ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾ.ಪಂ. ಇಒ ಹುದ್ದೆಯ ಆಕರ್ಷಣೆ! ಪಶು ವೈದ್ಯಾಧಿಕಾರಿಗಳಿಗೆ ಅನ್ಯ ಇಲಾಖೆಯ ಒಲವು

ಪರಿಷತ್‌ನಲ್ಲಿ ಚರ್ಚೆ
Last Updated 9 ಮಾರ್ಚ್ 2022, 18:21 IST
ಅಕ್ಷರ ಗಾತ್ರ

ಬೆಂಗಳೂರು: ‘ಪಶುವೈದ್ಯಾಧಿಕಾರಿಗಳಿಗೆ ಮಾತೃಇಲಾಖೆಗಿಂತಲೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಅನ್ಯ ಇಲಾಖೆಯಲ್ಲಿನ ಹುದ್ದೆಗಳು ಹೆಚ್ಚು ಆಕರ್ಷಕವಾಗಿದೆ’ ಎಂದು ವಿಧಾನಪರಿಷತ್‌ನಲ್ಲಿ ಸದಸ್ಯರು ಟೀಕಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಸುನಿಲ್‌ ವಲ್ಯಾಪುರೆ, ‘ಪಶುವೈದ್ಯಾಧಿಕಾರಿಗಳು ಒಳ ಮಾರ್ಗ ಕಂಡುಕೊಂಡಿದ್ದಾರೆ. ಪಶುವೈದ್ಯಕೀಯ ಇಲಾಖೆಗಿಂತ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಇಲಾಖೆಗೆ ನಿಯೋಜನೆ ಮೇಲೆ ತೆರಳುತ್ತಿದ್ದಾರೆ. ಗೋಮಾತೆ ರಕ್ಷಣೆಯ ಕಾರ್ಯಕ್ಕೆ ಪಶುವೈದ್ಯಾಧಿಕಾರಿಗಳು ಇಲ್ಲದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ, ‘ಪಶುವೈದ್ಯಕೀಯ ಸೇವಾ ಇಲಾಖೆಯ 131 ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದರು. ಇವರಲ್ಲಿ ನಾಲ್ವರು ಪಶುವೈದ್ಯಾಧಿಕಾರಿಗಳು ಮತ್ತು ಮೂವರು ಸಿಬ್ಬಂದಿ ಹೊರತುಪಡಿಸಿ ಉಳಿದವರೆಲ್ಲರನ್ನು ಮಾತೃ ಇಲಾಖೆಗೆ ಕರೆಯಿಸಿಕೊಳ್ಳಲಾಗಿದೆ. ಉಳಿದವರಿಗೂ ನೋಟಿಸ್‌ ನೀಡಲಾಗಿದ್ದು, ಮಾತೃ ಇಲಾಖೆಗೆ ಮರಳದಿದ್ದರೆ ಅಮಾನತು ಮಾಡಲು ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಇಲಾಖೆಯಲ್ಲಿ ಪಶುವೈದ್ಯಾಧಿಕಾರಿ, ಹಿರಿಯ ಪಶುವೈದ್ಯಾಧಿಕಾರಿ, ಮುಖ್ಯ ಪಶುವೈದ್ಯಾಧಿಕಾರಿ, ಹಿರಿಯ ಪಶುವೈದ್ಯಕೀಯ ಪರೀಕ್ಷಕರು, ಪಶುವೈದ್ಯಕೀಯ ಪರೀಕ್ಷಕರು ಮತ್ತು ಕಿರಿಯ ಪಶುವೈದ್ಯಕೀಯ ಪರೀಕ್ಷಕರ ಒಟ್ಟು 3243 ಹುದ್ದೆಗಳು ಖಾಲಿ ಉಳಿದಿವೆ. 400 ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆ ಅನುಮತಿ ನೀಡಿದ್ದು, ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ಅಥಣಿ ಮತ್ತು ಪುತ್ತೂರಿನಲ್ಲಿ ಹೊಸ ಪಶುವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಮೂಲಸೌಕರ್ಯಗಳನ್ನು ಕಲ್ಪಿಸಿ, ವಿವಿಧ ಹುದ್ದೆಗಳನ್ನು ಭರ್ತಿ ಮಾಡಿದ ಬಳಿಕ ಭಾರತೀಯ ಪಶುವೈದ್ಯಕೀಯ ಪರಿಷತ್‌ ತಂಡ ಪರಿಶೀಲನೆ ನಡೆಸಲಿದೆ. ಪರಿಷತ್‌ ಅನುಮತಿ ನೀಡಿದ ಬಳಿಕ ಈ ಕಾಲೇಜುಗಳು ಆರಂಭವಾಗಲಿವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT