ಮಂಗಳವಾರ, ಸೆಪ್ಟೆಂಬರ್ 28, 2021
23 °C

ಅಮೃತಸರದಲ್ಲಿ ಚಿನ್ನದಂಥ ನೆನಪು

ಮಂಜುಳಾ ರಾಜ್‌ Updated:

ಅಕ್ಷರ ಗಾತ್ರ : | |

Prajavani

ಪಂಜಾಬ್‌ನ ಅಮೃತಸರದ ಹೆಸರು ಕೇಳಿದ ಕೂಡಲೇ ಅಲ್ಲಿನ ಸ್ವರ್ಣ ಮಂದಿರ ಅರ್ಥಾತ್ ಗೋಲ್ಡನ್ ಟೆಂಪಲ್ ನೆನಪಾಗುತ್ತದೆ. ಗೋಲ್ಡನ್‌ ಟೆಂಪಲ್ ಅನ್ನು ಹರ್ ಮಂದಿರ್ ಸಾಹೇಬ್ ಎನ್ನುತ್ತಾರೆ. ಮಂದಿರದ ಸುತ್ತಲೂ ಅಮೃತ ಸರೋವರ ಹೆಸರಿನ ನೀರಿನ ಕೊಳವಿದೆ. ಆ ನೀರಿನಲ್ಲಿ ಮಿಂದು ದೇವರ ದರ್ಶನ ಮಾಡು ವುದು ವಾಡಿಕೆ. ರಾತ್ರಿ ವೇಳೆ ಈ ಕೊಳದಲ್ಲಿ ಹೊಳೆಯುವ ಸ್ವರ್ಣ ಮಂದಿರದ ಬಿಂಬ ಕಣ್ಣು ಕೋರೈಸುತ್ತದೆ.

ನಾವು ಅಮೃತಸರಕ್ಕೆ ಹೋದಾಗ ಸಿಕ್ಕಾಪಟ್ಟೆ ರಶ್ ಇತ್ತು. ಹೀಗಾಗಿ ಮೊದಲು ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದೆವು. ದೇವಾಲಯ ತಲುಪಿದಾಗ, ದೇಗುಲ ಪ್ರವೇಶಿಸುವವರು ಸರೋವರದಲ್ಲಿ ಮೀಯುತ್ತಿದ್ದರು.

ದೇವಾಲಯದೊಳಗೆ ಎಲ್ಲ ಜಾತಿಯವರಿಗೂ ಪ್ರವೇಶವಿದೆ. ಆದರೆ ಪಾದರಕ್ಷೆ ಧರಿಸುವಂತಿಲ್ಲ. ಹಾಗೆಯೇ, ತಲೆಯನ್ನು ವಸ್ತ್ರದಿಂದ ಮುಚ್ಚಿ ಕೊಳ್ಳಬೇಕು. ಇದು ದೇಗುಲದ ನಿಯಮಗಳು. ಅದಕ್ಕಾಗಿಯೇ, ತಲೆಗೆ ಕಟ್ಟಿ ಕೊಳ್ಳಲು ಕಾವಿ ಬಣ್ಣದ ವಸ್ತ್ರಗಳು ಅಲ್ಲೇ ಲಭ್ಯವಿರುತ್ತವೆ. ಒಂದು ವಸ್ತ್ರಕ್ಕೆ ₹10 ರೂಪಾಯಿ. ವಸ್ತ್ರ ಖರೀದಿಸದವರು ತಮ್ಮಲ್ಲಿರುವ ಕರವಸ್ತ್ರವನ್ನೇ ತಲೆಗೆ ಕಟ್ಟಿಕೊಳ್ಳಬಹುದು. ಪಾದರಕ್ಷೆಗಳನ್ನಿರಿಸಲು ಕೌಂಟರ್ ಇದೆ. ಅದಕ್ಕೆ ಯಾವುದೇ ಶುಲ್ಕವಿಲ್ಲ. 

ದೇವಾಲಯ ಪ್ರವೇಶಿಸುವರಿಗೆ ಕಾಲು ತೊಳೆದುಕೊಳ್ಳಲು ಹರಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ದೇವಾಲಯ ಪ್ರವೇಶಿಸುವ ಮುನ್ನ ಎಲ್ಲರೂ ಪ್ರಸಾದ ಕೊಂಡು ಕೊಳ್ಳುತ್ತಾರೆ. ಅದು ತುಪ್ಪದಲ್ಲಿ ಹುರಿದ ಗೋಧಿಯ ಸಿಹಿ ಪದಾರ್ಥ. ಅದನ್ನು ಒಂದೊಂದು ತಟ್ಟೆಯಲ್ಲಿಟ್ಟಿರು ತ್ತಾರೆ. ಆ ಪ್ರಸಾದದಿಂದ ತುಪ್ಪ ತಟ್ಟೆ ತುಂಬಾ ಹರಿಯುತ್ತಿರುತ್ತದೆ. ಅಷ್ಟು ತುಪ್ಪದಲ್ಲಿ ಗೋಧಿಯನ್ನು ಹುರಿದಿರುತ್ತಾರೆ. ಪ್ರಸಾದವನ್ನು ದೇವರ ಮುಂದಿಟ್ಟ ನಂತರ ಸೇವಿಸಬೇಕು ಎನ್ನುವುದು ಇಲ್ಲಿನ ಪದ್ಧತಿ. ಪ್ರಸಾದಕ್ಕೆ ₹ 10 ರಿಂದ ₹50ರವರೆಗೂ ಬೆಲೆ.

ನಾವು ಬಿಸಿಯಾಗಿದ್ದ ಪ್ರಸಾದದ ತಟ್ಟೆ ಹಿಡಿದು ಸಾಗುತ್ತಿದ್ದೆವು. ಆದರೆ, ಸಿಕ್ಕಾಪಟ್ಟೆ ಜನ ಇದ್ದಿದ್ದರಿಂದ ನಮ್ಮ ಹಿಂದೆ ನಿಂತಿದ್ದವರು ಎಲ್ಲಿ ನಮ್ಮ ತಲೆ ಮೇಲೆ ಬಿಸಿಯ ಪ್ರಸಾದವನ್ನು ಬೀಳಿಸುತ್ತಾರೋ ಎಂದು ಭಯವಾಗುತ್ತಿತ್ತು. ನಾವು ಪ್ರಸಾದ ಹಿಡಿದು ಒಳಗಡೆ ಪ್ರವೇಶಿ ಸಿದಾಗ, ಗುರುವಿನ ಗ್ರಂಥವಿರಿಸಿದ ಸ್ಥಳದಲ್ಲಿ ಭಜನೆ ನಡೆಯುತ್ತಿತ್ತು.

ದೇವಾಲದ ಒಳಗೆ ಸುಂದರ ಕುಸಿರಿ ಕಲೆ ಇತ್ತು. ಹೊರಬಂದು ನೋಡಿದಾಗ ಮಂದಿರದ ಹೊರಭಾಗ ಚಿನ್ನದಂತೆ ಹೊಳೆಯುತ್ತಿತ್ತು. ನನಗೆ ಆ ದೇವಾಲಯವನ್ನು ಪ್ರವೇಶಿಸಿದಾಗ ದಶಕಗಳ ಹಿಂದೆ ನಡೆದ ‘ಬ್ಲೂ ಸ್ಟಾರ್’ ಆಪರೇಷನ್ ನೆನಪಿಗೆ ಬಂದಿತು.

ಸ್ವರ್ಣ ಮಂದಿರದಲ್ಲಿನ ಎಲ್ಲ ಕಾರ್ಯಗಳು ಭಕ್ತರ ಸೇವೆಯಿಂದಲೇ ನಡೆಯುತ್ತಿದ್ದವು. ಕುಡಿಯುವ ನೀರು ಪೂರೈಕೆ, ಆ ನೀರಿನ ಲೋಟಗಳನ್ನು ತೊಳೆಯುವುದು. ಸಾರ್ವಜನಿಕ ಭೋಜನಕ್ಕೆ ಅಡುಗೆ ತಯಾರಿ ಮತ್ತು ತರಕಾರಿ ಹೆಚ್ಚುವುದು, ಊಟ ಬಡಿಸುವುದು, ಊಟದ ತಟ್ಟೆ ತೊಳೆಯುವುದು, ಚಪ್ಪಲಿ ಜೋಡಿಸುವುದು... ಹೀಗೆ ಎಲ್ಲವನ್ನೂ ಭಕ್ತರು ಸೇವೆಯಂತೆ ಮಾಡುತ್ತಾರಂತೆ. ಇದು ನನಗೆ ತುಂಬಾ ಮೆಚ್ಚುಗೆಯಾಯಿತು.

ಜಲಿಯನ್ ವಾಲಾಬಾಗ್‌

ಗೋಲ್ಡನ್‌ ಟೆಂಪಲ್‌ನಿಂದ ಅನತಿ ದೂರದಲ್ಲಿ ಜಲಿಯನ್ ವಾಲಾಬಾಗ್‌ ಇದೆ. ಈ ಜಾಗ 1919ರಲ್ಲಿ ನಡೆದ ಹತ್ಯಾಕಾಂಡವನ್ನು ನೆನಪಿ ಸುತ್ತದೆ. ಬೈಸಾಕಿ ಹಬ್ಬವನ್ನು ಆಚರಿಸಲು ಅಲ್ಲಿ ಸೇರಿದ ಎಲ್ಲರನ್ನು ಅವರು ಹೊರಗೆ ತಪ್ಪಿಸಿಕೊಂಡು ಹೋಗದಂತೆ ಗೇಟಿನ ಬಾಗಿಲುಗಳನ್ನು ಮುಚ್ಚಿ ಸುತ್ತಲೂ ಸೇನೆ ಆವರಿಸಿ ಮಕ್ಕಳು, ಹೆಂಗಸರೆನ್ನದೆ ಅಮಾನವೀಯವಾಗಿ ಎಲ್ಲರ ಮೇಲೆ ಗುಂಡು ಹಾರಿಸಿದ ಆ ಜನರಲ್ ಡಯರ್ ಮೇಲೆ ಸಿಟ್ಟು ಬರುತ್ತದೆ. ಗುಂಡೇಟಿನಿಂದ ತಪ್ಪಿಸಿಕೊಳ್ಳಲು ಬಹಳಷ್ಟು ಜನರು ಬಾವಿಗೆ ಹಾರುತ್ತಾರೆ. ಜಲಿಯನ್ ವಾಲಾಬಾಗ್‌ನಲ್ಲಿ ಆ ಬಾವಿಯನ್ನು ಹಾಗೆಯೇ ರಕ್ಷಿಸಲಾಗಿದೆ. ಆ ಸ್ಥಳವನ್ನು ಸುಂದರ ಉದ್ಯಾನವನ್ನಾಗಿ ಪರಿವರ್ತಿಸಿದ್ದಾರೆ. ಗುಂಡುಗಳು ಬಿದ್ದ ಸ್ಥಳಗಳನ್ನು ಗುರುತಿಸಿ ಇಡಲಾಗಿದೆ.

ವಾಘಾ ಬಾರ್ಡರ್‌

ಜಲಿಯನ್‌ ವಾಲಾಬಾಗ್‌ ಸಮೀಪದಲ್ಲೇ ವಾಘಾ ಬಾರ್ಡರ್. ಪಾಕಿಸ್ತಾನ – ಭಾರತದ ಗಡಿ ಭಾಗ. ಅಲ್ಲಿ ಎರಡೂ ದೇಶದ ಗಡಿ ಭದ್ರತಾ ಪಡೆಯವರು ನಿರಂತರವಾಗಿ ಗಸ್ತು ತಿರುಗುತ್ತಿರುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ಯೋಧರು ನಡೆಸುವ ಪ್ರದರ್ಶನ ಮತ್ತೆ ನಮ್ಮಲ್ಲಿ ದೇಶ ಭಕ್ತಿಯನ್ನು ತುಂಬುತ್ತದೆ. ಅಲ್ಲಿ ಸೇರಿರುವವರೆಲ್ಲರೂ ಕೂಗುವ ಘೋಷಣೆಗಳು ಇಡೀ ಅಮೃತಸರದಲ್ಲೇ ಪ್ರತಿಧ್ವನಿಸುತ್ತವೇನೋ ಎನಿಸುತ್ತದೆ.

ವಾಘಾ ಬಾರ್ಡರ್‌ ನೋಡಿ ಹೊರಟರೆ, ಮುಂದೆ ದುರ್ಗಾಮಂದಿರ ಸಿಗುತ್ತದೆ.

ಅಮೃತಸರ ಅಷ್ಟೇನೂ ಆಕರ್ಷಕವಾಗಿಲ್ಲ. ರಸ್ತೆಗಳು, ಫುಟ್‍ಪಾತ್ ಎಲ್ಲವೂ ಮಣ್ಣುಮಯ, ಈ ಐತಿಹಾಸಿಕ ನಗರವಾದ ವನ್ನು ಮತ್ತಷ್ಟು ಸುಂದರ ಮತ್ತು ಶುಚಿಯಾಗಿಡ ಬಹುದಿತ್ತೇನೋ ಎನ್ನಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು