ಬುಧವಾರ, ಜುಲೈ 28, 2021
25 °C
ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷರಿಂದ ಲಂಚದ ಆರೋಪ

ಸಿಎಂ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಎಸಿಬಿಗೆ ಮತ್ತೊಂದು ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಹುದ್ದೆ ನೀಡಲು ತಮ್ಮ ಬಳಿ ₹ 16 ಕೋಟಿ ಲಂಚಕ್ಕೆ ಬೇಡಿಕೆ ಇರಿಸಿ, ₹ 9.75 ಕೋಟಿ ಪಡೆದಿದ್ದರು ಎಂದು ಮಂಡಳಿಯ ಮಾಜಿ ಅಧ್ಯಕ್ಷ ಡಾ.ಎಂ. ಸುಧೀಂದ್ರ ರಾವ್‌ ಮಾಡಿರುವ ಆರೋಪದ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಇತರರ ವಿರುದ್ಧ ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಸಲ್ಲಿಸಿದ್ದಾರೆ.

ಸುದ್ದಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸುಧೀಂದ್ರ ರಾವ್‌ ಮಾಡಿರುವ ಆರೋಪಗಳನ್ನು ಆಧರಿಸಿ ಅಬ್ರಹಾಂ ಬುಧವಾರ ಎಸಿಬಿಗೆ ದೂರು ನೀಡಿದ್ದಾರೆ.

ಯಡಿಯೂರಪ್ಪ, ಸುಧೀಂದ್ರ ರಾವ್‌, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರೂ ಆಗಿರುವ ಯಡಿಯೂರಪ್ಪ ಅವರ ಸಂಬಂಧಿ ಜಿ. ಮರಿಸ್ವಾಮಿ, ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ, ಮೊಮ್ಮಗ ಶಶಿಧರ ಮರಡಿ ಮತ್ತು ಅಳಿಯ ಸಂಜಯ್‌ ಶ್ರೀ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

‘ಸುಧೀಂದ್ರ ರಾವ್‌ ಅವರು ಕೇಂದ್ರ ಪರಿಸರ ಸಚಿವಾಲಯ ನಿಗದಿಪಡಿಸಿದ್ದ ಅರ್ಹತೆಗಳನ್ನು ಹೊಂದಿರದಿದ್ದರೂ ಅವರನ್ನು ಮಾಲಿನ ನಿಯಂತ್ರಣ ಮಂಡಳಿ ಅಧ್ಯಕ್ಷರ ಹುದ್ದೆಗೆ ನೇಮಕ ಮಾಡಲಾಗಿತ್ತು. ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಮತ್ತು ಅವರ ಕುಟುಂಬದ ಸದಸ್ಯರು ಸುಧೀಂದ್ರ ರಾವ್‌ ಅವರಿಂದ 60 ಖಾಸಗಿ ಕಂಪನಿಗಳಿಗೆ ನಿರಾಕ್ಷೇಪಣಾ
ಪತ್ರಗಳನ್ನು ಕೊಡಿಸಿ ₹ 100 ಕೋಟಿಯಿಂದ ₹ 120 ಕೋಟಿಯಷ್ಟು ಹಣ ಸಂಗ್ರಹಿಸಿದ್ದಾರೆ.

ಈ ಕೃತ್ಯದಲ್ಲಿ ಶಶಿಧರ ಮರಡಿ ಮತ್ತು ಸಂಜಯ್ ಶ್ರೀ  ಕೂಡ ಭಾಗಿಯಾಗಿದ್ದಾರೆ. ಸುಧೀಂದ್ರ ರಾವ್‌ ಅವರೇ ತಪ್ಪೊಪ್ಪಿಕೊಂಡಿದ್ದಾರೆ’ ಎಂಬ ಆರೋಪ ದೂರಿನಲ್ಲಿದೆ.

‘ಅಧ್ಯಕ್ಷ ಹುದ್ದೆ ನೀಡಲು ₹ 16 ಕೋಟಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಆದರೆ, 9.75 ಕೋಟಿ ಮಾತ್ರ ಪಾವತಿಸಲು ಸಾಧ್ಯವಾಗಿತ್ತು. ಉಳಿದ ಮೊತ್ತ ನೀಡುವಂತೆ ಮರಿಸ್ವಾಮಿ ಅವರ ಮೂಲಕ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪವನ್ನೂ ಸುಧೀಂದ್ರ ರಾವ್‌ ಮಾಡಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಅಬ್ರಹಾಂ ಆಗ್ರಹಿಸಿದ್ದಾರೆ.

ಅರ್ಹತೆ ಇಲ್ಲದಿದ್ದರೂ ಸುಧೀಂದ್ರ ರಾವ್‌ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಹುದ್ದೆಗೆ ನೇಮಿಸಲು ₹ 16 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು, ₹ 9.75 ಕೋಟಿ ಲಂಚ ಪಡೆದಿರುವುದು, 60 ಕಡತಗಳಿಗೆ ಸಹಿ ಹಾಕುವಂತೆ ಒತ್ತಡ ಹೇರಿರುವುದು ಮತ್ತು ಅದನ್ನು ಬಳಸಿಕೊಂಡು ಹಣ ಸಂಗ್ರಹಿಸಿರುವ ಆರೋಪಗಳ ಕುರಿತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು