‘ದೇಶದ ರಕ್ಷಣೆ ಮೋದಿಯಿಂದ ಸಾಧ್ಯ’

ಬುಧವಾರ, ಏಪ್ರಿಲ್ 24, 2019
28 °C

‘ದೇಶದ ರಕ್ಷಣೆ ಮೋದಿಯಿಂದ ಸಾಧ್ಯ’

Published:
Updated:
Prajavani

ಕೊಲ್ಹಾರ: ‘ದೇಶದ ರಕ್ಷಣೆ ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ ಎಂಬ ಭಾವನೆ ಜನರಲ್ಲಿ ಮೂಡಿದೆ. ಹೀಗಾಗಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ’ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಳೂತಿ ಗ್ರಾಮದಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ ಈ ಹಿಂದೆ ಚುನಾವಣೆ ಸನಿಹ ಬಂದಾಗ ಯಾರಿಗೆ ಮತ ನೀಡಬೇಕು ಎಂದು ಜನರು ನಿರ್ಧರಿಸುತ್ತಿದ್ದರು. ಆದರೆ, ಈ ಬಾರಿ ತಿಂಗಳ ಹಿಂದೆಯೇ ಮೋದಿಯವರಿಗೆ ನೀಡಲು ತೀರ್ಮಾನಿಸಿದ್ದಾರೆ’ ಎಂದರು.

‘ಈ ಹಿಂದೆ ಆಡಳಿತ ನಡೆಸಿದ ಹಲ ಪ್ರಧಾನಿಗಳು ದೇಶದಲ್ಲಿ ದಾಳಿಗಳಾದಾಗ, ಸೈನಿಕರು ಬಲಿಯಾದಾಗ ಧ್ವನಿ ಎತ್ತಲಿಲ್ಲ. ಆದರೆ ಮೋದಿಯವರು ಬಾಲಾಕೋಟ್ ದಾಳಿಯಾದಾಗ ಕೇವಲ ಎಂಟು ದಿನದಲ್ಲಿ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದರು. ಐದು ವರ್ಷದ ಅವಧಿಯಲ್ಲಿ ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ’ ಎಂದು ಹೇಳಿದರು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ‘ಕೊರ್ತಿ ಕೊಲ್ಹಾರ ಸೇತುವೆ ನಿರ್ಮಿಸಲು, ಕೂಡಗಿಯಲ್ಲಿ ಎನ್‌ಟಿಪಿಸಿ ಸ್ಥಾಪಿಸಲು ನಾನು ಹೋರಾಟ ನಡೆಸಿದ ಸಂದರ್ಭದಲ್ಲಿ ನನಗೆ ಧೈರ್ಯ ತುಂಬಿದವರು ಜಿಗಜಿಣಗಿಯವರು. ಜಿಲ್ಲೆಯಲ್ಲಿ ಹೆದ್ದಾರಿಗಳ ಅಭಿವೃದ್ಧಿ, ರೈಲ್ವೆ ಮೇಲ್ಸೆತುವೆಗಳು ಸೇರಿದಂತೆ ಹಲವು ಅಭಿವೃದ್ಧಿ ಕೆಲಸ ಮಾಡಿದರೂ ಹೇಳಿಕೊಂಡಿಲ್ಲ. ಮೋದಿಯವರ ಕೈಬಲಪಡಿಸಲು ಹಿಂದಿನ ಕಹಿ ಘಟನೆ ಮರೆತು ಜಿಗಜಿಣಗಿ ಅವರನ್ನು ಬೆಂಬಲಿಸೋಣ’ ಎಂದರು.

ಇದೇ ವೇಳೆ ಮುಳವಾಡ ಹಾಗೂ ಮಸೂತಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ವಿವಿಧ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು. ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ, ಮಂಡಲ ಆಧ್ಯಕ್ಷ ಬಿ.ಕೆ.ಕಲ್ಲೂರ, ಮುಖಂಡರಾದ ಜಗದೀಶ ಕೊಟ್ರಶೆಟ್ಟಿ, ಅಂಬೋಜಿ ಪವಾರ, ಶಂಕರಗೌಡ ಪಾಟೀಲ, ಅಪ್ಪಣ್ಣ ಐಹೊಳೆ, ನಂದಬಸಪ್ಪ ಚೌಧರಿ ಸೇರಿದಂತೆ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !