ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ಇನ್ನೊಂದು ಮುಖವೇ ಭ್ರಷ್ಟಾಚಾರ: ನಳಿನ್‌ಕುಮಾರ್‌ ಕಟೀಲ್‌

‘ಕೈ’ ಮುಖಂಡರ ವಿರುದ್ಧ ಮತ್ತೆ ಗುಡುಗಿದ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌
Last Updated 24 ಅಕ್ಟೋಬರ್ 2020, 13:09 IST
ಅಕ್ಷರ ಗಾತ್ರ

ಮಡಿಕೇರಿ: ‘ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಶೇ 80ರಷ್ಟು ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಗೆಲುವು ಸಾಧಿಸುವಂತೆ ನಮ್ಮ ಪಕ್ಷದ ಸಂಘಟನೆ ಬಲಪಡಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದರು.

ನಗರದ ಕ್ರಿಸ್ಟಲ್‌ ಹಾಲ್‌ನಲ್ಲಿ ಶನಿವಾರ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಗ್ರಾಮ ಪಂಚಾಯಿತಿ ಚುನಾವಣೆಯು ನಾಯಕತ್ವ ಬೆಳೆಸುವ ಚುನಾವಣೆ. ಶಾಸಕರು, ಜಿಲ್ಲಾ ಘಟಕದ ಪದಾಧಿಕಾರಿಗಳು ಈ ಚುನಾವಣೆಯಲ್ಲಿ ಒಂದಾಗಿ ಕೆಲಸ ಮಾಡಬೇಕಿದೆ’ ಎಂದು ನಳಿನ್‌ ಹೇಳಿದರು.

‘ರಾಜ್ಯದಲ್ಲಿ ನೆರೆ ಹಾನಿ ಹಾಗೂ ಕೋವಿಡ್‌ ಸಮಸ್ಯೆಗಳ ನಡುವೆ ಅಭಿವೃದ್ಧಿ ಕೆಲಸಗಳು ನಿಂತಿಲ್ಲ. ನಿರಂತರವಾಗಿ ನಡೆಯುತ್ತಿವೆ. ಜನಪರ ಕೆಲಸಗಳನ್ನು ಜನರಿಗೆ ತಿಳಿಸಬೇಕು. ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಮೂಲಕ ಮುಂದಿನ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಲ್ಲೂ ನಮ್ಮದೇ ಪಕ್ಷವು ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಬೇಕು’ ಎಂದು ರಾಜ್ಯ ಅಧ್ಯಕ್ಷರು ಕರೆ ನೀಡಿದರು.

‘ಪ್ರತಿ ತಿಂಗಳು ಸಭೆ ನಡೆಸಬೇಕು. ಸಭೆಗೆ ಗೈರಾಗುವ ಪದಾಧಿಕಾರಿಗಳನ್ನು ಆ ಹುದ್ದೆಯಿಂದ ಕೈಬಿಡಲು ಸೂಚನೆ ನೀಡಲಾಗಿದೆ. ಪಂಚಾಯಿತಿ ಚುನಾವಣೆಯಿಂದ ಲೋಕಸಭೆ ಚುನಾವಣೆ ತನಕವೂ ನಮಗೆ ಸವಾಲೇ’ ಎಂದು ನಳಿನ್‌ ಹೇಳಿದರು.

ಕಾಂಗ್ರೆಸ್‌ ಆಂತರಿಕ ಕಚ್ಚಾಟ:‘ರಾಜ್ಯದಲ್ಲಿ ಕಾಂಗ್ರೆಸ್‌ ಸ್ಥಿತಿ ಹೀನಾಯವಾಗಿದೆ. ಕಾಂಗ್ರೆಸ್‌ನಲ್ಲಿ ನಾಯಕತ್ವದ ಹೋರಾಟ ನಡೆಯುತ್ತಿದೆ. ಬಂಡೆ ದೊಡ್ಡದೋ, ಹುಲಿ ದೊಡ್ಡದೋ ಎಂಬ ಹೋರಾಟ ನಡೆಯುತ್ತಿದೆ. ಇದರ ಪರಿಣಾಮವಾಗಿ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಬೆಂಕಿ ಬಿದ್ದಿತ್ತು. ಸಂಪತ್‌ ರಾಜ್‌ ಅವರು ಡಿ.ಕೆ.ಶಿವಕುಮಾರ್‌ ಬೆಂಬಲಿಗ. ಶಾಸಕ ಅಖಂಡ ಶ್ರೀನಿವಾಸ್‌ ಅವರು ಸಿದ್ದರಾಮಯ್ಯ ಬೆಂಬಲಿಗ. ಡಿ.ಜೆ ಹಳ್ಳಿ ಪ್ರಕರಣ ಸಂಬಂಧ ಸಂಪತ್‌ರಾಜ್‌ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಆತ, ಆರೋಪಿಯೆಂದು ಬಿಜೆಪಿ ಹೇಳುತ್ತಿಲ್ಲ. ಬದಲಿಗೆ ಪೊಲೀಸ್‌ ತನಿಖಾ ವರದಿಗಳು ಸಾಬೀತು ಪಡಿಸುತ್ತಿವೆ’ ಎಂದು ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

‘ಅಧಿಕಾರಕ್ಕಾಗಿ ಸಂಪತ್‌ ರಾಜ್‌ ಎಸ್‌ಡಿಪಿಐ ಜೊತೆಗೆ ಕೈಜೋಡಿಸಿದ್ದಾರೆ. ಆದರೆ, ಕಾಂಗ್ರೆಸ್‌ ನಾಯಕರು ಮೌನವಾಗಿದ್ದಾರೆ. ಇದು ಏನು ತೋರಿಸುತ್ತದೆ’ ಎಂದು ಪ್ರಶ್ನಿಸಿದರು.

ಅಮೆರಿಕದಲ್ಲಿ ಮೋದಿ ತಾರಾ ಪ್ರಚಾರಕ:ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಕಾವು ಜೋರಾಗಿದೆ. ಅಲ್ಲಿ ತಾರಾ ಪ್ರಚಾರಕ ಮೋದಿಯೇ ಹೊರತು ಡೊನಾಲ್ಡ್‌ ಟ್ರಂಪ್‌ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವನಾಯಕರಾಗಿ ಬೆಳೆದಿದ್ದಾರೆ ಎಂದು ಹೇಳಿದರು.

‘ಹಿಂದಿನ ಪ್ರಧಾನಿ ಅಭ್ಯರ್ಥಿಗಳು ನನಗೆ ಅವಕಾಶ ನೀಡಿದರೆ ಅಮೆರಿಕ, ರಷ್ಯಾ ಮಾದರಿಯಲ್ಲಿ ಭಾರತ ನಿರ್ಮಿಸುತ್ತೇನೆ ಎನ್ನುತ್ತಿದ್ದರು. ಈಗ ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳು, ಭಾರತದಂತೆ ನಮ್ಮ ದೇಶ ಮಾಡುತ್ತೇನೆ ಎಂದು ಭರವಸೆ ನೀಡುತ್ತಿದ್ದಾರೆ. ವಿದೇಶಗಳು ಭಾರತದತ್ತ ನೋಡುತ್ತಿವೆ. ಅದಕ್ಕೆ ಭಾರತೀಯ ಜನತಾ ಪಕ್ಷದ ಆಡಳಿತವೇ ಕಾರಣ’ ಎಂದು ಹೊಗಳಿದರು.

‘ಕಾಂಗ್ರೆಸ್‌ನ ಇನ್ನೊಂದು ಮುಖವೇ ಭ್ರಷ್ಟಾಚಾರ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಕಾಂಗ್ರೆಸ್‌ ಮುಕ್ತ ಭಾರತ ಮಾಡುತ್ತೇನೆಂದು. ನಮ್ಮ ಸೈನ್ಯದ ಶಕ್ತಿಯನ್ನು ವಿದೇಶಕ್ಕೆ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ’ ಎಂದು ಶ್ಲಾಘಿಸಿದರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಮಾತನಾಡಿ, ನಳಿನ್‌ಕುಮಾರ್ ಅವರು ಕಾಲಿಗೆ ಚಕ್ರಕಟ್ಟಿಕೊಂಡವರಂತೆಯೇ ರಾಜ್ಯದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಪ್ರಪಂಚದಲ್ಲಿಯೇ ಬಿಜೆಪಿ ಹೆಚ್ಚಿನ ಸದಸ್ಯರನ್ನು ಒಳಗೊಂಡಿರುವ ಪಕ್ಷವೆಂದರೆ ಬಿಜೆಪಿ ಎಂದು ಹೇಳಿದರು.

ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370 ವಿಧಿಯನ್ನು ರದ್ದು ಮಾಡಿದ್ದು ಕೇಂದ್ರ ಸರ್ಕಾರದ ಸಾಧನೆ. ಹಿಂದೆ ಆ ರಾಜ್ಯಕ್ಕೆ ಎಷ್ಟು ಅನುದಾನ ಬಿಡುಗಡೆಯಾದರೂ ಲೆಕ್ಕವನ್ನೇ ಕೇಳದ ಸ್ಥಿತಿಯಿತ್ತು ಎಂದು ನುಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಬಿನ್‌ ದೇವಯ್ಯ ಮಾತನಾಡಿ, ಲಾಕ್‌ಡೌನ್‌ ಹಾಗೂ ಲಾಕ್‌ಡೌನ್‌ ತೆರವಾದ ಬಳಿಕ ಬಜೆಪಿ ಜನಪರ ಕೆಲಸ ಮಾಡಿದೆ. ಜಿಲ್ಲೆಯಲ್ಲಿ 7,796 ಆಹಾರ ಪೊಟ್ಟಣ, 15,892 ಆಹಾರ ಕಿಟ್‌ ವಿತರಿಸಲಾಗಿದೆ. ಪಿ.ಎಂ ಕೇರ್‌ಗೆ ₹ 32 ಲಕ್ಷ, ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 32 ಲಕ್ಷ ದೇಣಿಗೆ ಸಂಗ್ರಹಿಸಿ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಪಿ.ಸುನಿಲ್‌ ಸುಬ್ರಮಣಿ, ಮಂಗಳೂರು ವಿಭಾಗದ ಉಸ್ತುವಾರಿ ಉದಯಕುಮಾರ್‌ ಶೆಟ್ಟಿ, ಮುಖಂಡ ರಾಜೇಂದ್ರ, ಗೋಪಾಲಕೃಷ್ಣ ನೇರಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್‌, ಮಾಜಿ ಜಿಲ್ಲಾ ಅಧ್ಯಕ್ಷ ಬಿ.ಬಿ.ಭಾರತೀಶ್‌, ಕೃಷಿ ಮೋರ್ಚಾದ ಕಾರ್ಯದರ್ಶಿ ಡಾ.ಬಿ.ಸಿ.ನವೀನ್‌ಕುಮಾರ್‌, ಎಸ್‌ಟಿ ಮೋರ್ಚಾದ ಕಾರ್ಯದರ್ಶಿ ಮಂಜುಳಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT