ಗುರುವಾರ , ಏಪ್ರಿಲ್ 15, 2021
26 °C
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಬಸವ ಜಯಂತಿ: ನಿಜಗುಣಪ್ರಭು ಸ್ವಾಮೀಜಿ ಆಕ್ರೋಶ

ಲಿಂಗಾಯತ ಧರ್ಮ ಹತ್ತಿಕ್ಕಲು ಸಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ರಾಷ್ಟ್ರೀಯತೆಯ ಹೆಸರಿನಲ್ಲಿ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತ ಲಿಂಗಾಯತ ಎಂಬ ಸ್ವತಂತ್ರ ಧರ್ಮವನ್ನು ಹತ್ತಿಕ್ಕುವ ರಾಜಕಾರಣದ ಸಂಚು ದೇಶದಲ್ಲಿ ನಡೆಯುತ್ತಿದೆ’ ಎಂದು ಮುಂಡರಗಿಯ ಜಗದ್ಗುರು ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಚಾಮರಾಜನಗರ ಜಿಲ್ಲಾ ಘಟಕ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಜಯಂತಿ ಮತ್ತು ಮಹಾಸಭಾದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಹಿಂದುತ್ವ ಎನ್ನುವುದು ನಿಧಾನವಾಗಿ ಹರಡುವ ವಿಷ (ಸ್ಲೋ ಪಾಯ್ಸನ್‌). ಆರಂಭದಲ್ಲಿ ವಿಪ್ರ ಎಂಬ ಪದದೊಂದಿಗೆ, ನಂತರ ಬ್ರಾಹ್ಮಣ, ಆ ಬಳಿಕ ವೈದಿಕ, ನಂತರ ಪುರೋಹಿತ ಎಂಬ ಪದದೊಂದಿಗೆ ಇದು ತಳಕು ಹಾಕಿಕೊಂಡಿತ್ತು. ಈಗ ರಾಷ್ಟ್ರೀಯತೆಯೊಂದಿಗೆ ಗುರುತಿಕೊಳ್ಳುತ್ತಿದೆ’ ಎಂದು ಹೇಳಿದರು. 

‘ಹಿಂದುತ್ವ ಎಂದರೆ ರಾಷ್ಟ್ರೀಯತೆ ಎಂದಾಗಿದೆ. ಲಿಂಗಾಯತ ಸಮುದಾಯದ 30ರಿಂದ–35 ವರ್ಷದೊಳಗಿನ ಯುವಕರು ರಾಷ್ಟ್ರೀಯತೆಯ ಹಿಂದೆ ಬಿದ್ದಿದ್ದಾರೆ. ಅವರ ತಲೆ ಸಂಪೂರ್ಣವಾಗಿ ಕೆಟ್ಟುಹೋಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು. 

‘ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸ ಗೊತ್ತಿಲ್ಲದಿರುವುದು ದೊಡ್ಡ ದುರಂತ. ಲಿಂಗಾಯತರು ಈಗ ಎರಡನೇ ಬ್ರಾಹ್ಮಣರಾಗಿದ್ದಾರೆ. ವೈದಿಕರು ಹೇಳಿದ್ದೇ ಶಾಸ್ತ್ರ ಎಂದು ಅಂದುಕೊಂಡಿದ್ದಾರೆ. ಲಿಂಗಾಯತರೇ ಲಿಂಗಾಯತರಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಸವಣ್ಣ ಅವರು ಪ್ರತ್ಯೇಕ ಧರ್ಮ ಸ್ಥಾಪಿಸಿದಾಗಿನಿಂದ ಇವತ್ತಿನವರೆಗೂ ಬಸವ ಧರ್ಮಕ್ಕೆ ಹಿಂಸೆ ನೀಡಲಾಗುತ್ತಿದೆ. ಸಮಾನತೆ, ಭಾವೈಕ್ಯವನ್ನು ಪ್ರತಿಪಾದಿಸಿದ ಬಸವಣ್ಣನವರನ್ನು ಗಡಿಪಾರು ಮಾಡಿದ್ದು ಸನಾತನವಾದಿಗಳು, ಸಂಪ್ರದಾಯವಾದಿಗಳು, ಪಟ್ಟಭದ್ರ ಹಿತಾಸಕ್ತಿಗಳೇ ವಿನಾ ಮುಸ್ಲಿಮರಲ್ಲ, ಕ್ರಿಶ್ಚಿಯನ್ನರೂ ಅಲ್ಲ’ ಎಂದು ಹೇಳಿದರು. 

ಸಮಾಜ ಒಡೆಯುವುದಿಲ್ಲ: ‘ಸಮಾಜವನ್ನು ಒಡೆಯುವುದು ನಮ್ಮ ಉದ್ದೇಶ ಅಲ್ಲ. ನಾವು ಬ್ರಾಹ್ಮಣರ ವಿರೋಧಿಗಳೂ ಅಲ್ಲ. ಶೋಷಣೆಯ, ಮೂಢನಂಬಿಕೆಯ ವಿರೋಧಿಗಳು. ಈ ದೇಶದಲ್ಲಿ ಸಮಾನತೆ, ಭಾವೈಕ್ಯ ಬೆಳೆಸಬೇಕು ಎಂದರೆ ಅದು ಲಿಂಗಾಯತ ಧರ್ಮದಿಂದ ಮಾತ್ರ ಸಾಧ್ಯ’ ಎಂದು ಪ್ರತಿಪಾದಿಸಿದರು.

‘ಪುರೋಹಿತಶಾಹಿಗಳು, ಮತೀಯವಾದಿಗಳು, ಸನಾತನವಾದಿಗಳು ಎಷ್ಟೇ ವಿರೋಧ ಮಾಡಲಿ; ಕರ್ನಾಟಕದ ಮಾತೃಭಾಷೆ ‘ಕನ್ನಡ’ದ ಧರ್ಮವಾದ ಲಿಂಗಾಯತ ಧರ್ಮ ಮುಂದೊಂದು ದಿನ ಚಾಲ್ತಿಗೆ ಬಂದೇ ಬರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಮುಡಿಗುಂಡ ವಿರಕ್ತಮಠದ ಶ್ರೀಕಂಠ ಸ್ವಾಮೀಜಿ ಮಾತನಾಡಿ, ‘12ನೇ ಶತಮಾನದಲ್ಲೇ ಲಿಂಗಾಯತ ಪ್ರತ್ಯೇಕ ಧರ್ಮವಾಗಿದೆ. ಈಗ ಅದನ್ನು ಯಾರೂ ಮಾಡಬೇಕಾಗಿಲ್ಲ. ಆದರೆ, ಸ್ವಾತಂತ್ರ್ಯಾ ನಂತರ ಬಂದ ಸಂವಿಧಾನ ವ್ಯವಸ್ಥೆಯಲ್ಲಿ ಲಿಂಗಾಯತವನ್ನು ಜಾತಿ ಎಂದು ಗುರುತಿಸಲಾಗಿದೆ. ಇದರಿಂದ ಅನನುಕೂಲವಾಗಿದೆ’ ಎಂದರು.

‘ಪ್ರತ್ಯೇಕ ಧರ್ಮ ಮಾಡಬೇಕು ಎಂಬುದು ಜಾಗತಿಕ ಲಿಂಗಾಯತ ಸಮುದಾಯದ ಒತ್ತಾಯ ಆಗಿರಲಿಲ್ಲ. ವೀರಶೈವ ಮಹಾಸಭಾವೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಸರ್ಕಾರ ಅದನ್ನು ತಿರಸ್ಕರಿಸಿತ್ತು. ಈಗ ಪ್ರತ್ಯೇಕ ಧರ್ಮ ಹೋರಾಟಕ್ಕಾಗಿ ಜಾಗತಿಕ ಲಿಂಗಾಯತ ಮಹಾಸಭಾ ಸ್ಥಾಪನೆಯಾಗಿದೆ. ಇದು ಬಸವಣ್ಣನ ಆಶಯ’ ಎಂದು ಹೇಳಿದರು. 

ಗದಗಿನ ಮಹಾಂತ ಸ್ವಾಮೀಜಿ, ಚಿಕ್ಕಮಗಳೂರಿನ ಎನ್‌.ಆರ್‌.ಪುರದ ಬಸವ ಕೇಂದ್ರದ ಬಸವಯೋಗಿ ಪ್ರಭುಗಳು ಮತ್ತು ಚಾಮರಾಜನಗರದ ಸಿದ್ಧಮಲ್ಲೇಶ್ವರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿದರು. ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಸೂರಿನ ಹೊಸಮಠದ ಚಿದಾನಂದ ಸ್ವಾಮೀಜಿ, ಕೊಳ್ಳೇಗಾಲದ ಅಗರ ಕಲ್ಮಠದ ಸಿದ್ಧಮಲ್ಲ ಸ್ವಾಮೀಜಿ, ಮೂಡಗೂರು ವಿರಕ್ತಮಠದ ಉದ್ಧಾನ ಸ್ವಾಮೀಜಿ, ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್‌ ಇದ್ದರು.

ಬೃಹತ್‌ ರ‍್ಯಾಲಿ: ಇದಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಿಂದ ಕಾರ್ಯಕ್ರಮ ನಡೆದ ಪೇಟೆ ಪ್ರೈಮರಿ ಶಾಲೆ ಆವರಣದವರೆಗೆ ಬೃಹತ್‌ ಬೈಕ್‌ ರ‍್ಯಾಲಿ ನಡೆಯಿತು.

ಶರಣ ತತ್ವ ಬಿಟ್ಟು, ಅಧಿಕಾರಕ್ಕೆ ಶರಣು: ಚೇತನ್‌
‘ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ನಾಯಕರು ಎಂದು ಕರೆಸಿಕೊಳ್ಳುವವರು ಶರಣತತ್ವ ಬಿಟ್ಟು ಅಧಿಕಾರಕ್ಕೆ ಶರಣಾಗಿದ್ದಾರೆ’ ಎಂದು ನಟ ಚೇತನ್‌ ವ್ಯಂಗ್ಯವಾಡಿದರು. 

‘ಲಿಂಗಾಯತ ಸಮುದಾಯದೊಂದಿಗೆ ಗುರುತಿಸಿಕೊಂಡಿರುವರು ಹೋಮ, ಯಜ್ಞ, ಸತ್ಯನಾರಾಯಣ ಪೂಜೆ ಮಾಡುತ್ತಿದ್ದಾರೆ. ಜನರಲ್ಲಿ ಮೌಢ್ಯ ಬಿತ್ತುತ್ತಿದ್ದಾರೆ. ರಾಮಜನ್ಮಭೂಮಿಯ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಯಾವ ರಾಜಕಾರಣಿಯ ಹೆಸರು ಹೇಳದೆಯೇ ಟೀಕಿಸಿದರು.

‘ಶರಣತತ್ವ ಪಾಲಿಸಿದವರು ನಾಯಕರಾಗಬೇಕೇ ವಿನಾ ಲಿಂಗಾಯತರಾಗಿ ಹುಟ್ಟಿದವರಲ್ಲ’ ಎಂದರು. 

‘ರಾಜಕೀಯ ಪಕ್ಷಗಳಿಗೆ ಮತ ಬ್ಯಾಂಕಿಗಾಗಿ ಬಸವಣ್ಣ ಬೇಕು. ಅವರ ತತ್ವಗಳು, ಸಿದ್ಧಾಂತಗಳು ಬೇಡ’ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು