ತಾಲ್ಲೂಕು ಆಸ್ಪತ್ರೆಯಲ್ಲಿ ಐಸಿಯು, ಡಯಾಲಿಸಿಸ್ ಘಟಕ ಕಾರ್ಯಾರಂಭ

7
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳ ಹುದ್ದೆ ಖಾಲಿ

ತಾಲ್ಲೂಕು ಆಸ್ಪತ್ರೆಯಲ್ಲಿ ಐಸಿಯು, ಡಯಾಲಿಸಿಸ್ ಘಟಕ ಕಾರ್ಯಾರಂಭ

Published:
Updated:
ಜೇವರ್ಗಿ ಪಟ್ಟಣದಲ್ಲಿರುವ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ

ಜೇವರ್ಗಿ: ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕ (ಐಸಿಯು) ವಾರ್ಡ್ ಮತ್ತು ಡಯಾಲಿಸಿಸ್ ಚಿಕಿತ್ಸಾ ಕೇಂದ್ರಗಳು ಕಾರ್ಯಾರಂಭ ಮಾಡಿವೆ.

ಜೇವರ್ಗಿ ಪಟ್ಟಣದಲ್ಲಿ ತಾಲ್ಲೂಕು ಆಸ್ಪತ್ರೆ, ತಾಲ್ಲೂಕಿನಲ್ಲಿ 2 ಸಮುದಾಯ ಆರೋಗ್ಯ ಕೇಂದ್ರಗಳು, 12 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 44 ಆರೋಗ್ಯ ಉಪ ಕೇಂದ್ರಗಳಿವೆ. ಯಡ್ರಾಮಿ ಮತ್ತು ನೆಲೋಗಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿವೆ. ತಾಲ್ಲೂಕು ಆಸ್ಪತ್ರೆಯಲ್ಲಿ ಮಂಜೂರಾದ ವೈದ್ಯಾಧಿಕಾರಿಗಳ ಹುದ್ದೆ 14, ಪ್ರಸ್ತುತ 11ಜನ ವೈದ್ಯಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕಿನ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ ಇಬ್ಬರು ವೈದ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿರಾಳ (ಬಿ) ಮತ್ತು ಅರಳಗುಂಡಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳ ಹುದ್ದೆ ಖಾಲಿಯಾಗಿವೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ್ ಮಾಹಿತಿ ನೀಡಿದ್ದಾರೆ.

ತಾಲ್ಲೂಕಿನಲ್ಲಿ 11 ಆರೋಗ್ಯ ಉಪ ಕೇಂದ್ರಗಳಿವೆ. ಪ್ರತಿ ಆರೋಗ್ಯ ಉಪ ಕೇಂದ್ರದಲ್ಲಿ ಒಬ್ಬರು ಮಹಿಳಾ, ಒಬ್ಬರು ಪುರುಷ ಸಿಬ್ಬಂದಿ (ಕಿರಿಯ ಆರೋಗ್ಯ ಸಹಾಯಕರು) ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಆಸ್ಪತ್ರೆಯಲ್ಲಿ ದಿನವೊಂದಕ್ಕೆ ಸರಾಸರಿ 450 ಜನ ಒಳ ಮತ್ತು ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಪ್ರತಿ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿತ್ಯ 25ರಿಂದ 30 ಜನ ಒಳ ಮತ್ತು ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ.

ತಾಲ್ಲೂಕು ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ‘ಡಿ’ ಗ್ರೂಪ್ ನೌಕರರ ಕೊರತೆಯಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್, ರಕ್ತ ಪರೀಕ್ಷಾ ಕೇಂದ್ರ, ಸ್ಕ್ಯಾನಿಂಗ್ ಘಟಕ, ಎ.ಆರ್.ಟಿ ಕೇಂದ್ರ, ಕ್ಷಯ ರೋಗ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ತಾಲ್ಲೂಕು ಆಸ್ಪತ್ರೆ ಸೇರಿದಂತೆ ಒಟ್ಟು 15 ಸರ್ಕಾರಿ ಆಸ್ಪತ್ರೆಗಳಿವೆ.

ಉತ್ತಮ ಆರೋಗ್ಯ ಕೇಂದ್ರಗಳು : 2017–18ನೇ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾಲ್ಲೂಕಿನ ಗಂವ್ಹಾರ, ಮಳ್ಳಿ, ಮಂದೇವಾಲ್, ಜೇರಟಗಿ ಹಾಗೂ ಯಡ್ರಾಮಿ ಆರೋಗ್ಯ ಕೇಂದ್ರಗಳಿಗೆ ಜಿಲ್ಲಾ ಮಟ್ಟದ ಉತ್ತಮ ಆರೋಗ್ಯ ಕೇಂದ್ರ ಪ್ರಶಸ್ತಿ ನೀಡಲಾಗಿದೆ.

ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಂತ್ರಿಕ ಸಿಬ್ಬಂದಿ ಕೊರತೆಯಿಲ್ಲ. ತಾಲ್ಲೂಕು ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರಕ್ಕೆ ತಾಂತ್ರಿಕ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಸಿದ್ದು ಪಾಟೀಲ್ ತಿಳಿಸಿದ್ದಾರೆ.

ಬಯೋ ಮೆಟ್ರಿಕ್ ಪದ್ಧತಿ ಜಾರಿ : ಪಟ್ಟಣದಲ್ಲಿರುವ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಜೂನ್ 30ರಿಂದ ಬಯೋ ಮೆಟ್ರಿಕ್ ಹಾಜರಾತಿ ಪದ್ಧತಿ ಜಾರಿಗೆ ತರಲಾಗಿದೆ. ಸಿಬ್ಬಂದಿ ಕಡ್ಡಾಯವಾಗಿ ನಿಗದಿತ ಸಮಯಕ್ಕೆ ಅಂದರೆ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಕರ್ತವ್ಯ ನಿರ್ವಹಿಸಬೆಕು. ರಾತ್ರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ರಾತ್ರಿ 8ರಿಂದ ಬೆಳಿಗ್ಗೆ 8ರವರೆಗೆ ಆಸ್ಪತ್ರೆಯಲ್ಲಿದ್ದು ಸೇವೆ ಸಲ್ಲಿಸುವಂತೆ ಆದೇಶ ನೀಡಲಾಗಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

 ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಲ್ಲ. ಐಸಿಯು, ಡಯಾಲಿಸಿಸ್ ಘಟಕಗಳನ್ನು ಆರಂಭಿಸಲಾಗಿದೆ. ಆಸ್ಪತ್ರೆಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಾ.ಸಿದ್ದು ಪಾಟೀಲ್, ಮುಖ್ಯ ಆಡಳಿತ ವೈದ್ಯಾಧಿಕಾರಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ.

ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ದಿನದ 24ಗಂಟೆ ವೈದ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು.
- ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ ಜೇವರ್ಗಿ ಪಟ್ಟಣದ ನಿವಾಸಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !