ಶಾಲೆಗೆ ಬಂದ್ವು ಕಪ್ಪು ಗುಬ್ಬಿಗಳು!

7

ಶಾಲೆಗೆ ಬಂದ್ವು ಕಪ್ಪು ಗುಬ್ಬಿಗಳು!

Published:
Updated:
ಶಾಲೆಗೆ ಬಂದ್ವು ಕಪ್ಪು ಗುಬ್ಬಿಗಳು!

ಹಾವೇರಿ ಜಿಲ್ಲೆಯ ಅರಳೇಶ್ವರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗಿಂತ ಮುಂಚೆಯೇ ಕಪ್ಪು ಗುಬ್ಬಿಗಳು ಹೋಗಿ ಶಾಲೆಯೊಳಗೆ ಕೂತುಬಿಟ್ಟಿವೆ. ಬರೀ ಕುಳಿತಿಲ್ಲ. ಮರಿ ಹಾಕಿ, ಸಂಸಾರವನ್ನೂ ಮಾಡುತ್ತಿವೆ..!

ನಿಜ, ಕಪ್ಪು ಗುಬ್ಬಿಗಳು ಶಾಲೆಗೆ ಸೇರಿವೆ. ಆದರೆ, ಪಾಠ ಕೇಳೋಕಲ್ಲ. ಚಾವಣಿಯ ಸಂದಿನಲ್ಲಿ ಗೂಡು ಕಟ್ಟಿ ಸಂಸಾರ ಮಾಡೋದಕ್ಕೆ. ಅರಳೇಶ್ವರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜೂನ್‌ನಿಂದ ಮಕ್ಕಳಿಗೆ ಶಾಲೆ ಆರಂಭವಾದರೆ, ಈ ಕಪ್ಪು ಗುಬ್ಬಿಗಳು ಮಾತ್ರ ಜನವರಿಯಿಂದಲೇ ಶಾಲೆಗೆ ಬರಲು ಆರಂಭಿಸುತ್ತವೆ. ಈ ವರ್ಷ ಗುಬ್ಬಿಗಳ ಸಂಖ್ಯೆ ಹೆಚ್ಚಾಗಿದ್ದು, ಶಾಲೆಯಲ್ಲಿ ಮಕ್ಕಳಿಗಿಂತ ಕಪ್ಪು ಗುಬ್ಬಿಗಳದ್ದೇ ಕಲರವ ಹೆಚ್ಚು.

ಶಾಲೆಯ ತಾರಸಿಗೆ ತಾಗಿಕೊಂಡಂತೆ ಈ ಕಪ್ಪು ಗುಬ್ಬಿಗಳು (steak–throated swallow –petrochelidon fluvicola) ಗೂಡು ಕಟ್ಟಿವೆ. ಕಿರುಬೆರಳು ಗಾತ್ರದಲ್ಲಿನ ಮುತ್ತಿನ ಮಣಿಗಳಂತಿರುವ ಮಣ್ಣಿನ ಉಂಡೆಗಳೊಂದಿಗೆ ‌ಕಟ್ಟಿಕೊಂಡಿರುವ ಈ ಚಿಕ್ಕ ಗೂಡುಗಳು, ಅದರೊಳಗಿಂತ ಇಣುಕು ಹಾಕುವ ಗುಬ್ಬಿಗಳನ್ನು ನೋಡುವುದೇ ಚಂದ. ‘ಕಪ್ಪು ಗುಬ್ಬಿ’ ಭಾರತ ಸೇರಿದಂತೆ ದಕ್ಷಿಣ ಏಷ್ಯಾ ಖಂಡದಲ್ಲಿ ಕಂಡು ಬರುತ್ತದೆ. ಅರಳೇಶ್ವರಕ್ಕೆ ಸಂತಾನೋತ್ಪತ್ತಿಗಾಗಿ ಬರುತ್ತವೆ. ದಕ್ಷಿಣ ಏಷ್ಯಾ ಭಾಗದಿಂದ ಇಲ್ಲಿಗೆ ವಲಸೆ ಬಂದಿರಬಹುದು’ ಎಂದು ಹಾನಗಲ್ ವಲಯ ಅರಣ್ಯಾಧಿಕಾರಿ ಶಿವರಾತ್ರೇಶ್ವರ ಸ್ವಾಮಿ ಅಭಿಪ್ರಾಯಪಡುತ್ತಾರೆ.

ಪ್ರತಿ ವರ್ಷ ಜನವರಿ ಆರಂಭಕ್ಕೆ ‌ಕಪ್ಪುಗುಬ್ಬಿಗಳು ಶಾಲೆಗೆ ಬರುತ್ತವೆ. ತಾರಸಿಯಲ್ಲಿ ಮೊದಲು ಗೂಡುಗಳನ್ನು ಕಟ್ಟುತ್ತವೆ. ಬಳಿಕ ಗೂಡಿನೊಳಗೆ ಮೊಟ್ಟೆಯಿಟ್ಟು, ಮರಿ ಮಾಡುತ್ತವೆ. ಮರಿಗಳಿಗೆ ಪ್ರತಿನಿತ್ಯ ಆಹಾರದ ಗುಟುಕು ನೀಡಿ, ಅವು ಬೆಳೆದು ಹಾರಾಡುವ ಶಕ್ತಿ ತಂದುಕೊಳ್ಳುವವರೆಗೂ ಪೋಷಿಸುತ್ತವೆ. ಈಗ ಜೂನ್ ತಿಂಗಳು. ಗೂಡಿನೊಳಗೆ ಮೊಟ್ಟೆಯೊಡೆದು ಕಣ್ಣು ಬಿಟ್ಟಿರುವ ಗುಬ್ಬಿ ಮರಿಗಳು ಆಗಾಗ್ಗೆ ಗೂಡಿನಿಂದ ಹೊರಗೆ ಇಣುಕು ಹಾಕುವ ದೃಶ್ಯ ನಯನ ಮನೋಹರ.

ಶಾಲೆಯ ಸಮೀಪದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿದೆ. ಪ್ರೌಢಶಾಲೆ ಇದೆ. ಈ ಶಾಲೆಗಳ ಸಂಕೀರ್ಣದ ಸುತ್ತ ಹೊಲಗಳಿವೆ. ಶಾಲೆ ಮುಂಭಾಗದ ರಸ್ತೆ ಎದುರು ಕೆರೆ ಇದೆ. ಆಹಾರ, ನೀರಿಗೆ ಉತ್ತಮ ತಾಣವಾಗಿರುವ ಕಾರಣ, ಗುಬ್ಬಿಗಳು ಈ ಶಾಲೆಯಲ್ಲೇ ಬಿಡಾರ ಹೂಡಿವೆ.

ಗುಬ್ಬಿಗಳ ಜೀವನ ಪ್ರಕ್ರಿಯೆ ಮಕ್ಕಳಿಗೆ ಪಾಠ. ಶಾಲಾ ಶಿಕ್ಷಕರಿಗೆ, ಅವು ಮಾಡುವ ಕಸವನ್ನು ತೆಗೆಯುವುದೇ ಕಾಯಕ. ಗುಬ್ಬಿಗಳಿದ್ದರೆ, ಹೊಲ ಗದ್ದೆಗಳಲ್ಲಿರುವ ಬೆಳೆಗೆ ಕೀಟ ಬರೋದಿಲ್ಲ. ಹಾಗಾಗಿ ಅವು, ನಮ್ಮ ಸಂಗಾತಿಗಳು ಎನ್ನುವುದು ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಕೆ.ಟಿ.ಕಲ್ಲಗೌಡ್ರ ಅಭಿಪ್ರಾಯ.

ಚಿತ್ರಗಳು: ನಾಗೇಶ ಬಾರ್ಕಿ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry