ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿ ಧಾನ್ಯಗಳಿಗೂ ಬೆಂಬಲ ಬೆಲೆ

ಕೃಷಿ ಬೆಲೆ ಆಯೋಗದಿಂದ ಶಿಫಾರಸು
Last Updated 23 ಫೆಬ್ರುವರಿ 2021, 16:34 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸಿರಿ ಧಾನ್ಯಗಳಿಗೂ ಬೆಂಬಲ ಬೆಲೆ ಘೋಷಿಸಬೇಕು. ಉತ್ಪಾದನಾ ವೆಚ್ಚದ ಆಧಾರದಲ್ಲಿ ಪ್ರತಿ ಕ್ವಿಂಟಲ್‌ಗೆ ₹ 4,500ದಿಂದ ₹ 5,000 ದರದಲ್ಲಿ ಸಿರಿ ಧಾನ್ಯಗಳನ್ನು ಸರ್ಕಾರ ಖರೀದಿ ಮಾಡಬೇಕು ಎಂದು ರಾಜ್ಯ ಕೃಷಿ ಬೆಲೆ ಆಯೋಗ ಶಿಫಾರಸು ಮಾಡಿದೆ.

ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗೆ ರಾಜ್ಯಕ್ಕೆ ಪ್ರತ್ಯೇಕವಾದ ಸಮಗ್ರ ಖರೀದಿ ನೀತಿ ರೂಪಿಸುವುದು ಮತ್ತು ಸಿರಿ ಧಾನ್ಯಗಳನ್ನು ಬೆಂಬಲ ಬೆಲೆಯಡಿ ಖರೀದಿಸುವ ಶಿಫಾರಸುಗಳುಳ್ಳ ಎರಡು ಪ್ರತ್ಯೇಕ ವರದಿಗಳನ್ನು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಮಂಗಳವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಲ್ಲಿಸಿದರು.

ರಾಜ್ಯದಲ್ಲಿ 61,000 ಹೆಕ್ಟೇರ್‌ ಪ್ರದೇಶದಲ್ಲಿ ಸುಮಾರು 42,000 ಟನ್‌ನಷ್ಟು ನವಣೆ, ಸಾಮೆ, ಊದಲು, ಬರಗು, ಹಾರಕ, ಕೊರಲೆ ಮತ್ತಿತರ ಸಿರಿ ಧಾನ್ಯಗಳನ್ನು ಬೆಳೆಯಲಾಗುತ್ತಿದೆ. ರಾಜ್ಯ ಸರ್ಕಾರ ಈ ಧಾನ್ಯಗಳನ್ನು ಬೆಂಬಲ ಬೆಲೆಯಡಿ ಖರೀದಿಸಿ ಶಾಲಾ ಮಕ್ಕಳ ಬಿಸಿಯೂಟ, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ವಿತರಿಸಬೇಕು. ಆ ಮೂಲಕ ಸಿರಿ ಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ನೀಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಖರೀದಿ ನೀತಿಗೆ ಶಿಫಾರಸು: ರಾಜ್ಯದ ಪಡಿತರ ಚೀಟಿದಾರರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ವಿತರಿಸಲು ಅಗತ್ಯವಿರುವ ಆಹಾರ ಧಾನ್ಯಗಳನ್ನು ರಾಜ್ಯದ ರೈತರಿಂದಲೇ ಖರೀದಿಸಲು ಅವಕಾಶ ಕಲ್ಪಿಸುವ ಸಮಗ್ರ ಖರೀದಿ ನೀತಿ ರೂಪಿಸಬೇಕು ಎಂಬ ಶಿಫಾರಸನ್ನೂ ಆಯೋಗ ಮಾಡಿದೆ.

ಆಹಾರ ಭದ್ರತಾ ಕಾಯ್ದೆಯಡಿ ಆಹಾರ ಧಾನ್ಯ ಖರೀದಿಸಿ, ವಿತರಿಸಲು ಕೇಂದ್ರ ಸರ್ಕಾರ ವಾರ್ಷಿಕ ₹ 12,000 ಕೋಟಿ ಭರಿಸುತ್ತಿದೆ. ಈ ಉದ್ದೇಶಕ್ಕೆ ರಾಜ್ಯದಲ್ಲೇ ಆಹಾರ ಧಾನ್ಯ ಖರೀದಿಸುವುದರಿಂದ ರೈತರಿಗೆ ಬೆಲೆ ಖಾತರಿ ಮತ್ತು ಉತ್ತಮ ಆದಾಯ ದೊರಕುತ್ತದೆ. ಶ್ರಮಿಕರು, ಸಂಸ್ಕರಣೆ ಮಾಡುವವರು ಮತ್ತು ಸಾಗಾಣಿಕೆದಾರರಿಗೂ ಉದ್ಯೋಗಗಳು ದೊರಕುತ್ತವೆ ಎಂದು ಆಯೋಗ ವರದಿಯಲ್ಲಿ ಹೇಳಿದೆ.

ಕೊಯಿಲಿನ ಅವಧಿಯಲ್ಲಿ 5 ಕಿ.ಮೀ. ಅಂತರದಲ್ಲೇ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಪ್ರಾಥಮಿಕ ಕೃಷಿ ಸಹಕಾರ ಸಂಘಗಳು, ಕೃಷಿ ಉತ್ಪನ್ನ ಮಾರುಕಟ್ಟೆಗಳು, ತಾಲ್ಲೂಕು ಸಹಕಾರ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು, ರೈತ ಉತ್ಪಾದಕರ ಸಂಸ್ಥೆಗಳು ಮತ್ತು ಸ್ವಸಹಾಯ ಗುಂಪುಗಳ ಮೂಲಕ ಖರೀದಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ರೈತರಿಂದ ಖರೀದಿಸುವ ಕೃಷಿ ಉತ್ಪನ್ನದ ಮಿತಿ ಸಡಿಲಿಸಬೇಕು ಮತ್ತು ಆವರ್ತ ನಿಧಿ ಮೊತ್ತವನ್ನೂ ಹೆಚ್ಚಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT