ಗುರುವಾರ , ಜೂನ್ 17, 2021
28 °C

ಕನಸಿನೊಳಗೊಂದು ಕಣಸು

ನಂದಿನಿ ವಿಶ್ವನಾಥ ಹೆದ್ದುರ್ಗ Updated:

ಅಕ್ಷರ ಗಾತ್ರ : | |

Prajavani

ಮಾಗಿ ರಾತ್ರಿಯ ಮೂರನೇ ಜಾವ
ಹೊರಬಂದ ಉಸಿರೆಲ್ಲ ಮುಗಿಲುಮುಗಿಲು
ಇರುಳ ಗವ್ವೆನ್ನುವ ಸದ್ದಿಗೂ ಮಂಜುಮೌನ
ನಿದ್ದೆಎಚ್ಚರಗಳ ಮುಚ್ಚಿಗೆಯಲ್ಲಿ
ಬೆಚ್ಚಗೆ ಹೊದ್ದು ಮಲಗಿದ್ದೆ

 

ಏನೋ ಸದ್ದಾಯಿತು!
ಎದ್ದು ನೋಡಿದರೆ ಹಸುಗೂಸು ಅಳುತ್ತಿದೆ
ಪರಿಚಿತ ಪೇಟೆ ಬೀದಿ
ಕೊನೆಯ ಕ್ರಾಸಿನ ತೊಟ್ಟಿಯ ಸುತ್ತ
ಹತ್ತೆಂಟು ಬೀಡಾಡಿ ನಾಯಿ

 

ಏನದು, ಗುರುಗುಟ್ಟಿ ಗುಂಪುಗೂಡುತ್ತಿರುವುದು?
ಕತ್ತು ನೀಳವಾಗಿಸಿದವಳ
ಕರುಳು ಕನಲಿತು
ಮಾಸೂ ಹರಿಯದ ಹಸುಗೂಸು..
ಗುರುಗುಡುವ ನಾಯಿಗಳ ಬಾಯ ಕ್ರೌರ್ಯಕ್ಕೆ
ಬೆದರುತ್ತ
ಹಚಾಹಚಾ ಚೀರುತ್ತ ಒಳಹೋದೆ

 

ಕೊಳಕು ಚಿಂದಿಯ ಕೂಸೀಗ
ನನ್ನ ಕೈತೊಟ್ಟಿಲೊಳಗೆ
ಉಟ್ಟ ಕುಪ್ಪಸ ಬಿಗಿಯಿತು
ಕೂಸು ಒಣಬಾಯಿ ಅಲುಗಾಡಿಸಿತು
ಮುಟ್ಟು ನಿಲ್ಲುವ ಸಮಯದ
ಹೆಣ್ಣು ನಾನು
ಎದೆತೊಟ್ಟು ಕೂಸ ತುಟಿಗಿಟ್ಟು
ಅರೆಗಣ್ಣಾದೆ, ಬೇರೆ ದಾರಿ ತೋರದೆ

 

ಜಗದಿಂದ ಹರಿದ ಧಾರೆಯ ಹೀರಿ
ಎದೆಬಿಟ್ಟ ಮಡಿಲ ಹುಣ್ಣಿಮೆ
ತೆರೆಯಿತು ತನ್ನ ಅರಳುಗಣ್ಣ!
ತುಟಿಯ ಹಾಲ ಒರೆಸಲು
ಕುತ್ತಿಗೆ ಚಿಂದಿ ಸರಿಸಿದರೆ
ಕತ್ತಿನಲಿ ಹಸಿರು ಕಟ್ಟು!
ಹೂ ಬೆರಳು ನನ್ನ
ಎದೆಯ ಮೇಲಿನ ತಾಯಿತ ಹಿಡಿದಿತ್ತು

 

ಏನೋ ತೇವ ತಾಗಿ
ನನ್ನ ಸಕ್ಕರೆನಿದ್ದೆಗೆ ಭಂಗ
ಎದ್ದು ನೋಡಿದರೆ ಕುಪ್ಪಸ ಒದ್ದೆಮುದ್ದೆ
ನೀಲಿಹಾಸಿನಲಿದ್ದ ಹಸಿರು ಪಟ್ಟೆಯ ಚಿಟ್ಟೆ
ಹೊದಿಕೆಯ ಕೇಸರಿ ಹೂವಿನ
ಮಕರಂದ ಹೀರುತ್ತಿದೆ ನಡುರಾತ್ರಿಯಲ್ಲಿ

 

ಕೂಸಬ್ಬೆ ನೆನಪಾದಳು ಯಾಕೋ
ಯಾವ ಮೊಹಬತಿನ ಮೆಹರಬಾನಿಯೊ ಏನೋ
ಮನೆ, ಮರ್ಯಾದೆ, ಮದುವೆ, ಮಗು
ಯಾವುದಿಲ್ಲಿ ಹೆಚ್ಚು ವಜನು?
ಉಳ್ಳವರಿಗಿಲ್ಲ ಕಲಮು ಕಾನೂನು
ಹೇಗೆ ಅನುಭವಿಸುವಳೋ
ಹಾಲು ಕಟ್ಟಿದ ನೋವು!

ಬಿಗಿದ ಮೇಲುಡುಗೆ ಬದಲಿಸಲು ಎದ್ದವಳು
ಕನ್ನಡಿ ನೋಡಿದೆ
ಮೊಗದ ತುಂಬೆಲ್ಲಾ ಮೆತ್ತಿಕೊಂಡಿದೆ
ಯಾವುದೋ ಲೋಕದ ಮಮತೆ!
ಆವರಿಸಿಕೊಂಡಳೇ ಅದೃಶ್ಯ ದೇವತೆ?

 

ಕನಸ ಕೂಸಿನ ‌ಮೇಲೆ
ಯಾಕಿಂಥ ಕರುಳ ಬಂಧ?
ನೋಡಲೇಬೇಕನ್ನಿಸಿದೆ ನಿನ್ನ, ಕಂದ
ಹಚ್ಚಿಕೊಂಡರೆ ಹದನೋವೂ ಎಂಥ ಚಂದ!
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.