ನಿಸರ್ಗದಲ್ಲಿ ಅರಳಿದ ಚಿತ್ರಕಲೆ ‘ಚಿಕಲೆ’ ಜಲಪಾತ

7

ನಿಸರ್ಗದಲ್ಲಿ ಅರಳಿದ ಚಿತ್ರಕಲೆ ‘ಚಿಕಲೆ’ ಜಲಪಾತ

Published:
Updated:
Deccan Herald

ತಿಳಿ ಹಸಿರ ಉಡುಗೆ ಉಟ್ಟ ಭೂರಮೆ, ಆಗಾಗ್ಗೆ ಪನ್ನೀರು ಚಿಮುಕಿಸುತ್ತಾ ಇಳೆಯನ್ನು ತಂಪಾಗಿಸುವ ಮಳೆ, ಗಿರಿಗಳ ಮಧ್ಯೆ ಅಲೆ ಅಲೆಯಾಗಿ ಸಾಗುವ ಬಿಳಿಮೋಡ, ಆಳದ ಕಣಿವೆಯಿಂದ ಧುತ್ತನೆ ಮೇಲೆದ್ದು ಇಡೀ ಕಾನನವನ್ನೇ ನುಂಗಿ ಹಾಕುವ ಮಂಜು, ಮೈ–ಮನಗಳನ್ನು ಮುದಗೊಳಿಸುವ ತಂಗಾಳಿ...ಇವುಗಳ ಸಮಾಗಮದಲ್ಲಿ ಹಾಲ್ನೊರೆಯಂತೆ ಧುಮ್ಮಿಕ್ಕುವ ‘ಚಿಕಲೆ’ ಎಂಬ ಶ್ವೇತ ಸುಂದರಿ.

ಪ್ರಕೃತಿ ಮಾತೆಯೇ ಬರೆದ ಚಿತ್ರಕಲೆಯಂತಿದೆ ‘ಚಿಕಲೆ’ ಜಲಪಾತ. ಈ ಸ್ವರ್ಗ ಸದೃಶ ತಾಣ ಇರುವುದು, ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕು, ಚಿಕಲೆ ಗ್ರಾಮದ ಸಮೀಪವಿರುವ ಕಣಕುಂಬಿ ವಲಯ ಅರಣ್ಯದಲ್ಲಿ. ‘ಚಿಕಲೆ’ ಮತ್ತು ‘ಪಾರವಾಡ’ ಎಂಬ ಅವಳಿ ಜಲಪಾತಗಳು ಸಹ್ಯಾದ್ರಿ ಶ್ರೇಣಿಯಲ್ಲಿ ಕೇವಲ ಒಂದು ಕಿ.ಮೀ. ಅಂತರದಲ್ಲಿವೆ. ಬೆಳಗಾವಿ ನಗರದಿಂದ 44 ಕಿ.ಮೀ ಹಾಗೂ ಹುಬ್ಬಳ್ಳಿಯಿಂದ 140 ಕಿ.ಮೀ. ದೂರದಲ್ಲಿವೆ. ಬೆಳಗಾವಿ–ಗೋವಾ ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರಲ್ಲಿ ಬೆರಳೆಣಿಕೆ ಮಂದಿ ಮಾತ್ರ ಈ ಜಲಪಾತಗಳನ್ನು ನೋಡಲು ಬರುತ್ತಾರೆ. ಕಾರಣ ದುರ್ಗಮ ಹಾದಿ ಮತ್ತು ಕಾಲ್ನಡಿಗೆಯಲ್ಲಿ ಸಾಗಬೇಕಾದ ಅನಿವಾರ್ಯತೆ. ಹಾಗಾಗಿ ಚಾರಣಪ್ರಿಯ ಯುವಕ–ಯುವತಿಯರೇ ಇಲ್ಲಿಗೆ ಹೆಚ್ಚು ಬರುತ್ತಾರೆ.

‘ಯೂಟ್ಯೂಬ್‌’ ವಿಡಿಯೊದಲ್ಲಿ ನೋಡಿದಾಗಲೇ ಮನಕದ್ದಿದ್ದ ಈ ಎರಡೂ ಜಲಪಾತಗಳನ್ನು ನೋಡಬೇಕು ಎಂಬ ಬಯಕೆಯಿಂದ ನಾನು ಮತ್ತು ನನ್ನ ಸ್ನೇಹಿತ ಹುಬ್ಬಳ್ಳಿಯಿಂದ ಬೈಕ್‌ನಲ್ಲಿ ಬೆಳಿಗ್ಗೆ 6.15ಕ್ಕೆ ಹೊರಟೆವು. ಬೆಳ್ಳಂಬೆಳಿಗ್ಗೆಯೇ ತುಂತುರು ಮಳೆ ಆರಂಭವಾಗಿತ್ತು. ‘ಮಳೆಯ ನಾಡು’ ಮಲೆನಾಡಿನ ಪ್ರವಾಸಕ್ಕೆ ಸಿದ್ಧವಾಗಿದ್ದ ನಮಗೆ, ವರ್ಷಧಾರೆಯ ಸಿಂಚನ ಹರ್ಷ ತುಂಬಿತು. ಧಾರವಾಡದಲ್ಲಿ ಬಿಸಿ ಬಿಸಿ ಚಹಾ ಸೇವಿಸಿ, ಬೈಕ್‌ ಗೇರ್‌ ಬದಲಿಸಿ, ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದೆವು. ಮಳೆಯ ನೀರಿನಿಂದ ಶುಭ್ರಗೊಂಡಿದ್ದ ಡಾಂಬರು ರಸ್ತೆ ಫಳಫಳನೆ ಹೊಳೆಯುತ್ತಿತ್ತು.
 


ಚಿಕಲೆ ಜಲಪಾತದ ಬಳಿ ಕಾಣುವ ಕಾನನದ ವಿಹಂಗಮ ನೋಟ 

ಕಿತ್ತೂರಿನಲ್ಲಿ ಎಡಕ್ಕೆ ತಿರುಗಿ, ಬೀಡಿ–ನಂದಗಡ ಗ್ರಾಮಗಳ ಮಾರ್ಗವಾಗಿ ಖಾನಾಪುರ ಪಟ್ಟಣ ತಲುಪಿದಾಗ ಬೆಳಿಗ್ಗೆ 9 ಗಂಟೆ. ಅಲ್ಲಿ ತಿಂಡಿ ಮುಗಿಸಿ, ನಂತರ ಜಾಂಬೋಟಿ ಗ್ರಾಮ ತಲುಪಿದೆವು. ಅಲ್ಲಿಂದ ಬೆಳಗಾವಿ– ಗೋವಾ ಹೆದ್ದಾರಿಯಲ್ಲಿ ಸಾಗುವಾಗ ಧುತ್ತನೆ ಎದುರಾಗುವ ತಿರುವುಗಳು, ಕಣ್ಣು ಕೋರೈಸುವ ಹಸಿರು, ಹಗಲಿನಲ್ಲೂ ದೀಪ ಹಾಕಿಕೊಂಡು ಎದುರಾಗುವ ವಾಹನಗಳು, ಕಣ್ಣು ಮಂಜಾಗಿಸುವ ಧಾರಾಕಾರ ಮಳೆ ಪ್ರವಾಸದ ಖುಷಿಯನ್ನು ದುಪ್ಪಟ್ಟುಗೊಳಿಸಿದವು. ಜಾಂಬೋಟಿಯಿಂದ 10 ಕಿ.ಮೀ. ಸಾಗಿದ ನಮಗೆ ‘ಚಿಕಲೆ ಗ್ರಾಮ’ ಎಂಬ ನಾಮಫಲಕ ಕಣ್ಣಿಗೆ ಬಿತ್ತು. ಆದರೆ, ಅಲ್ಲಿ ಬಸ್ಸಿಗೆ ಕಾಯುತ್ತಿದ್ದ ಗ್ರಾಮಸ್ಥರು ‘ಚಿಕಲೆ ಗ್ರಾಮದ ಮೂಲಕ ಚಿಕಲೆ ಜಲಪಾತಕ್ಕೆ 5 ಕಿ.ಮೀ. ಆಗುತ್ತದೆ. ಆದರೆ, ದಾರಿ ಚೆನ್ನಾಗಿಲ್ಲ. ಕಣಕುಂಬಿ ಮಾರ್ಗವಾಗಿ ಸಾಗಿದರೆ 15 ಕಿ.ಮೀ. ಆಗುತ್ತದೆ. ಹಾದಿ ಚೆನ್ನಾಗಿದೆ’ ಎಂದು ಮರಾಠಿ ಮಿಶ್ರಿತ ಹಿಂದಿಯಲ್ಲಿ ಹೇಳಿದರು.

ನಾವು ಕಣಕುಂಬಿ ಮಾರ್ಗವಾಗಿಯೇ ಹೋಗೋಣ ಎಂದು ನಿರ್ಧರಿಸಿ, ಕರ್ನಾಟಕ–ಗೋವಾ ಗಡಿಭಾಗದಲ್ಲಿರುವ ಕಣಕುಂಬಿಯತ್ತ ಸಾಗಿದೆವು. ಅಲ್ಲಿ ‘ಮೌಲಿ ವಿದ್ಯಾಲಯದ ಮುಖ್ಯಶಿಕ್ಷಕ ಎಸ್‌.ಜಿ. ಚಿಗುಳ್‌ಕರ್‌ ಅವರಿಂದ ಮಾಹಿತಿ ಪಡೆದು, 5 ಕಿ.ಮೀ. ದೂರದಲ್ಲಿದ್ದ ಪಾರವಾಡ ಗ್ರಾಮಕ್ಕೆ ಹೊರಟೆವು. ರಸ್ತೆಯ ಇಕ್ಕೆಲಗಳಲ್ಲಿರುವ ಕೆಸರಿನ ಗದ್ದೆಯಲ್ಲಿ ಮಹಿಳೆಯರು ಭತ್ತದ ಪೈರನ್ನು ಉತ್ಸಾಹದಿಂದ ನಾಟಿ ಮಾಡುತ್ತಿದ್ದರು. ಅವರೇ ಪ್ರವಾಸಿಗರಿಗೆ ದಾರಿ ತೋರುವ ಮಾರ್ಗದರ್ಶಕರೂ ಆಗುತ್ತಾರೆ.


ಆಳದ ಕಣಿವೆಯೊಳಗೆ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ‘ಚಿಕಲೆ’ ಜಲಪಾತ 

ಪಾರವಾಡ ಗ್ರಾಮದಿಂದ 2 ಕಿ.ಮೀ. ಕಚ್ಚಾ ರಸ್ತೆಯಲ್ಲಿ ಸಾಗಿದಾಗ, ನೀರು ಧುಮ್ಮಿಕ್ಕುವ ಶಬ್ದ ಕಿವಿಗೆ ಅಪ್ಪಳಿಸಿತು. ದಟ್ಟ ಕಾನನದ ಮಧ್ಯೆ ತೊರೆಯೊಂದು ಜಲಪಾತ ಸೇರಲು ತವಕಿಸುತ್ತಿತ್ತು. ನೀರಿನಲ್ಲಿ ಕಾಲುಗಳನ್ನು ತೋಯಿಸಿಕೊಂಡು ಜಲಪಾತದತ್ತ ಹೆಜ್ಜೆ ಹಾಕಿದೆವು. ದಟ್ಟ ಮಂಜನ್ನು ಹೊದ್ದಿದ್ದ ಕಾನನದ ಮಧ್ಯೆ ಕವಲಾಗಿ ಹರಿಯುತ್ತಿದ್ದ ‘ಪಾರವಾಡ’ ಜಲಪಾತ ಕಣ್ಣಿಗೆ ಹಬ್ಬವನ್ನುಂಟು ಮಾಡಿತು. ದಟ್ಟಡವಿಯ ಕತ್ತಲಲ್ಲಿ ಜಲಪಾತವೇ ಬೆಳಕಾಗಿ ಹೊಳೆಯಿತು. ಈ ನಯನ ಮನೋಹರ ದೃಶ್ಯವನ್ನು ಪ್ರವಾಸಿಗರು ಕ್ಯಾಮೆರಾ, ಮೊಬೈಲ್‌ ಮೂಲಕ ವಿವಿಧ ಕೋನಗಳಲ್ಲಿ ಸೆರೆಹಿಡಿದರು. ಈ ದಟ್ಟ ಅಡವಿಯಲ್ಲಿ ಯಾವುದೇ ಮೊಬೈಲ್‌ ನೆಟ್‌ವರ್ಕ್‌ ಸಿಗುವುದಿಲ್ಲ. ಹಾಗಾಗಿ ಯಾವುದೇ ಕರೆಗಳ ಕಿರಿಕಿರಿ ಇಲ್ಲದೆ ನಿರುಮ್ಮಳವಾಗಿ ಕಾಡಿನಲ್ಲಿ ಅಲೆಯಬಹುದು. 

ಕಾಡು ಹಾದಿ...
ಅಲ್ಲಿಂದ ಕೇವಲ 1 ಕಿ.ಮೀ. ಅಂತರದಲ್ಲಿ ‘ಚಿಕಲೆ’ ಜಲಪಾತವಿದೆ. ಅಲ್ಲಿಂದ ಕಾಲ್ನಡಿಗೆ ಅಥವಾ ಬೈಕ್‌ ಮೂಲಕ ಮಾತ್ರ ಹೋಗಬಹುದು. ಮಳೆಯಿಂದ ತೋಯ್ದಿದ್ದ ಕೆಂಪು ಮಣ್ಣಿನ ನೆಲ ಕೆಸರು ಗದ್ದೆಯಂತಾಗಿತ್ತು. ಆ ಕಾಡು ಹಾದಿಯಲ್ಲಿ ಬೈಕ್‌ನಲ್ಲಿ ಹೊರಟೆವು. ಎದುರಾದ ತೊರೆ, ಕೆಸರು ಹೊಂಡಗಳು ಪಯಣಕ್ಕೆ ತೊಡಕಾದವು. ಅಂತೂ ಇಂತು ಏದುಸಿರು ಬಿಡುತ್ತಾ, ಕೆಸರಿನಲ್ಲಿ ಸಿಲುಕಿದ್ದ ಬೈಕ್‌ ಅನ್ನು ತಳ್ಳಿಕೊಂಡು ಮುಂದೆ ಸಾಗಿದೆವು. ಬೆಳಗಾವಿಯಿಂದ ಬಂದಿದ್ದ 6 ಯುವಕರ ತಂಡ ಜತೆಯಾಯಿತು. 

ಹುಲಿ, ಆನೆ, ಕಪ್ಪು ಚಿರತೆ, ಕರಡಿಯ ಆವಾಸ ಸ್ಥಾನವಾಗಿರುವ ಈ ಕಾಡಿನಲ್ಲಿ ನಡೆಯುವಾಗ ಅಂಜಿಕೆಯೂ ಇತ್ತು. ಜಿಗಣೆ ಎಲ್ಲಿ ಕಾಲಿಗೆ ಹತ್ತುತ್ತವೆಯೋ ಎಂಬ ಆತಂಕದಿಂದಲೇ ಸಾಗಿದೆವು. ಎಡಬದಿಗೆ ವಿವಿಧ ಜಾತಿಯ ವೃಕ್ಷಗಳು, ಬಲಬದಿಗೆ ಆಳದ ಕಣಿವೆ. ಸಾಗುವ ಹಾದಿಯಲ್ಲಿ ಸಿಗುವ ಪುಟ್ಟ ಪುಟ್ಟ ಜಲಪಾತ ನೋಡಲು ಬಳ್ಳಿ, ಗಿಡಗಳ ಮಧ್ಯೆ ಇಣುಕುತ್ತಿದ್ದೆವು. ಅಂತಿಮವಾಗಿ ವಿಶಾಲವಾದ ಹಸಿರು ಮೈದಾನ ತಲುಪಿದೆವು. ಇತ್ತ ಮಳೆ ಮತ್ತು ಮಂಜು ಪೈಪೋಟಿಗೆ ಬಿದ್ದಿದ್ದರೆ, ಅತ್ತ ಹಸಿರಿನ ಸೊಬಗು ಮತ್ತು ಜಲಪಾತದ ಬೆಡಗು ಸ್ಪರ್ಧೆಗಳಿದಿದ್ದವು.


ಪಾರವಾಡ ಜಲಪಾತದಿಂದ ಚಿಕಲೆ ಜಲಪಾತಕ್ಕೆ ಇರುವ ಕಚ್ಚಾ ರಸ್ತೆ  

‘ಚಿಕಲೆ’ ಜಲಪಾತದ ತುದಿಯಲ್ಲಿ ನಿಂತರೆ ಹಿಂದಿನ ಪ್ರದೇಶ ಕರ್ನಾಟಕ. ನೀರು ಕಣಿವೆಯೊಳಗೆ ಧುಮ್ಮಿಕ್ಕುವ ಪ್ರದೇಶ ಗೋವಾ. ಅಲ್ಲಿ ಗಡಿಯನ್ನು ಸೂಚಿಸುವ ಕಂಬವನ್ನು ನೆಡಲಾಗಿದೆ. ಜಲಪಾತದ ಆಳಕ್ಕೆ ಇಳಿಯಲು ಮೆಟ್ಟಿಲುಗಳಿಲ್ಲ. ಆದರೆ, ಖಾನಾಪುರದಿಂದ ಬಂದಿದ್ದ ಯುವಕರ ತಂಡವೊಂದು ದುಸ್ಸಾಹಸಕ್ಕೆ ಇಳಿಯಿತು. ನೋಡ ನೋಡುತ್ತಿದ್ದಂತೆ ಗಿಡ, ಬಳ್ಳಿಗಳನ್ನು ಆಸರೆಯಾಗಿ ಹಿಡಿದುಕೊಂಡು ಜಲಪಾತದ ಕೆಳಗೆ ಹೋಗಿ ಜಲಪಾತಕ್ಕೆ ಮೈಯೊಡ್ಡಿದರು. ಈ ದೃಶ್ಯ ಅಲ್ಲಿ ನೆರೆದಿದ್ದವರನ್ನು ನಿಬ್ಬೆರಗಾಗಿಸಿತು. ಪಾಚಿಗಟ್ಟಿರುವ ಕಪ್ಪು ಶಿಲೆಗಳ ಮೇಲೆ ಕಾಲಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ!

ಈ ಎರಡೂ ಜಲಪಾತಗಳು ಮಹದಾಯಿ ನದಿಯಲ್ಲಿ ಸಂಗಮಗೊಂಡು, ಅರಬ್ಬಿಸಮುದ್ರ ಸೇರುತ್ತವೆ. ಈ ನದಿಯನ್ನು ಗೋವಾದಲ್ಲಿ ‘ಮಾಂಡೋವಿ’ ಎಂದು ಕರೆಯುತ್ತಾರೆ. ಅರೆ ಗಳಿಗೆ ಹೂಬಿಸಿಲು, ಅರೆ ಗಳಿಗೆ ತುಂತುರು ಮಳೆ, ಇವೆರೆಡರ ಮಧ್ಯೆ ಸುಂಯ್‌ಗುಡುವ ಗಾಳಿ, ಎಲೆಗಳ ಮೇಲೆ ಇಬ್ಬನಿಯ ಚಿತ್ತಾರ... ಬಿಟ್ಟೂ ಬಿಡದೆ ಕಾಡುತ್ತಿದ್ದ ಮಳೆ.... ಹೀಗೆ, ಕ್ಷಣಕ್ಕೊಮ್ಮೆ ಬದಲಾಗುವ ವಾತಾವರಣದಲ್ಲಿ ಬಿಡುವಿಲ್ಲದಂತೆ ಪ್ರವಾಸಿಗರು ಕ್ಯಾಮೆರಾ ಬಟನ್‌ಗಳನ್ನು ಒತ್ತುತ್ತಿದ್ದರು. ಆ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿಯಲು ಹವಣಿಸುತ್ತಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !