ಪ್ರಕೃತಿ ಮಡಿಲಲ್ಲಿ ಮೇರುತಿ ಪರ್ವತ

7

ಪ್ರಕೃತಿ ಮಡಿಲಲ್ಲಿ ಮೇರುತಿ ಪರ್ವತ

Published:
Updated:
ಮೇರುತಿ ಪರ್ವತದ ಸೊಬಗು

ಚಿಕ್ಕಮಗಳೂರು ಎಂದರೆ ಎಲ್ಲರ ಮನಸ್ಸಿನಲ್ಲಿಯೂ ಮೊದಲು ಮೂಡಿ ಬರುವುದು ಪ್ರಕೃತಿ ಸೌಂದರ್ಯದಿಂದ ಮೈತುಂಬಿ ತುಳುಕುವ ನಿಸರ್ಗ ದೇವತೆ. ಒಂದರಮೇಲೊಂದು ಹೊಂದಿಕೊಂಡ ಬೆಟ್ಟಗಳು, ಕಿರಿದಾದ ಕಣಿವೆಗಳು, ಕಾಫಿ, ಟೀ ತೋಟಗಳಿಂದ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ ಈ ಮಲೆನಾಡು.

ಚಿಕ್ಕಮಗಳೂರು ಜಿಲ್ಲೆಯಲ್ಲಿನ ಬೆಟ್ಟ ಸಾಲುಗಳು ಚಾರಣಿಗರಿಗೆ ಚಿರಪರಿಚಿತ. ಕೆಮ್ಮಣ್ಣು ಗುಂಡಿ, ಬಾಬಾ ಬುಡನ್‌ಗಿರಿ, ಮುಳ್ಳಯ್ಯನಗಿರಿ ಹೀಗೆ ಅನೇಕ ತಾಣಗಳು ಪ್ರವಾಸಿಗರ ನೆಚ್ಚಿನ ಪ್ರದೇಶಗಳೆಂದರೆ ತಪ್ಪಾಗಲಾರದು. ಅದೇ ರೀತಿಯಲ್ಲಿ ಈ ಜಿಲ್ಲೆಯಲ್ಲಿರುವ ಮೇರುತಿ ಪರ್ವತ ಸಹ ಒಂದು. ಅದರೆ ಬಹಳಷ್ಟು ಚಾರಣಿಗರಿಗೆ ಇದರ ಪರಿಚಯವಿಲ್ಲ. ಅದಕ್ಕೆ ಕಾರಣ ಸುತ್ತಲೂ ಅವರಿಸಿರುವ ಟೀ ಮತ್ತು ಕಾಫಿ ತೋಟಗಳು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಸರಿಕಟ್ಟೆಯೆಂಬ ಒಂದು ಚಿಕ್ಕ ಊರಿದೆ. ಆ ಊರಿಗೆ ಹೊಂದಿಕೊಂಡ ಕಾಫಿ ಮತ್ತು ಟೀ ತೋಟ ಮೇರುತಿ ಖಾನ್ ಎಸ್ಟೇಟ್. ಈ ಎಸ್ಟೇಟ್‌ನವರು ಒಪ್ಪಿಗೆ ಕೊಟ್ಟರೆ ಮೇರುತಿ ಪರ್ವತಕ್ಕೆ ಹೋಗಲು ಕಷ್ಟವೇನಿಲ್ಲ. ಕಾಫಿ ತೋಟದ ತುತ್ತತುದಿಯವರೆಗೂ ರಸ್ತೆಯಿದೆ. ನಂತರ ಕಾಲುನಡಿಗೆಯಲ್ಲಿ ಬೆಟ್ಟವನ್ನು ಹತ್ತಬೇಕಾಗುವುದು ಅನಿವಾರ್ಯ. ಒಂದರಮೇಲೊಂದು ಪೋಣಿಸಿದಂತೆ ದೊಡ್ಡ ದೊಡ್ಡದಾದ ಬೆಟ್ಟಗಳಿವೆ. ಹಾಗೆಯೇ ಕಾಲ್ನಡಿಗೆಯಲ್ಲಿ ಹೋದರೆ ದೊಡ್ಡ ಗಾತ್ರದ ಮರಗಳು, ವಿವಿಧ ರೀತಿಯ ಹಕ್ಕಿಗಳು, ವಿವಿಧ ಬಗೆಯ ಹೂಗಳನ್ನು ನೋಡಬಹುದು. ಕೆಲವೊಮ್ಮೆ ಚಿರತೆಯ ಹಾವಳಿ ಸಹ ಅಲ್ಲಿರುತ್ತದೆ. ಹಾಗಾಗಿ ಅಲ್ಲಿನ ಜನರ ಸಂಪರ್ಕ ಮಾಡಿ ಹೋಗುವುದು ಉತ್ತಮ.

ಪರ್ವತದ ಅತಿ ಎತ್ತರದ ಏಳನೇ ಬೆಟ್ಟಕ್ಕೆ ಹತ್ತಿ ನಿಂತರೆ ನಾವು ಸ್ವರ್ಗದಲ್ಲಿದ್ದೇವೆ ಎಂದು ಭಾಸವಾಗುತ್ತದೆ. ಈ ಬೆಟ್ಟದ ತುತ್ತ ತುದಿಯಲ್ಲಿ ನಿಂತರೆ ಸುತ್ತ ಮುತ್ತಲಿನ ಪ್ರದೇಶದ ಸೌಂದರ್ಯ ಕಣ್ಮನ ಸೆಳೆಯುತ್ತದೆ. ಒಂದು ಕಡೆ ಕಳಸದ ಕಳಸೇಶ್ವರ ದೇವಸ್ಥಾನ, ತಿರುಗಿ ನಿಂತರೆ ಹೊರನಾಡಿನ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಅನ್ನಪೂರ್ಣೇಶ್ವರಿ ದೇವಸ್ಥಾನ, ಇನ್ನೊಂದು ಬದಿಯಿಂದ ನೋಡಿದರೆ ಬಾಳೆಹೊಳೆಯ ತಟದಲ್ಲಿ ಹರಿಯುವ ಭದ್ರಾ ನದಿಯನ್ನು ಕಣ್ ತುಂಬಿಕೊಳ್ಳಬಹುದು.


ಮೇರುತಿ ಪರ್ವತದಿಂದ ಕಾಣುವ ಕಾಫಿತೋಟದ ನೋಟ

ಈ ಪರ್ವತ ಚಾರಣಿಗರಿಗೆ ಸ್ವರ್ಗವೆನ್ನಬಹುದು. ಇದು ಸಮುದ್ರ ಮಟ್ಟದಿಂದ 5,451ಅಡಿಗಳಷ್ಟು ಎತ್ತರದಲ್ಲಿದೆ. ಒಂದು ಬದಿಯಲ್ಲಿ ಮೇರುತಿ ಖಾನ್ ಎಸ್ಟೇಟ್ ಇದ್ದರೆ ಇನ್ನೊಂದು ಬದಿಯಲ್ಲಿ ಬದನೆ ಖಾನ್ ಎಸ್ಟೇಟ್ ಇದೆ. ಈ ಬದನೆ ಖಾನ್ ಎಸ್ಟೇಟ್‌ನಿಂದ ಕಾಲು ದಾರಿಯಲ್ಲಿ ಹೋದರೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ತಲುಪಲು ಸುಲಭ ಮಾರ್ಗ. ಮಳೆಗಾಲದಲ್ಲಿ ಚಾರಣಕ್ಕೆ ಅಷ್ಟೊಂದು ಒಳ್ಳೆಯ ಕಾಲವಲ್ಲ. ಏಕೆಂದರೆ ಕಿರಿದಾದ ದಾರಿ, ಜಿಗಣೆಯ ಕಾಟ, ಬೆಟ್ಟಗಳೂ ಮಳೆಯಿಂದಾಗಿ ಎಲ್ಲಾ ಭಾಗದಲ್ಲಿ ಪಾಚಿ ಕಟ್ಟಿ ನಡೆಯಲು ಸಾಧ್ಯವಿಲ್ಲದಂಥ ಪರಿಸ್ಥಿತಿಯಿರುತ್ತದೆ. ಮಳೆ ಮತ್ತು ಕೊರೆಯುವ ಚಳಿ ಚಾರಣಕ್ಕೆ ಅನುಕೂಲಕರವಾದ ದಿನಗಳಲ್ಲ. ನವೆಂಬರ್ ತಿಂಗಳಿಂದ ಮೇ ಕೊನೆಯವರಗೂ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು.

ಗಣಪತಿ ಮಂದಿರ
ಪರ್ವತದ ತುತ್ತತುದಿಯನ್ನು ತಲುಪಿದರೆ ಗಣೇಶನ ಮಂದಿರ ನೋಡಬಹುದು. ಅದರ ಬುಡದಿಂದ ಉದ್ಭವವಾಗುವ ನೀರು, ಕಾಫಿ ತೋಟದವರಿಗೆ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಸದಾಕಾಲ ಆಧಾರ. ಊರಿನ ಜನರು ಈ ಗಣೇಶನಿಗೆ ಮಾರ್ಚ್ ತಿಂಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. 

ಮೇರುತಿ ಪರ್ವತದ ಚಾರಣಕ್ಕೆ ಹೋಗುವವರಿಗೆ ಊಟ ತಿಂಡಿ ವ್ಯವಸ್ಥೆ ಹತ್ತಿರದಲ್ಲಿ ಎಲ್ಲಿಯೂ ಇಲ್ಲ. ಬಸರಿಕಟ್ಟೆ ಬಿಟ್ಟರೆ ಎಲ್ಲಿಯೂ ಏನೂ ಸಿಗುವುದಿಲ್ಲ. ಎಸ್ಟೇಟ್‌ನಲ್ಲಿ ಚಿಕ್ಕ ಪುಟ್ಟ ಅಂಗಡಿಗಳನ್ನು ಸ್ಥಳೀಯರಿಗಾಗಿ ಇಟ್ಟುಕೊಂಡಿದ್ದಾರೆ. ಅದರೆ ಊಟ ತಿಂಡಿ ಸಿಗುವುದಿಲ್ಲ.

ಸೌಂದರ್ಯದ ಸೊಬಗನ್ನು ಹೊತ್ತು ನಿಂತಿರುವ ಈ ಮೇರುತಿ ಪರ್ವತಕ್ಕೆ ಜನಾಕರ್ಷಣೆ ಕಡಿಮೆಯೆನ್ನಬಹುದು. ಇದಕ್ಕೂ ಪ್ರವಾಸೋದ್ಯಮ ಇಲಾಖೆ ಅನುಕೂಲ ಕಲ್ಪಿಸಿ ಕೊಟ್ಟರೆ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿಯಂತೆ ಈ ಪರ್ವತದ ಸೊಬಗನ್ನು ಚಾರಣಿಗರು ಸವಿಯಬಹುದು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !