ಭಾನುವಾರ, ಜೂನ್ 26, 2022
21 °C

ಹುಬ್ಬಳ್ಳಿ ಅಪಘಾತ: ಮೃತರ ಕುಟುಂಬಕ್ಕೆ ತಲಾ ₹ 2 ಲಕ್ಷ ಪರಿಹಾರ- ಪ್ರಧಾನಿ ಸಚಿವಾಲಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹುಬ್ಬಳ್ಳಿಯಲ್ಲಿ ಇಂದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ₹ 2 ಲಕ್ಷ ಪರಿಹಾರ ಘೋಷಿಸಲಾಗಿದೆ. ಗಾಯಾಳುಗಳಿಗೆ ತಲಾ ₹ 50 ಸಾವಿರ ಪರಿಹಾರ ಘೋಷಿಸಲಾಗಿದೆ.

ಇದೇವೇಳೆ, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಹುಬ್ಬಳ್ಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಹಲವರು ಸಾವಿಗೀಡಾಗಿರುವುದು ಅತ್ಯಂತ ನೋವು ತಂದಿದೆ. ಅವರ ಕುಟುಂಬದ ನೋವಿನಲ್ಲಿ ನಾನು ಭಾಗಿ. ಗಾಯಗೊಂಡವರ ಶೀಘ್ರ ಚೇತರಿಕೆಗೆ ಹಾರೈಸುತ್ತೇನೆ ಎಂದು ಹೇಳಿದ್ದಾರೆ.

 

An ex-gratia of Rs. 2 lakh each from PMNRF would be given to the next of kin of those who lost their lives due to the mishap in Hubli. The injured would be given Rs. 50,000: PM @narendramodi

— PMO India (@PMOIndia) May 24, 2022

ಹುಬ್ಬಳ್ಳಿ ನಗರದ ಹೊರವಲಯದ ತಾರಿಹಾಳ ಬೈಪಾಸ್‌ನ ಧಾರಾವತಿ ದೇವಸ್ಥಾನದ ಬಳಿ ಸೋಮವಾರ ರಾತ್ರಿ ಸಂಭವಿಸಿದ ಬಸ್ ಮತ್ತು ಲಾರಿ ನಡುವಿನ ಅಪಘಾತದಲ್ಲಿ 8 ಮಂದಿ ಮೃತಪಟ್ಟಿದ್ದರು.

ನ್ಯಾಷನಲ್‌ ಟ್ರಾವೆಲ್ಸ್‌ ಬಸ್‌ ಚಾಲಕರಾದ ಬೆಂಗಳೂರಿನ ಬ್ಯಾಡರಹಳ್ಳಿಯ ನಾಗರಾಜ ಆಚಾರ್ (56), ಅತಾವುಲ್ಲಾ ಖಾನ್ (40), ಇಚಲಕರಂಜಿಯ ಬಾಬಾಸೋ ಚೌಗಲೇ (59), ಮಸ್ತಾನ್, ಮೈಸೂರಿನ ಮೊಹಮ್ಮದ್ ದಿಯಾನ್ ಬೇಗ್ (17), ಮಹಾರಾಷ್ಟ್ರದ ಕೊಲ್ಹಾಪುರದ ಅಕ್ಷಯ ದವರ (28), ಅಕಿಫ್ (40) ಹಾಗೂ ಅಫಾಕ್( 40) ಮೃತರು.

ರಾತ್ರಿ 11.40ರ ಸುಮಾರಿಗೆ ಘಟನೆ ನಡೆದಿದೆ. ಮಹಾರಾಷ್ಟ್ರದ ಕೊಲ್ಲಾಪುರದ ಇಚ್ಚಲಕರಂಜಿಯಿಂದ ಬೆಂಗಳೂರಿಗೆ ಬಸ್ ಹೊರಟಿತ್ತು. ಕಿರಿದಾದ ಬೈಪಾಸ್‌ ರಸ್ತೆಯಲ್ಲಿ ಬಸ್‌ ಚಾಲಕ ಟ್ರಾಕ್ಟರ್‌ ಹಿಂದಿಕ್ಕಲು ಮುಂದಾಗಿದ್ದಾನೆ. ಆಗ ಎದುರಿನಿಂದ ಬಂದ ಲಾರಿ ಮತ್ತು ಬಸ್ ಮಧ್ಯೆ ಮುಖಾಮುಖಿ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಕಿಮ್ಸ್ ಆಸ್ಪತ್ರೆಯಲ್ಲಿ ನಸುಕಿನಲ್ಲಿ ಕೊನೆಯುಸಿರೆಳೆದಿದ್ದಾರೆ.

21 ಮಂದಿಗೆ ಗಾಯ: ಘಟನೆಯಲ್ಲಿ ಸಹನಾ ಬಸವರಾಜ, ಬಾಬಾಸಾಬ ಚೌಗ್ಲಿ, ಓಂಕಾರ ಸುತಾರ, ಸಂಜಯ್ ಫಿಶೆ, ಚಂದ್ರಕಾಂತ ಪಾಂಡುರಂಗ, ಸುಲೋಚನ ಮಧುಕರ್, ತಾನಾಜೀ ಸೋಮಕಲ್, ಅನಿತಾ ರಾವುತ್, ಅನಿತಾ ಸಂಕಲ್, ಶುಭಂ ಚೌಗ್ಲಿ, ಮೊಹಮ್ಮದ್ ಫಯಾಜ್, ಸುಪ್ರಿಯಾ ಪಾಟೀಲ್, ಸಿಮ್ರಾನ್ ಪ್ರತಿಕ್, ರಾಜಾ ಫ್ರಾನ್ಸಿಸ್, ಜ್ಯೋತಿ ರಾಯಿಜನ್, ದಿಗ್ವಿಜಯ ಬಾಪೂಸೊ, ಪ್ರತೀಕ್ಷಾ ರಮೇಶ್, ಕೃಷ್ಣ ಕಲ್ಲೂರ, ಸರೋಜ ಸತೀಶ್, ಮಹೇಂದ್ರ ರಾಯ್ಸನ್, ತೇಕ್ಸಿಂಗ್ ಹಾಗೂ ಸಂಜಯ್ ಶಿಂಧೆ ಗಾಯಗೊಂಡಿದ್ದಾರೆ.

ಗಾಯಾಳುಗಳ ಪೈಕಿ ಮಹಾರಾಷ್ಟ್ರದ 19 ಪ್ರಯಾಣಿಕರು, ನೇಪಾಳದ 4, ಕರ್ನಾಟಕದ 4 ಹಾಗೂ ತಮಿಳುನಾಡಿನ ಒಬ್ಬರು ಪ್ರಯಾಣಿಕರಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು