ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ₹19 ಲಕ್ಷ ಕಳವು

ಕಾರಿನಲ್ಲಿ ವಿವಿಧೆಡೆ ಸುತ್ತಾಡಿಸಿ ₹20 ಲಕ್ಷಕ್ಕೆ ಬೇಡಿಕೆ: ಯಾರಿಗೂ ವಿಷಯ ತಿಳಿಸದಂತೆ ಬೆದರಿಕೆ
Last Updated 1 ಜನವರಿ 2022, 19:29 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿದ ಐವರು ದುಷ್ಕರ್ಮಿಗಳು ₹19 ಲಕ್ಷ ನಗದು ಹಾಗೂ 500 ಗ್ರಾಂ ಚಿನ್ನದ ಆಭರಣಗಳನ್ನು ದೋಚಿದ್ದಾರೆ. ಬಳಿಕ ಮನೆಯಲ್ಲಿದ್ದ ಇಬ್ಬರನ್ನು ಕಾರಿನಲ್ಲಿ ಸುತ್ತಾಡಿಸಿ ₹20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಅಷ್ಟು ಮೊತ್ತ ಕೊಡಲು ಒಪ್ಪದಿದ್ದಾಗ ನಗರದ ಸ್ಥಳವೊಂದರಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಹಾಲಕ್ಷ್ಮಿಪುರ 2ನೇ ಹಂತದ 15ನೇ ಡಿ ಕ್ರಾಸ್‌ನಲ್ಲಿ ವಾಸವಿದ್ದ ಸಿವಿಲ್‌ ಎಂಜಿನಿಯರ್‌ಡಿ.ಸಾಮ್ಯಾ ನಾಯ್ಕ್‌ ಎಂಬುವರು ತಮ್ಮ ಮನೆಯಲ್ಲಿ ಕಳವು ಆಗಿರುವ ಬಗ್ಗೆ ದೂರು ನೀಡಿದ್ದಾರೆ. ಅದರ ಆಧಾರದಲ್ಲಿ ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.

‘ಡಿಸೆಂಬರ್‌ 31ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪತ್ನಿ ಜೊತೆ ಮನೆಯಲ್ಲಿದ್ದೆ. ಈ ವೇಳೆ ಐದು ಮಂದಿ ದುಷ್ಕರ್ಮಿಗಳು ತಾವು ತಿಪಟೂರು ಠಾಣೆಯ ಅಪರಾಧ ವಿಭಾಗದ ‍ಪೊಲೀಸರೆಂದು ಹೇಳಿಕೊಂಡು ಮನೆ ಬಳಿ ಬಂದಿದ್ದರು. ಈ ಪೈಕಿ ಮೂವರು ಮನೆಯೊಳಗೆ ಪ್ರವೇಶಿಸಿದರು. ನಿಮ್ಮ ಅಳಿಯ ಜಯನಾಯ್ಕ್‌ ಕೊಟ್ಟಿರುವ ಗನ್‌ ಕೊಡಿ ಎಂದು ಕೇಳಿದರು. ಆ ಪೈಕಿ ಒಬ್ಬ ಮೂರು ದಿನಗಳ ಹಿಂದೆ ನಾನು ನಿಮಗೆ ಹಣ ಮತ್ತು ಒಡವೆ ಕೊಟ್ಟಿದ್ದೆ. ಅದನ್ನು ಹಿಂತಿರುಗಿಸಿ ಎಂದು ತಿಳಿಸಿದ. ತಮ್ಮ ಬಳಿ ಇದ್ದ ಗನ್‌ ಹಾಗೂ ಚಾಕು ತೋರಿಸಿ ಬೆದರಿಸಿದ ಅವರು ನಮ್ಮ ಬಳಿ ಇದ್ದ ಮೊಬೈಲ್‌ಗಳನ್ನು ಕಿತ್ತುಕೊಂಡರು. ಅದರಿಂದಲೇ ಮಗನಿಗೆ ಕರೆ ಮಾಡಿ ಮನೆಗೆ ಕರೆಯಿಸಿಕೊಂಡರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಮಗ ಬಂದೊಡನೆಯೇ ಆತನನ್ನು ಮುಂದಿಟ್ಟುಕೊಂಡು ಸುಮಾರು ಎರಡು ಗಂಟೆ ಮನೆಯನ್ನೆಲ್ಲಾ ಹುಡುಕಾಡಿದರು. ಮಲಗುವ ಕೋಣೆಯ ಸೂಟ್‌ಕೇಸ್‌ನಲ್ಲಿದ್ದ ₹19 ಲಕ್ಷ ನಗದು ಪಡೆದರು. ಬೀರುವಿನಲ್ಲಿ ಇಟ್ಟಿದ್ದ ಅರ್ಧ ಕೆ.ಜಿ. ಚಿನ್ನದ ಆಭರಣಗಳನ್ನೂ ಎತ್ತಿಕೊಂಡರು. ಪೊಲೀಸ್‌ ಠಾಣೆಗೆ ಹೋಗೋಣ ಎಂದು ಹೇಳಿ ನನ್ನ ಜೊತೆ ಮಗನನ್ನೂ ಕರೆದುಕೊಂಡು ಹೊರಗೆ ಬಂದರು. ನಂತರ ನಮ್ಮದೇ ಕಾರಿನಲ್ಲಿ ಕೂರಿಸಿಕೊಂಡು ಗೊರಗುಂಟೆಪಾಳ್ಯ ಮಾರ್ಗವಾಗಿ ಬಿಇಎಲ್‌ ವೃತ್ತ, ಎಂ.ಎಸ್‌.ಪಾಳ್ಯ ಹೀಗೆ ವಿವಿಧೆಡೆ ಸುತ್ತಾಡಿಸಿದರು. ವೃತ್ತವೊಂದರ ಬಳಿ ಕಾರು ನಿಲ್ಲಿಸಿ ₹20 ಲಕ್ಷ ಕೊಟ್ಟರೆ ನಿಮ್ಮನ್ನು ಬಿಟ್ಟು ಕಳಿಸುತ್ತೇವೆ ಎಂದರು. ಅದಕ್ಕೆ ನಾನು ಒಪ್ಪಲಿಲ್ಲ. ಹೀಗಾಗಿ ಅಲ್ಲಿಂದ ಜಾಲಹಳ್ಳಿಯ ಗಂಗಮ್ಮ ವೃತ್ತಕ್ಕೆ ಕರೆದುಕೊಂಡು ಬಂದರು ಎಂದೂ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ನಿಮ್ಮ ಹಣ ಹಾಗೂ ಆಭರಣಗಳನ್ನು ಜಪ್ತಿ ಮಾಡಿದ್ದೇವೆ. ನಾವು ಕರೆದಾಗ ಠಾಣೆಗೆ ಬರಬೇಕು ಎಂದು ಹೇಳಿ ನಮ್ಮನ್ನು ಕಾರಿನಲ್ಲೇ ಬಿಟ್ಟ ಅವರು ಆಟೊ ಹಿಡಿದು ಪರಾರಿಯಾದರು. ಸಂಜೆ ಮತ್ತೆ ಕರೆ ಮಾಡಿ ಮಗ ಹಾಗೂ ನನ್ನ ಅಣ್ಣನ ಮಗ ರೋಹನ್‌ನನ್ನು ಆರ್‌.ಜಿ.ರಾಯಲ್‌ ಹೋಟೆಲ್‌ ಬಳಿ ಕರೆಸಿಕೊಂಡರು. ಅಲ್ಲಿ ಇಬ್ಬರ ಮೇಲೂ ಹಲ್ಲೆ ನಡೆಸಿದ್ದರು. ಈ ವಿಷಯ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದರು ಎಂದೂ ವಿವರಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT