ಶನಿವಾರ, ಮಾರ್ಚ್ 6, 2021
27 °C

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಸಾಧ್ಯವೇ?

ಕೆ.ಎನ್‌. ಹರಿಕುಮಾರ್‌ Updated:

ಅಕ್ಷರ ಗಾತ್ರ : | |

ದೇಶದಲ್ಲಿ ಈಗ ಎರಡು ವಿಧಗಳ ರಾಷ್ಟ್ರೀಯತೆಯ ವ್ಯಾಖ್ಯಾನಗಳು ಕಂಡು ಬರುತ್ತಿವೆ. ಒಂದು, ಸ್ವಾತಂತ್ರ್ಯ ಸಂಗ್ರಾಮದಿಂದ ಬಂದಿರುವಂಥದು. ಅದು, ಎಲ್ಲರನ್ನೂ ಒಳಗೊಳ್ಳುವ, ಅನೇಕತೆಯಲ್ಲಿ ಏಕತೆಯನ್ನು ಗಮನಿಸುವ, ಒಗ್ಗಟ್ಟಾದ ಪ್ರಜಾಪ್ರಭುತ್ವದ ರಾಷ್ಟ್ರೀಯತೆ. ಇನ್ನೊಂದು, ಅದಕ್ಕೆ ಪರ್ಯಾಯವಾಗಿ, ಸವಾಲಾಗಿ, ಆರ್‌ಎಸ್ಎಸ್ ಮಂಡಿಸಿದ, ಹಿಂದೂಗಳಿಗೆ ಮಾತ್ರ ಪ್ರಾಧಾನ್ಯವನ್ನು ಕೊಡುವ, ಭಿನ್ನತೆಯನ್ನು ತ್ಯಜಿಸಿ ಏಕವನ್ನೇ ಒಪ್ಪಿಕೊಳ್ಳುವ ಹಿಂದೂ ರಾಷ್ಟ್ರೀಯತೆ. ಈ ಎರಡೂ ವಾದಗಳು ಜನರ ಮನಸ್ಸಿನ ಮೇಲೆ ಹಿಡಿತ ಸಾಧಿಸಲು ಸ್ಪರ್ಧಿಸುತ್ತಿವೆ.

‘2014ರಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರವಹಿಸಿಕೊಂಡ ನಂತರ ಹೊಸದಾದ ‘ಹಿಂದೂ ರಾಷ್ಟ್ರ ಸಂವಿಧಾನ’ವನ್ನು ಜಾರಿಗೊಳಿಸುವುದರ ಬಗ್ಗೆ ಬಿಜೆಪಿ ಮುಖಂಡರು ನನ್ನ ಅಭಿಪ್ರಾಯ ಕೇಳಿದರು. ಅಂತಹ ಸಂವಿಧಾನವನ್ನು ಅಂಗೀಕರಿಸಬೇಕಾದರೆ ಕ್ರಾಂತಿ ಆಗಬೇಕೆಂದು ನಾನು ಅವರಿಗೆ ತಿಳಿಸಿದೆ. ಈಗಿನ ಸಂವಿಧಾನದಲ್ಲಿಯೇ ‘ಹಿಂದೂ ರಾಷ್ಟ್ರ’ದ ಲಕ್ಷಣಗಳು ಇವೆ. ಅಲ್ಲದೆ, ದೇಶ ಈಗಾಗಲೇ ‘ಹಿಂದೂ ರಾಷ್ಟ್ರ’ ಆಗಿಯೂ ಬಿಟ್ಟಿದೆ. ಆದ್ದರಿಂದ ಮತ್ತೆ ಸಂವಿಧಾನಾತ್ಮಕವಾಗಿ ಆ ಹಣೆಪಟ್ಟಿಯ ಅವಶ್ಯಕತೆಯಿಲ್ಲ. ಹೀಗಾಗಿ, 2000–01ರಲ್ಲಿ ಎಬಿವಿಪಿ (ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌) ಮುಖಂಡರು ತಯಾರು ಮಾಡಿದ ಪರ್ಯಾಯ ಸಂವಿಧಾನದ ಕರಡನ್ನು ಸದ್ಯಕ್ಕೆ ಕೈಬಿಡಲಾಗಿದೆ’ ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ‘ಫ್ರಂಟ್‌ಲೈನ್‌’ ಪಾಕ್ಷಿಕ ಪತ್ರಿಕೆಗೆ(ಜುಲೈ 17, 2017) ತಿಳಿಸಿದ್ದರು.

ಈ ಮಾತುಗಳಿಂದ ಕೆಲವು ಪ್ರಶ್ನೆಗಳು ಏಳುತ್ತವೆ. ಹಿಂದೂ ರಾಷ್ಟ್ರ ಪರಿಕಲ್ಪನೆಯ ಪರ್ಯಾಯ ಸಂವಿಧಾನವನ್ನು ಅಂಗೀಕರಿಸಲು ಕ್ರಾಂತಿ ಯಾಕೆ ಆಗಬೇಕು? ಆಗುವುದಾದರೆ ಎಂತಹ ಕ್ರಾಂತಿ ಅದು? ಚುನಾವಣೆಯಲ್ಲಿ ಬಹುಮತ ಪಡೆದಿದ್ದರೂ ಸಂವಿಧಾನವನ್ನು ತಿದ್ದುಪಡಿ ಮಾಡಿ, ಅದನ್ನು ‘ಹಿಂದೂ ರಾಷ್ಟ್ರ’ದ ಪರವಾಗಿ ಬದಲಾಯಿಸಲು ಬಿಜೆಪಿಗೆ ಏಕೆ ಸಾಧ್ಯವಾಗುತ್ತಿಲ್ಲ? ಏನೇನು ಅಡಚಣೆಗಳಿವೆ? ಸದ್ಯಕ್ಕೆ ಕರಡನ್ನು ಪಕ್ಕಕ್ಕೆ ಇಟ್ಟು ಗುಪ್ತವಾಗಿ ಹಾಗೂ ಬಹಿರಂಗವಾಗಿ ಪೀಠಿಕೆ ಸಿದ್ಧಪಡಿಸುತ್ತಾ ಸರಿಯಾದ ಸಮಯದಲ್ಲಿ ಕ್ರಾಂತಿಯ ಮೂಲಕ ಹಿಂದೂ ರಾಷ್ಟ್ರದ ಸಂವಿಧಾನವನ್ನು ಹೇರಲು ದೀರ್ಘಕಾಲದ ಯೋಜನೆಯಿದೆಯೆ? ಅದು ಸಫಲವಾಗುತ್ತದೆಯೆ?

ಈ ಪ್ರಶ್ನೆಗಳಿಗೆ ಉತ್ತರ ಕೊಡಲು ಪೂರ್ವಾಪರ ಸಂದರ್ಭಗಳನ್ನು ಪರಿಶೀಲಿಸಬೇಕಾಗುತ್ತದೆ. 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಮೋದಿಯವರನ್ನು ಬಿಜೆಪಿ ಆಯ್ಕೆ ಮಾಡಿದ ನಂತರ, ಮೋದಿಯವರು ಪಕ್ಷದ ಪ್ರಣಾಳಿಕೆಗೆ ಆಧಾರವಾಗಿ ಒಂದು ಹೊಸ ಘೋಷಣೆಯನ್ನು ಮಂಡಿಸಿದರು –‘ಸಬ್ ಕಾ ಸಾತ್‌, ಸಬ್‍ ಕಾ ವಿಕಾಸ್’ (ಎಲ್ಲರ ಜೊತೆಯಲ್ಲಿ, ಎಲ್ಲರ ಅಭಿವೃದ್ಧಿ).

ಅದಕ್ಕೆ ಮುಂಚಿತವಾಗಿ ತಮ್ಮ ಪಕ್ಷದ ಹಿರಿಯ ಮುಖಂಡರ ಜೊತೆ ಅವರು ಹೋರಾಡಬೇಕಾಯಿತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, 370ನೇ ವಿಧಿ ರದ್ದು, ಏಕರೂಪ ನಾಗರಿಕ ಸಂಹಿತೆ ಜಾರಿಯಂತಹ ಬಿಜೆಪಿಯ ಹಿಂದಿನ ಪ್ರಣಾಳಿಕೆಯ ಅಂಶಗಳ ಆಧಾರದ ಮೇಲೆ ಸಿಗಬಹುದಾದ ಮಿತವಾದ ಬೆಂಬಲವನ್ನು ಮೀರಿ ತನ್ನ ಚುನಾವಣಾ ನಿರೀಕ್ಷೆಗಳಿಗೆ ಜೀವಕೊಡಲಾಗದು ಎಂಬುದನ್ನು ಪ್ರತಿಪಾದಿಸಬೇಕಾಯಿತು. ಕೊನೆಯಲ್ಲಿ ಆರ್‌ಎಸ್‌ಎಸ್‌ ಹಸ್ತಕ್ಷೇಪದಿಂದ ಹಿಂದಿನ ಕಾರ್ಯಸೂಚಿಯನ್ನು ಪಕ್ಕಕ್ಕೆ ಇಟ್ಟು, ಹೊಸ ಸೂತ್ರದ ಆಧಾರದ ಮೇಲೆ ಪ್ರಣಾಳಿಕೆಯನ್ನು ಮತದಾರರ ಮುಂದಿಟ್ಟು, ಪಕ್ಷ ಮಹಾ ಗೆಲುವನ್ನು ಪಡೆಯಿತು.

ಈ ಯಶಸ್ಸಿಗೆ ಕಾರಣ ಹುಡುಕಬೇಕಾದರೆ, ಸ್ವಾತಂತ್ರ್ಯ ಸಂಗ್ರಾಮದ ಪ್ರಾರಂಭದಿಂದಲೇ ಆಗಿನ ಮುಖಂಡರು ಮಂಡಿಸಿದ ಕಾರ್ಯಸೂಚಿಯನ್ನು ಗಮನಿಸಬೇಕು. ಬಡತನ ನಿವಾರಣೆಯ ಜತೆಗೆ ಉದ್ಯಮೀಕರಣದಿಂದ ಆರ್ಥಿಕ ಬೆಳವಣಿಗೆಯನ್ನೂ ಆ ಮುಖಂಡರು ಮುಖ್ಯ ಉದ್ದೇಶವನ್ನಾಗಿ ಮಾಡಿಕೊಂಡರು. ಇದಕ್ಕಾಗಿ ಬ್ರಿಟಿಷರ ಆಳ್ವಿಕೆಯನ್ನು ಹೊರಹಾಕಬೇಕು ಎಂದು ನಿರ್ಧರಿಸಿದರು. ಈ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ಎಲ್ಲರನ್ನೂ ಒಳಗೊಳ್ಳುವ, ಒಗ್ಗಟ್ಟಾದ ಪ್ರಜಾಸತ್ತಾತ್ಮಕ ರಾಷ್ಟ್ರೀಯತೆಯನ್ನು ಕಟ್ಟಹೊರಟರು. ಸ್ವಾತಂತ್ರ್ಯದ ನಂತರ ಆ ಉದ್ದೇಶಗಳನ್ನು ಹಾಗೂ ರಾಷ್ಟ್ರೀಯತೆಯನ್ನು ದೇಶದ ಉದ್ದೇಶ ಹಾಗೂ ಲಕ್ಷಣಗಳನ್ನಾಗಿ ಪರಿವರ್ತಿಸಿದರು. ಇವುಗಳ ಆಧಾರದ ಮೇಲೆ, ಆ ನಂತರದ ಸರ್ಕಾರಗಳು ಕಾರ್ಯನಿರ್ವಹಿಸುತ್ತ ಬಂದವು. ದೇಶದ ಈ ಉದ್ದೇಶ ಹಾಗೂ ಲಕ್ಷಣಗಳಿಗೆ ಮೋದಿಯವರು ಪಕ್ಷದ ಕಾರ್ಯಸೂಚಿಯನ್ನು ಸರಿ ಹೊಂದಿಸಿದುದರಿಂದ ಮಹಾ ಗೆಲುವನ್ನು ಪಡೆದರು. ಆದರೆ, ಆ ಯಶಸ್ಸೇ ಪಕ್ಷದ ಹಳೆಯ ಕಾರ್ಯಸೂಚಿಯ ಕಾರ್ಯಕ್ರಮಗಳಿಗೆ ಅಡ್ಡಿಯಾಗಿ ನಿಂತಿದೆ. ಏಕೆಂದರೆ ಮತದಾರರು, ಹೊಸ ಸೂತ್ರದ ಉತ್ತರದಾಯಿತ್ವವನ್ನು ಮೋದಿ ಅವರಿಂದ ನಿರೀಕ್ಷಿಸುತ್ತಿದ್ದಾರೆ.  

ಅವಲ್ಲದೆ ಸಂವಿಧಾನ, ಪ್ರಜಾಪ್ರಭುತ್ವ ಸಂಸ್ಥೆಗಳು, ಪರಂಪರೆಗಳು ಹಾಗೂ ಪದ್ಧತಿಗಳು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಹಲವು ಸಂದರ್ಭಗಳಲ್ಲಿ ಅಡೆತಡೆಗಳಾಗಿ ನಿಂತಿವೆ. ಹೋದ ವರ್ಷ ಜನವರಿ ತಿಂಗಳಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಪರೋಕ್ಷವಾಗಿ ಸೂಚಿಸುತ್ತ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಅಭೂತಪೂರ್ವ ಪತ್ರಿಕಾಗೋಷ್ಠಿ ನಡೆಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಆರೋಪಗಳನ್ನು ಮಾಡಿದರು. ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲಿಜಿಯಂನ ಕಾರ್ಯ ವಿಧಾನ ಹಾಗೂ ಶಿಫಾರಸುಗಳ ಬಗ್ಗೆಯೂ ವಿವಾದಗಳು ಎದ್ದಿವೆ.

ನ್ಯಾಯಮೂರ್ತಿಗಳ ಖಾಲಿ ಹುದ್ದೆಗಳಿಗೆ ಕೊಲಿಜಿಯಂನ ಶಿಫಾರಸುಗಳನ್ನು ಅನುಮೋದಿಸಿ ನೇಮಕ ಮಾಡುವ ವಿಚಾರದಲ್ಲಿ ಸರ್ಕಾರ ಎಷ್ಟು ತಡಮಾಡುತ್ತಿತ್ತು ಎಂದರೆ, ಮೋದಿಯವರು ಭಾಗವಹಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ಆಗಿನ ಮುಖ್ಯ ನ್ಯಾಯಮೂರ್ತಿಗಳು ಹತಾಶೆಯಿಂದ ಕಣ್ಣೀರು ಸುರಿಸಿದ್ದರು. ಕೆಲವು ದಿನಗಳ ನಂತರ ಬಂದ ಹೊಸ ಮುಖ್ಯ ನ್ಯಾಯಮೂರ್ತಿಗಳ ಜೊತೆ ಒಪ್ಪಂದ ಮಾಡಿಕೊಂಡ ಸರ್ಕಾರ, ನೇಮಕಾತಿಗಳನ್ನು ಮತ್ತೆ ಪ್ರಾರಂಭಿಸಿತು. ಅಷ್ಟೇ ಅಲ್ಲದೆ, ನ್ಯಾಯಾಂಗ ತನ್ನ ಮಿತಿಯನ್ನು ಮೀರಬಾರದು ಎಂದು ಕೇಂದ್ರದ ಮಂತ್ರಿಗಳೂ ಕಾಲಕಾಲಕ್ಕೆ ಎಚ್ಚರಿಸುತ್ತಿದ್ದಾರೆ.

ಚುನಾವಣಾ ಆಯೋಗದ ಆಯುಕ್ತರುಗಳು, ಸಿಬಿಐ ನಿರ್ದೇಶಕ, ಕೇಂದ್ರ ಮುಖ್ಯ ಮಾಹಿತಿ ಆಯುಕ್ತ ಮುಂತಾದ ಸಂವಿಧಾನಾತ್ಮಕ ಹುದ್ದೆಗಳಿಗೆ ನೇಮಕ ಮಾಡುವ ವಿಧಾನಗಳ ಬಗ್ಗೆಯೂ ಅನೇಕ ಸಂದರ್ಭಗಳಲ್ಲಿ ಸರ್ಕಾರದ ಕ್ರಮಗಳು ವಾದ, ವಿವಾದಕ್ಕೆ ಒಳಗಾಗಿವೆ. ಮಾಹಿತಿ ಆಯುಕ್ತರನ್ನು ನೇಮಕ ಮಾಡುವುದರಲ್ಲಿ ತಡ ಮಾಡಿದರೂ ಸರ್ಕಾರ ಕೊನೆಯಲ್ಲಿ ನೇಮಕ ಮಾಡಲೇಬೇಕಾಯಿತು.

ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನಡೆದ ಗೋದ್ರಾ ಘಟನೆ ನಂತರದ ಗಲಭೆಗಳ ಸಂಬಂಧದ ಮೊಕದ್ದಮೆಗಳಲ್ಲಿ ನೂರಕ್ಕೂ ಹೆಚ್ಚು ವ್ಯಕ್ತಿಗಳಿಗೆ ನ್ಯಾಯಾಲಯಗಳು ತೀವ್ರ ಶಿಕ್ಷೆ ಕೊಟ್ಟಿವೆ. ಹಿಂದೆ ಇಂತಹ ಶಿಕ್ಷೆ, ಆಡಳಿತದಲ್ಲಿರುವ ಪಕ್ಷಕ್ಕೆ, ಅದರಲ್ಲೂ ಪ್ರಧಾನ ಮಂತ್ರಿ ಪ್ರತಿನಿಧಿಸುವ ಪಕ್ಷಕ್ಕೆ ಸಂಬಂಧಪಟ್ಟ ಪ್ರಕರಣಗಳ ಮೊಕದ್ದಮೆಗಳಲ್ಲಿ ಬಂದಿರಲಿಲ್ಲವಾದ್ದರಿಂದ, ನಮ್ಮ ಸಾಂವಿಧಾನಿಕ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಬಲವಾಗಿರುವುದನ್ನು ಸೂಚಿಸುತ್ತದೆ.

ಇನ್ನಿತರ ಕ್ಷೇತ್ರಗಳಲ್ಲೂ ಮೋದಿ ನೇತೃತ್ವದ ಸರ್ಕಾರ, ಪ್ರತಿಪಕ್ಷ ಹಾಗೂ ಸಾರ್ವಜನಿಕರ ತೀವ್ರ ಪ್ರತಿರೋಧದಿಂದ ಹಿಂದಡಿ ಇಡಬೇಕಾಯಿತು. ಆರ್ಥಿಕ ಕ್ಷೇತ್ರದಲ್ಲಿ ಪ್ರಮುಖ ಉದಾಹರಣೆ ಎಂದರೆ 2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮಂಡಿಸಿದ ಭೂಸ್ವಾಧೀನ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕಾಯಿತು. ಗೋವು ಮಾರಾಟ ನಿಯಮಗಳ ಆಜ್ಞೆ ವಿಚಾರದಲ್ಲೂ ಸರ್ಕಾರ ಸೋಲನ್ನು ಪಡೆಯಿತು. ಶಿಕ್ಷಣ ಕ್ಷೇತ್ರದಲ್ಲಿ, ಫಿಲಂ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ (ಎಫ್‌ಟಿಐಐ) ಅಧ್ಯಕ್ಷರನ್ನಾಗಿ ಬಿಜೆಪಿ ಹಾಗೂ ಮೋದಿ ಪರ ನಿಲುವು ಹೊಂದಿದ ಮತ್ತು ಆ ಪದವಿಗೆ ಯೋಗ್ಯರಲ್ಲದ ನಟನನ್ನು ನೇಮಕ ಮಾಡಿದುದರಿಂದ ವಿದ್ಯಾರ್ಥಿಗಳ ತಿಂಗಳುಗಟ್ಟಲೆ ಹೋರಾಟ ನಡೆಸಿದರು. ಈ ಕಾರಣದಿಂದಾಗಿ ಸ್ವಲ್ಪ ಸಮಯದ ನಂತರ ಸರ್ಕಾರ ಅವರನ್ನು ಬದಲಾಯಿಸಬೇಕಾಯಿತು. ಗೋವಿನ, ಶ್ರೀರಾಮನ ಹೆಸರಿನಲ್ಲಿ ಹಾಗೂ ಇನ್ನಿತರ ನೆಪಗಳ ಮೂಲಕ ಮುಸ್ಲಿಮರ ಮೇಲೆ ನಡೆದ ಚಿತ್ರಹಿಂಸೆ ಮತ್ತು ದೌರ್ಜನ್ಯ ಪ್ರಕರಣಗಳ ವಿರುದ್ಧ ನಾಗರಿಕ ಸಮಾಜದ ಒತ್ತಾಯದಿಂದಾಗಿ ವಿಳಂಬವಾಗಿಯಾದರೂ ಕಾನೂನು ಬದ್ಧ ಕ್ರಮಗಳನ್ನು ತೆಗೆದುಕೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ.

ಕಾಶ್ಮೀರ, ಪಾಕಿಸ್ತಾನ, ಎನ್‌.ಆರ್‌.ಸಿ –ಈ ಮೂರು ಬಹಳ ಹಿಂದಿನಿಂದ ಬಂದಿರುವ ಬಿಕ್ಕಟ್ಟುಗಳು. ಒಂದಾನೊಂದು ರೀತಿಯಲ್ಲಿ ಮುಸ್ಲಿಮರಿಗೂ ಸಂಬಂಧಪಟ್ಟ ಸಮಸ್ಯೆಗಳು. ಇವುಗಳ ಬಗ್ಗೆ ಎನ್‌ಡಿಎ ಸರ್ಕಾರ ಬಹಳ ಮಟ್ಟಿಗೆ ಹಿಂದಿನ ಸರ್ಕಾರಗಳಂತೆಯೇ ನಡೆದುಕೊಳ್ಳುತ್ತಿದೆ. ಉದಾಹರಣೆಗೆ, 370ನೇ ವಿಧಿಯನ್ನು ಜವಾಹರಲಾಲ್ ನೆಹರೂ ಸರ್ಕಾರದಿಂದ ಹಿಡಿದು ಆ ನಂತರ ಬಂದ ಎಲ್ಲ ಸರ್ಕಾರಗಳು ದುರ್ಬಲಗೊಳಿಸುತ್ತಾ ಬಂದಿವೆ.

ಆದರೆ, ಈಗಿರುವ ವ್ಯತ್ಯಾಸವೇನೆಂದರೆ ಹಿರಿಯ ಬಿಜೆಪಿ ಮಂತ್ರಿಗಳ ಅಟಾಟೋಪ. ಇದಕ್ಕೆ ತಕ್ಷಣದ ಕಾರಣ, ಸರ್ಕಾರ ತಾನು ಕೊಟ್ಟ ಭರವಸೆಗೆ ತಕ್ಕಂತೆ ದೇಶದಲ್ಲಿ ಅಭಿವೃದ್ಧಿ ಆಗದಿರುವುದರಿಂದ ಜನರ ಗಮನ ಆ ಕಡೆ ಹೋಗದಂತೆ ಮಾಡಿ, ಕೋಮು ಭಾವನೆಗಳನ್ನು ಕೆರಳಿಸಿ, ಚುನಾವಣೆಯಲ್ಲಿ ಮತ ಗಳಿಸುವುದಾಗಿರಬಹುದು. ಹಿಂದಿನಿಂದ ಬಂದಿದ್ದ ಅಲ್ಪಸಂಖ್ಯಾತರ, ಅದರಲ್ಲೂ ಮುಸ್ಲಿಮರ ಮೇಲೆ ಪೂರ್ವಗ್ರಹ ಹಾಗೂ ದ್ವೇಷದ ಭಾವನೆಯೂ ಕಾರಣ ಇರಬಹುದು. ಇಲ್ಲಿ ನಾವು ಏನು ಗಮನಿಸಬೇಕೆಂದರೆ ಎಲ್ಲೆಲ್ಲಿ ಬಿಜೆಪಿ ಬಹುಮತವನ್ನು ಪಡೆದಿದೆಯೊ, ಅಲ್ಲೆಲ್ಲ ಶಾಸಕಾಂಗ ಹಾಗೂ ಇತರ ಚುನಾಯಿತ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆ ಆಗುತ್ತಾ ಬಂದಿರುವುದು. ಈ ಮೂರೂ ಬಿಕ್ಕಟ್ಟುಗಳು ಮುಂದುವರಿಯುತ್ತಿರುವ ಹೊತ್ತಿನಲ್ಲಿಯೇ, ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿಗಾಗಿ ಆಗ್ರಹ ಹೆಚ್ಚುತ್ತಿರುವುದು ಅಲ್ಪಸಂಖ್ಯಾತರ, ಅದರಲ್ಲೂ ಮುಸ್ಲಿಮರ ಆತಂಕವನ್ನು ಹೆಚ್ಚಿಸಿದೆ.

ಈ ಅಟಾಟೋಪಕ್ಕಿಂತ ಇನ್ನೂ ಹೆಚ್ಚು ಅಪಾಯಕಾರಿ ಏನೆಂದರೆ ಸರ್ಕಾರ ಮಂಡಿಸಿದ ಪೌರತ್ವ ತಿದ್ದುಪಡಿ ಮಸೂದೆ. ಇದು ಪಕ್ಕದ ರಾಷ್ಟ್ರಗಳಿಂದ ಅಂದರೆ ಮುಸ್ಲಿಮ್‌ ರಾಷ್ಟ್ರಗಳಿಂದ ಬಂದಿರುವ ವಲಸಿಗರನ್ನು ಧರ್ಮದ ಆಧಾರದ ಮೇಲೆ ಭಿನ್ನವಾಗಿ ಗುರುತಿಸುತ್ತದೆ. ಅಲ್ಲಿನ ಅಲ್ಪಸಂಖ್ಯಾತರನ್ನು–  ಅಂದರೆ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರೈಸ್ತರನ್ನು– ನಿರಾಶ್ರಿತರು ಎಂದು ಗುರುತಿಸಿ ಪೌರತ್ವವನ್ನು ಸಾಧ್ಯವಾಗಿಸುತ್ತದೆ. ಇತರರನ್ನು ಅಂದರೆ ಮುಸ್ಲಿಮರನ್ನು ಅಕ್ರಮ ವಲಸಿಗರು, ಒಳ ನುಸುಳಿಗರು ಎಂದು ಗುರುತಿಸಿ, ಪೌರತ್ವವನ್ನು ತಡೆಗಟ್ಟಿ, ಹೊರಹಾಕಲು ಸಾಧ್ಯವಾಗಿಸುತ್ತದೆ. ಈ ಭಿನ್ನತೆ ದೇಶದ ನಾಗರಿಕರಿಗೂ ಅನ್ವಯವಾಗುತ್ತದೆ ಹಾಗೂ ಎಲ್ಲರನ್ನೂ ಸಮವಾಗಿ ನೋಡುವ ತತ್ವದ ವಿರುದ್ಧವಾಗಿದೆ.

ಆಯೋಧ್ಯೆಯಲ್ಲಿ ರಾಮ ಮಂದಿರದ ಸಮಸ್ಯೆ, ಈ ಮೇಲಿನ ಬಿಕ್ಕಟ್ಟುಗಳಿಗಿಂತ ಬಿಜೆಪಿ– ಆರ್‌ಎಸ್ಎಸ್‌ನವರಿಗೆ ಬಹಳ ವಿಶಿಷ್ಟ. ಏಕೆಂದರೆ ಇದು ನೂರೈವತ್ತಕ್ಕೂ ಹೆಚ್ಚು ವರ್ಷಗಳಿಂದ ಬಂದಿರುವ ಸಮಸ್ಯೆಯಾದರೂ 1980ರ ದಶಕದ ಪ್ರಾರಂಭದಿಂದ, ಅವರು ಹೊಸರೂಪ ಪಡೆದ ಕಾಲದಿಂದ, ಈ ಕಾರ್ಯಸೂಚಿಯ ಆಧಾರದ ಮೇಲೆ ಪಕ್ಷವನ್ನು ಪುನಶ್ಚೇತನಗೊಳಿಸಲಾಯಿತು. 1992ರಲ್ಲಿ ಕಟ್ಟಡಕ್ಕೆ ಏನೂ ಆಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಆಶ್ವಾಸನೆ ಕೊಟ್ಟಿದ್ದರೂ ಬಾಬ್ರಿ ಮಸೀದಿಯನ್ನು ಪೂರ್ತಿಯಾಗಿ ಒಡೆದು ಹಾಕಲಾಯಿತು. ಈಗ ಪ್ರಮುಖ ಮಂತ್ರಿಗಳು, ಅದೇ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮೇಲೆ ಭರವಸೆ ಇಟ್ಟುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಈ ಭರವಸೆ ಸ್ವಾಗತಾರ್ಹವಾದುದಾದರೂ ಸ್ವತಂತ್ರ ಭಾರತದಲ್ಲಿ ಕೋಮು ಭಾವನೆ ಹಾಗೂ ಗಲಭೆಗಳಿಗೆ ಕಾರಣವಾಗಿರುವ ಸಮಸ್ಯೆಗಳಲ್ಲಿ ಎಲ್ಲದಕ್ಕಿಂತ ಹೆಚ್ಚು ಪ್ರಾಧಾನ್ಯ ಪಡೆದಿರುವ ಈ ಬಿಕ್ಕಟ್ಟಿನ ಪರಿಹಾರ ಆಗುತ್ತದೆಯೊ ಇಲ್ಲವೋ ಇನ್ನೂ ಅನಿಶ್ಚಿತ.

ಇದಲ್ಲದೆ, ಎನ್‌ಡಿಎ ಸರ್ಕಾರದ ಒಲವು ಹಿಂದೂ ರಾಷ್ಟ್ರೀಯತೆಯ ಬಲಪಂಥದ ಕಾರ್ಯನೀತಿ ಕಡೆ ಇರುವುದನ್ನು ವಿವಿಧ ಕ್ಷೇತ್ರಗಳಲ್ಲಿ ನಿಶ್ಚಿತವಾಗಿ ಕಾಣಬಹುದು. ಅದು ಬಂಡವಾಳಶಾಹಿಗಳ, ಭೂಮಾಲೀಕರ, ನಗರವಾಸಿಗಳ, ಮೇಲ್ಜಾತಿ ಹಿಂದೂಗಳ ಪರವಾಗಿ ಇರುತ್ತದೆ. ವೋಟುಗಳಿಗಾಗಿ ಸಾಮಾನ್ಯರ ಕಲ್ಯಾಣಕ್ಕೆ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರೂ, ವಾಣಿಜ್ಯೋದ್ಯಮಿಗಳ ಅಭಿವೃದ್ಧಿಗೆ ಪ್ರಾಧಾನ್ಯ ಕೊಡುತ್ತದೆ. ಮೂಲಸೌಕರ್ಯಗಳ ಮೇಲೆಯೇ ಗಮನ ಪ್ರಮುಖವಾಗಿ ಕೇಂದ್ರೀಕೃತವಾಗಿರುವಲ್ಲಿ ಇದನ್ನು ಕಾಣಬಹುದು. ಮೇಲ್ಜಾತಿಯವರಿಗೆ ಆರ್ಥಿಕ ಮಾನದಂಡಗಳ ಆಧಾರದ ಮೇಲೆ ಮೀಸಲಾತಿ ಒದಗಿಸುವುದರಲ್ಲೂ ಇದನ್ನು ಕಾಣಬಹುದು.

ಇವೆಲ್ಲ ವಿಷಯಗಳಲ್ಲೂ ಸರ್ಕಾರ ಹೆಚ್ಚು ಕಡಿಮೆ ಹಿಂದಿನಿಂದ ಬಂದಿರುವ ಸಂವಿಧಾನಾತ್ಮಕ ಹಾಗೂ ಪ್ರಜಾಪ್ರಭುತ್ವದ ಪರಂಪರೆ ಹಾಗೂ ಪದ್ಧತಿಗಳ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಿದೆ. ಯಾವಾಗ ಅದು ರಾಷ್ಟ್ರೀಯ ಒಮ್ಮತವನ್ನು ಮೀರುತ್ತದೆಯೊ ಆವಾಗ ವಿವಿಧ ಕಡೆಗಳಿಂದ ಪ್ರತಿರೋಧ ಅನುಭವಿಸುತ್ತದೆ. ಸಂವಿಧಾನ ಹಾಗೂ ರಾಜ್ಯದ ಸಂಸ್ಥೆಗಳ ಮೇಲೆ ಒತ್ತಾಯ ಮಾಡಿ ಅವುಗಳನ್ನು ಪಕ್ಷಪಾತಗೊಳಿಸಿ ಉಪಯೋಗಿಸುವುದರಲ್ಲೂ ಹಿಂದಿನ ಸರ್ಕಾರಗಳ, ಅದರಲ್ಲೂ ಇಂದಿರಾ ಗಾಂಧಿಯವರ ಸರ್ಕಾರದ, ಕ್ರಿಯೆಗಳನ್ನು ಮೀರಿರುವುದು ಅಷ್ಟಾಗಿ ಕಾಣುತ್ತಿಲ್ಲ. ಬದಲಿಗೆ, ಈಚಿನ ದಶಕಗಳಲ್ಲಿ ಸಂಸ್ಥೆಗಳು ಹಾಗೂ ನಾಗರಿಕ ಸಮಾಜ ಇನ್ನಷ್ಟು ಪ್ರಭಾವಶಾಲಿ ಆಗಿರುವುದರಿಂದ, ಸರ್ಕಾರದ ಮೇಲೆ ಅವುಗಳ ಹಿಡಿತ ಕಂಡು ಬರುತ್ತಿದೆ. ಅಧಿಕಾರದಲ್ಲಿರುವವರಲ್ಲಿ (ಅಂದರೆ ಮೋದಿಯವರಲ್ಲಿ) ಪ್ರಜಾಪ್ರಭುತ್ವದಲ್ಲಿ ಬದ್ಧತೆ ಇಲ್ಲದಿರುವ ಕಾರಣದಿಂದ ಮತ್ತೆ ತುರ್ತು ಪರಿಸ್ಥಿತಿಯನ್ನು ಯಾರೂ ಹೇರಲಾರರು ಎಂದು ಹೇಳಲು ಸಾಧ್ಯವಿಲ್ಲ ಎಂದು  ಬಿಜೆಪಿಯ ಹಿರಿಯ ಮುಖಂಡರಾದ ಎಲ್‌.ಕೆ. ಅಡ್ವಾಣಿಯವರು  2015ರಲ್ಲಿ ತುರ್ತು ಪರಿಸ್ಥಿತಿಯ ನಲವತ್ತನೆಯ ವಾರ್ಷಿಕ ದಿನಾಚರಣೆ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಆದರೆ, ಇದುವರೆಗೂ ಅವರ ಆ ಆತಂಕ ವಾಸ್ತವಿಕವಾಗಿಲ್ಲ.

ಎರಡು ಬಗೆಯ ರಾಷ್ಟ್ರೀಯತೆಯ ವ್ಯಾಖ್ಯಾನಗಳು ಕಂಡು ಬರುತ್ತಿವೆ. ಒಂದು, ಸ್ವಾತಂತ್ರ್ಯ ಸಂಗ್ರಾಮದಿಂದ ಬಂದಿರುವಂಥದು. ಅದು, ಎಲ್ಲರನ್ನೂ ಒಳಗೊಳ್ಳುವ, ಅನೇಕತೆಯಲ್ಲಿ ಏಕತೆಯನ್ನು ಗಮನಿಸುವ, ಒಗ್ಗಟ್ಟಾದ ಪ್ರಜಾಪ್ರಭುತ್ವದ ರಾಷ್ಟ್ರೀಯತೆ. ಇದರ ಆಧಾರದ ಮೇಲೆ ನಮ್ಮ ಸಂವಿಧಾನವನ್ನು ರಚಿಸಲಾಗಿದೆ. ಇನ್ನೊಂದು, ಅದಕ್ಕೆ ಪರ್ಯಾಯವಾಗಿ, ಸವಾಲಾಗಿ ಆರ್‌ಎಸ್ಎಸ್ ಮಂಡಿಸಿದ, ಬಹುಸಂಖ್ಯಾತ ಸಮುದಾಯ ಅಂದರೆ ಹಿಂದೂಗಳಿಗೆ ಮಾತ್ರ ಪ್ರಾಧಾನ್ಯವನ್ನು ಕೊಡುವ, ಭಿನ್ನತೆಯನ್ನು ತ್ಯಜಿಸಿ ಏಕವನ್ನೇ ಒಪ್ಪಿಕೊಳ್ಳುವ ಹಿಂದೂ ರಾಷ್ಟ್ರದ ವ್ಯಾಖ್ಯಾನ. ಇದರ ಆಧಾರದ ಮೇಲೆ ಪರ್ಯಾಯ ಸಂವಿಧಾನವನ್ನು ರಚಿಸಿ ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ. ಈ ಎರಡು, ಜನರ ಮನಸ್ಸಿನ ಮೇಲೆ ಹಿಡಿತ ಸಾಧಿಸಲು ಸ್ಪರ್ಧಿಸುತ್ತಿವೆ.

ತಮ್ಮ ಕಾರ್ಯಸೂಚಿಗೆ ಸಮಾಜದಲ್ಲಿ ಗೌರವ ಪಡೆಯಬೇಕೆಂದು ಸ್ವಾತಂತ್ರ್ಯ ಸಂಗ್ರಾಮದ ಕೆಲವು ಪ್ರಮುಖ ಮುಖಂಡರನ್ನು ವಿಶೇಷವಾಗಿ ಸರ್ದಾರ್ ಪಟೇಲ್ ಹಾಗೂ ಗಾಂಧೀಜಿಯವರನ್ನು ತಮ್ಮವರನ್ನಾಗಿ ಮಾಡಿಕೊಳ್ಳುವುದಕ್ಕೆ ಬಿಜೆಪಿ–ಆರ್‌ಎಸ್ಎಸ್‌ ಪ್ರಯತ್ನಿಸುತ್ತಿವೆ. ಆದರೆ ಅವರಿಬ್ಬರಲ್ಲೂ ಇವರಿಗೆ ತೊಂದರೆಗಳಿವೆ. ಗಾಂಧೀಜಿ ಹತ್ಯೆಯ ನಂತರ ಆರ್‌ಎಸ್‌ಎಸ್‌ ಅನ್ನು ನಿಷೇಧ ಮಾಡಿ, ಆ ನಿಷೇಧವನ್ನು ತೆಗೆಯಲು ಪ್ರಜಾಪ್ರಭುತ್ವ ಸಂವಿಧಾನವನ್ನು ಅಂಗೀಕರಿಸಬೇಕೆಂದು ಪಟೇಲರು ಷರತ್ತು ನಿಗದಿ ಮಾಡಿದರು. ಗಾಂಧೀಜಿಯವರನ್ನು ಹಂತಕ ಕೊಂದದ್ದೇ ಹಿಂದೂ ರಾಷ್ಟ್ರದ ಹೆಸರಿನಲ್ಲಿ, ಅವರು ಹಿಂದೂಗಳ ಹಿತಾಸಕ್ತಿಯ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆಂದು. ಆ ಹತ್ಯೆಯ ಕಳಂಕವನ್ನು ಒರೆಸಲು ಬಹಳ ಪ್ರಯತ್ನಗಳು ನಡೆಯುತ್ತಿವೆ. ಮೋದಿಯವರು ಹಾಗೂ ಅವರ ಸರ್ಕಾರವೂ ಗಾಂಧೀಜಿಯವರಿಗೆ ಬಹಳ ಗೌರವ ತೋರಿಸುತ್ತ, ಅವರ ಸ್ವಚ್ಛತೆಯ ಸಂದೇಶವನ್ನೇ ಪ್ರಚಾರ ಮಾಡುತ್ತ, ಅವರ ಮೂಲ ಸಂದೇಶವಾದ ಅಹಿಂಸಾ ಮಾರ್ಗ ಹಾಗೂ ಎಲ್ಲರನ್ನೂ ಒಳಗೊಳ್ಳುವ ಉಪದೇಶವನ್ನು ಉದಾಸೀನ ಮಾಡುತ್ತಿದ್ದಾರೆ.

ಕೊನೆಯಲ್ಲಿ ಇಷ್ಟು ಹೇಳಬಹುದು. ಸಂವಿಧಾನದ ಚೌಕಟ್ಟಿನಲ್ಲಿ ಬಿಜೆಪಿ–ಆರ್‌ಎಸ್‌ಎಸ್‌ನವರು ಬಹಳ ಪ್ರಭಾವಶಾಲಿಯಾಗಿದ್ದಾರೆ ಹಾಗೂ ಅವರ ಹಿಂದೂಗಳ ಪರ ಹಾಗೂ ಬಲಪಂಥದ ಕಾರ್ಯಸೂಚಿಯನ್ನು ನಿರ್ಣಾಯಕವಾಗಿ ಮುಂದುವರೆಸುತ್ತಿದ್ದಾರೆ. ಆದರೆ 1979ರಲ್ಲಿ ಇರಾನಿನಲ್ಲಾದ ಕ್ರಾಂತಿಯ ಹಾಗೆ, ಇರುವ ವ್ಯವಸ್ಥೆಯನ್ನು ಉರುಳಿಸಿ, ಒಂದು ಹಿಂದೂ ರಾಷ್ಟ್ರದ ಹೊಸ ವ್ಯವಸ್ಥೆಯನ್ನು ರಚಿಸಿ, ಸ್ಥಾಪಿಸುವುದು ಬಹಳ ಕಷ್ಟಸಾಧ್ಯದ ಕೆಲಸ ಎನ್ನಬಹುದು. ಅಂತಹ ಪರಿವರ್ತನೆಯನ್ನು ವಿರೋಧಿಸುವ ಸಾಮಾಜಿಕ ಶಕ್ತಿಗಳು ಇತ್ತೀಚಿನ ದಶಕಗಳಲ್ಲಿ ಇನ್ನಷ್ಟು ಪ್ರಭಾವಶಾಲಿ ಆಗಿದ್ದರೂ ಮುಂದೆ ಏನಾಗಬಹುದು ಎಂದು ಹೇಳುವುದು ಬಹಳ ಕಷ್ಟ. ಏಕೆಂದರೆ ಅದು ಅನೇಕ ಸಂಗತಿಗಳು ಹಾಗೂ ಸನ್ನಿವೇಶಗಳ ಮೇಲೆ ಅವಲಂಬಿತವಾಗಿರುತ್ತವೆ. ಅದರಲ್ಲಿ ಪ್ರಮುಖವಾದುದು ಜನರ ಪ್ರತಿಭಟನೆ ಹಾಗೂ ಹೋರಾಡುವ ಶಕ್ತಿ.

ಇವುಗಳನ್ನೂ ಓದಿ- 

 ಒಪ್ಪಲಾಗದ ‘ಹಿಂದೂ ರಾಷ್ಟ್ರ’ ಪರಿಕಲ್ಪನೆ

 ಹಿಂದೂ ರಾಷ್ಟ್ರ ತೀರ್ಪು: ದೋಷಪೂರಿತ

 ಭಾರತ ಹಿಂದೂ ರಾಷ್ಟ್ರ: ಅರ್ಜಿ ವಿಚಾರಣೆಗೆ ‘ಸುಪ್ರೀಂ’ ನಿರ್ಧಾರ

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಭೆಗೆ ಆಕ್ಷೇಪ; ದೇಶದ್ರೋಹ ಪ್ರಕರಣ ದಾಖಲಿಸಲು ಆಗ್ರಹ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು