬೋಣ. ನೋಡಿ, ನಾವು ಇಂತಹ ವಿಷಯಗಳಲ್ಲಿ, ಮಹಿಳೆಯರ ಮಾತನ್ನೇ ನಂಬುವುದಿಲ್ಲ. ಅವರ ದೂರನ್ನೇ ಪರಾಮರ್ಶೆಗೆ ಒಡ್ಡುತ್ತೇವೆ. ಅವರ ವಿರುದ್ಧವೇ ಮಾತನಾಡುತ್ತೇವೆ. ಎಂದೋ ಆದ ಘಟನೆಗೆ ಈಗ ದೂರು ಕೊಡುತ್ತಿದ್ದಾರೆ ಎಂದು ಹೀಯಾಳಿಸಿದರೆ ಏನರ್ಥ?

ಕಾರ್ಮಿಕ ವರ್ಗಗಳ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಮಾಧ್ಯಮಗಳು ಕಡೆಗಣಿಸಿವೆ ಎನ್ನಿಸುವುದಿಲ್ಲವೇ?

ಇಲ್ಲಾ, ಹಾಗೇನಿಲ್ಲ. ಸೋಷಿಯಲ್‌ ಮೀಡಿಯಾ ಬಳಸುವ ಮೇಲ್ವರ್ಗದ ಜನರಿಗೆ ಕೊಟ್ಟಷ್ಟೇ ಒತ್ತನ್ನು ಛತ್ತೀಸಗಡದ ಆದಿವಾಸಿ ಶಾಲಾಶಿಕ್ಷಕಿ ಸೋನಿ ಸೂರಿ ಹಾಗೂ ಮಣಿಪುರದ ಥಾಂಗ್ಜಮ್‌ ಮನೋರಮಾ ಪ್ರಕರಣಗಳಲ್ಲಿಯೂ ಕೊಟ್ಟಿರುವ ಉದಾಹರಣೆ ನಮ್ಮ ಕಣ್ಣ ಮುಂದಿದೆ.

ಬಡ ಮಹಿಳಾ ಕಾರ್ಮಿಕರ ಗೋಳಿಗೆ, ದೌರ್ಜನ್ಯಕ್ಕೆ ಸಿಗಬೇಕಾದಷ್ಟು ರಕ್ಷಣೆ ಸಿಗುತ್ತಿದೆಯೇ?

ಮನೆಗೆಲಸದವರು, ಪೌರ ಕಾರ್ಮಿಕರು, ಕೂಲಿಕಾರ ಮಹಿಳೆಯರು... ಹೀಗೆ ದುಡಿಯುವ ವರ್ಗದ ಇನ್ನೂ ಅನೇಕ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅಸಂಖ್ಯ ಮತ್ತು ನಿರಂತರ. ಈ ಸಮುದಾಯ ತಮ್ಮ ಮೇಲಾಗುವ ದೌರ್ಜನ್ಯಗಳ ಬಗ್ಗೆ ಯಾರಲ್ಲಿ ಹೇಳಿಕೊಳ್ಳಬೇಕು ಎಂಬ ಮಾರ್ಗಗಳಿಲ್ಲದೆ ಮತ್ತು ಜೀವನ ನಿರ್ವಹಣೆಯ ಖಾತ್ರಿ ಇಲ್ಲದೆ ಮೌನವಾಗಿದೆ.

ಮಹಿಳೆಯರು ಲೈಂಗಿಕ ದೌರ್ಜನ್ಯಗಳಿಗೆ ಒಳಗಾಗುವುದನ್ನು ತಡೆಯಬೇಕು ಎನ್ನುವ ಕಾನೂನುಗಳು ದುರ್ಬಲವಾಗಿವೆಯೇ ಅಥವಾ ಅವುಗಳ ಅನುಷ್ಠಾನದಲ್ಲಿ ಏನಾದರೂ ಲೋಪವಿದೆಯೇ?

ಕಾನೂನು ದುರ್ಬಲವಾಗಿಲ್ಲ. ಅನುಷ್ಠಾನದಲ್ಲಿ ಲೋಪವಿದೆ. ದೂರು ಕೊಟ್ಟರೆ ಅಂಥವರನ್ನು ಟಾರ್ಗೆಟ್‌ ಮಾಡಲಾಗುತ್ತದೆ. ಲೈಂಗಿಕ ದೌರ್ಜನ್ಯ ತಡೆ ಸಮಿತಿಗಳು ಎಷ್ಟು, ಎಲ್ಲೆಲ್ಲಿ ರಚನೆಯಾಗಿವೆ, ಅವು ಹೇಗೆ ಕೆಲಸ ಮಾಡುತ್ತಿವೆ ಎಂಬ ಅಂಕಿ–ಅಂಶಗಳೇ ನಮ್ಮಲ್ಲಿಲ್ಲ.

ಎಲ್ಲ ದೂರುಗಳನ್ನೂ ಸಂತ್ರಸ್ತ ಮಹಿಳೆಯರೇ ನೀಡಬೇಕಿಲ್ಲ. ಸಹೋದ್ಯೋಗಿಗಳಿಗೂ ಈ ದಿಸೆಯಲ್ಲಿ ಸರಿಯಾದ ತರಬೇತಿ ನೀಡಬೇಕು. ಒಂದು ಹೆಣ್ಣಿನ ನೋವಿಗೆ ಸುತ್ತಲಿನವರೆಲ್ಲಾ ದನಿ ಎತ್ತುವಂತಾಗಬೇಕು. ಆಗ ಕಾನೂನಿಗೆ ಬಲ ಬರುತ್ತದೆ.

ನಿರ್ಲಕ್ಷಿತ ವರ್ಗಗಳಲ್ಲಿನ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಆಳುವ ಸರ್ಕಾರಗಳು ತೃಪ್ತಿಕರವಾಗಿ ನಡೆದುಕೊಳ್ಳುತ್ತಿವೆಯೇ?

ಇಲ್ಲ. ಮನೆಗೆಲಸದವರ ಮೇಲೆ, ಸ್ಥಳೀಯ ಸಂಸ್ಥೆಗಳಲ್ಲಿ, ಗಾರ್ಮೆಂಟ್‌ ಫ್ಯಾಕ್ಟರಿಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ಸಮಿತಿಗಳು ರಚನೆಯಾಗಿವೆಯೇ ಹೇಗೆ ಎಂಬ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಇಲ್ಲ. ಬಹಳಷ್ಟು ಕಡೆ ಸ್ಥಳೀಯವಾಗಿ ಇಂತಹ ಸಮಿತಿಗಳೇ ರಚನೆಯಾಗಿಲ್ಲ. ಮನೆಗೆಲಸದವರಿಗೆ ಸಮಿತಿ ಮಾಡಲು ಆಗೋದಿಲ್ಲ. ಹಾಗಾದರೆ ಅವರೆಲ್ಲಾ ಎಲ್ಲಿಗೆ ಹೋಗಬೇಕು, ಕನಿಷ್ಠ ವೇತನ ಸಿಗಬೇಕು ಎಂಬುದೇ ಅವರಿಗೆ ಗೊತ್ತಿರುವುದಿಲ್ಲ. ಅಂತಹುದರಲ್ಲಿ ಈ ವಿಚಾರಗಳಲ್ಲಿ ಅವರು ಹೇಗೆ ತಾನೇ ಮುಂದುವರಿಯುತ್ತಾರೆ?

ವಿಶಾಖಾ ಪ್ರಕರಣದ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರೆ ಮೀ–ಟೂ ಚಳುವಳಿಯ ಅಗತ್ಯ
ಕಂಡು ಬರುತ್ತಿತ್ತೇ ?

ದುಡಿಯುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗೆ 1996ರಲ್ಲಿ ವಿಶಾಖ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗಿದೆ. ತದನಂತರ 2013ರಲ್ಲಿ ಈ ದಿಸೆಯಲ್ಲಿ ಕಾನೂನು ಕೂಡಾ ಜಾರಿಗೆ ಬಂದಿದೆ. ಪ್ರತಿಯೊಂದು ಕಂಪನಿಯೂ ವಾರ್ಷಿಕ ವರದಿ ಕೊಡಬೇಕು. ಆದರೆ, ಎಲ್ಲಿ, ಎಷ್ಟು ಕಂಪನಿಗಳು ಇಂತಹ ವರದಿ ನೀಡುವಿಕೆಯನ್ನು ಚಾಚೂ ತಪ್ಪದೆ ಪಾಲಿಸುತ್ತಿವೆ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. 

ಸಾರ್ವಜನಿಕ ವಲಯದಲ್ಲಿ ದುಡಿಯುವ ಮಹಿಳೆಯರು ಇಂತಹ ವಿಷಯಗಳಿಗೆ ತಕ್ಷಣ ಸ್ಪಂದಿಸಲು ಹಿಂಜರಿಯುತ್ತಾರಲ್ಲವೇ?

ಹೌದು, ಸಾರ್ವಜನಿಕ ವಲಯದಲ್ಲಿನ ದೂರುಗಳಿಗೆ ಸ್ಪಂದಿಸಬೇಕಾದ ಆಡಳಿತಾಂಗ ಮತ್ತು ಕಾನೂನು ಪ್ರಕ್ರಿಯೆ, ಬಹುತೇಕ ಸಮಯದಲ್ಲಿ ಸಮರ್ಪಕವಾಗಿ ನಡೆದುಕೊಳ್ಳುವುದಿಲ್ಲ. ದೂರು ನೀಡುವವರು ಪರಿಣಾಮಗಳ ಬಗ್ಗೆ ಬಹಳಷ್ಟು ಹೆದರಿಕೆ ಹೊಂದಿರುತ್ತಾರೆ. ವ್ಯತಿರಿಕ್ತ ಕ್ರಮ ಜರುಗಬಹುದೇ ಎಂಬ ಭಯ ಆವರಿಸಿರುತ್ತದೆ.

‘ಹೆಣ್ಣನ್ನು ಪೂಜನೀಯ ಸ್ಥಾನದಲ್ಲಿ ನೋಡಬೇಕು’ ಎನ್ನುವ ಸಮಾಜದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು ಹೆಚ್ಚಲು ಕಾರಣವೇನು?

ಮರ್ಯಾದಾ ಹತ್ಯೆಗಳು ನಡೆಯುವಂತಹ ಈ ಸಮಾಜದಲ್ಲಿ ಮಹಿಳೆಯನ್ನು ದೇವತೆಯಾಗಿ ನೋಡುವ ಅವಶ್ಯ ಇಲ್ಲ. ಅವಳಿಗೆ ಸ್ವತಂತ್ರ ಆಲೋಚನೆ, ಸಮಾನತೆ ಕೊಟ್ಟರೆ ಅಷ್ಟೇ ಸಾಕು. ಪುರುಷ ಪ್ರಾಧಾನ್ಯವೇ ನಮ್ಮ ಸಮಾಜದ ಮೂಲಗುಣವಾಗಿ ಬೆಳೆದು ಬಂದಿದೆ. ಇದನ್ನು ನಾವು ಎಲ್ಲಿವರೆಗೂ ದಾಟುವುದಿಲ್ಲವೊ ಅಲ್ಲೀವರೆಗೂ ಮುಕ್ತಿ ಇಲ್ಲ. ಇಲ್ಲಿನ ಜಾತಿ ವ್ಯವಸ್ಥೆ ಮಹಿಳೆಯರನ್ನು ನಿಯಂತ್ರಿಸುತ್ತಿದೆ.

ಕಾರ್ಪೋರೇಟ್‌ ವಲಯಗಳಲ್ಲಿ ಮಹಿಳಾ ಮುಖ್ಯಸ್ಥರು ಪುರುಷರ ಮೇಲೆ ದೌರ್ಜನ್ಯ ನಡೆಸಿದ ಉದಾಹರಣೆಗಳೇನಾದರೂ ಇವೆಯೇ?

ಇರಬಹುದು. ಇಲ್ಲಾ ಎನ್ನಲು ಆಗೋದಿಲ್ಲ. ಅಧಿಕಾರ ಮತ್ತು ಸಂಪತ್ತು ಮೇಳೈಸಿದಾಗ ಇವು ಎಲ್ಲಾ ಸಂಸ್ಥೆಗಳಲ್ಲೂ ನಡೆಯುವಂಥದ್ದೇ. ಸಹಜವಾಗಿಯೇ ಅಧಿಕಾರವು ಭ್ರಷ್ಟತೆಯ ಕಡೆಗೆ ಎಳೆದೊಯ್ಯುವ ಕೆಲಸ ಮಾಡುತ್ತಿರುತ್ತದೆ. ಅದಕ್ಕೇ ಎಚ್ಚರಿಕೆಯಿಂದ ಇರಬೇಕು.

ಚಿತ್ರ: ರಂಜು ಪಿ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !